ಅಮೃತಸರ: ಪಂಜಾಬ್‌ನಲ್ಲಿ ಖಲಿಸ್ತಾನಿಗಳ ಹೋರಾಟದಿಂದಾಗಿ ಹಿಂಸಾಚಾರ, ಖಲಿಸ್ತಾನಿ ನಾಯಕ ಅಮೃತ್‌ಪಾಲ್ ಸಿಂಗ್ ಕೃತ್ಯಗಳು ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ ಅಮೃತಸರದಲ್ಲಿರುವ ಸ್ವರ್ಣಮಂದಿರ (Golden Temple) ಪ್ರವೇಶಿಸಲು ಯುವತಿಯನ್ನು ತಡೆಯಲಾಗಿದೆ. ಅದರಲ್ಲೂ, ಮುಖದ ಮೇಲೆ ಭಾರತ ಧ್ವಜದ ಚಿತ್ರ ಇದ್ದ ಕಾರಣ ಆಕೆಯನ್ನು ತಡೆದಿರುವುದು ಸುದ್ದಿಯಾಗಿದೆ. ಈ ವಿಡಿಯೊ ಈಗ ವೈರಲ್ ಆಗಿದೆ.
ಯುವತಿಯೊಬ್ಬಳು ಮುಖದ ಮೇಲೆ ತಿರಂಗಾ ಚಿತ್ರ ಬಿಡಿಸಿಕೊಂಡು ಸ್ವರ್ಣಮಂದಿರಕ್ಕೆ ತೆರಳಿದ್ದಾರೆ. ಇನ್ನೇನು ಸ್ವರ್ಣಮಂದಿರ ಪ್ರವೇಶಿಸಬೇಕು, ಅಷ್ಟರಲ್ಲಿಯೇ ಶಿರೋಮಣಿ ಗುರುದ್ವಾರ ಪರ್‌ಬಂಧಕ್ ಸಮಿತಿಯ ಅಧಿಕಾರಿಯೊಬರು ಯುವತಿಯನ್ನು ತಡೆದಿದ್ದಾರೆ. ಅಲ್ಲದೆ, “ಇದು ಪಂಜಾಬ್, ಭಾರತ ಅಲ್ಲ” ಎಂಬದಾಗಿ ಯುವತಿಗೆ ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಹಾಗಾಗಿ, ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿದೆ ವಿಡಿಯೊ
ಕ್ಷಮೆಯಾಚಿಸಿದ ಸಮಿತಿ
ಯುವತಿಯ ಜತೆ ಸಮಿತಿಯ ಅಧಿಕಾರಿಯೊಬ್ಬರು ತೋರಿದ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಲೇ ಶಿರೋಮಣಿ ಗುರುದ್ವಾರ ಪರ್‌ಬಂಧಕ್ ಸಮಿತಿ ಕ್ಷಮೆಯಾಚಿಸಿದೆ. “ಸ್ವರ್ಣಮಂದಿರವು ಸಿಖ್ ಯಾತ್ರಾ ಸ್ಥಳ. ಪ್ರತಿಯೊಂದು ಯಾತ್ರಾಸ್ಥಳದಂತೆ ಇಲ್ಲೂ ಹಲವು ಶಿಷ್ಟಾಚಾರಗಳಿವೆ. ನಾವು ಎಲ್ಲರನ್ನೂ ಸ್ವಾಗತಿಸುತ್ತೇವೆ. ನಮ್ಮ ಅಧಿಕಾರಿಯ ವರ್ತನೆಗೆ ನಾವು ಕ್ಷಮೆಯಾಚಿಸುತ್ತೇವೆ. ಅಷ್ಟಕ್ಕೂ, ಯುವತಿಯ ಮುಖದ ಮೇಲೆ ತಿರಂಗಾ ಚಿತ್ರ ಇರಲಿಲ್ಲ. ಅಶೋಕ ಚಕ್ರ ಇರಲಿಲ್ಲ. ಅದೊಂದು ರಾಜಕೀಯ ಪಕ್ಷದ ಚಿಹ್ನೆಯಂತಿತ್ತು” ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಗುರುಚರಣ್ ಸಿಂಗ್ ಗ್ರೆವಾಲ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: Tiranga March: ಪ್ರತಿಪಕ್ಷಗಳಿಂದ ತಿರಂಗಾ ಮೆರವಣಿಗೆ, ಸ್ಪೀಕರ್ ಟೀ ಪಾರ್ಟಿಗೆ ಬಹಿಷ್ಕಾರ
ಸಾಮಾನ್ಯವಾಗಿ ಅಟಾರಿ-ವಾಘಾ ಗಡಿಯಲ್ಲಿ ಸೇನೆಯ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮ ನೋಡಲು ತೆರಳುವವರು ಮುಖದ ಮೇಲೆ ತಿರಂಗಾ ಚಿತ್ರ ಬಿಡಿಸಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಬಳಿಕ ಅವರು ಸಹಜವಾಗಿ ಸ್ವರ್ಣಮಂದಿರ ವೀಕ್ಷಿಸಲು ತೆರಳುತ್ತಾರೆ. ಹಾಗೆಯೇ, ಯುವತಿ ಕೂಡ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದ ಬಳಿಕ ಸ್ವರ್ಣಮಂದಿರಕ್ಕೆ ತೆರಳಿರಬಹುದು ಎಂದು ಹೇಳಲಾಗುತ್ತಿದೆ.
ಇನ್ನು ತಿರಂಗಾ ಚಿತ್ರ ಇರುವ ಯುವತಿಯನ್ನು ಸ್ವರ್ಣಮಂದಿರಕ್ಕೆ ಬಿಡದಿರುವ ಕುರಿತ ವಿಡಿಯೊ ವೈರಲ್ ಆಗುತ್ತಲೇ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಖಲಿಸ್ತಾನಿ ಗೂಂಡಾಗಳು ಯುವತಿಯು ಸ್ವರ್ಣಮಂದಿರ ಪ್ರವೇಶಿಸಲು ನಿರಾಕರಿಸಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. “ಇಂತಹ ಕೃತ್ಯವು ನಾಚಿಕೆಗೇಡಿನ ಸಂಗತಿ. ಆಡಳಿತ ಮಂಡಳಿಯು ಅಧಿಕಾರಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಮತ್ತೊಬ್ಬರು ಆಗ್ರಹಿಸಿದ್ದಾರೆ.