Site icon Vistara News

Gita Press: ಹಿಂದು ಧರ್ಮ ಗ್ರಂಥಗಳ ವಿಶ್ವದ ಬೃಹತ್ ಪ್ರಕಾಶಕ ‌’ಗೀತಾ ಪ್ರೆಸ್‌’ಗೆ ಗಾಂಧಿ ಶಾಂತಿ ಪ್ರಶಸ್ತಿ; ಕಾಂಗ್ರೆಸ್‌ ತಗಾದೆ

Gandhi Peace Prize For Gita Press

Gita Press Awarded Gandhi Peace Prize For 2021

ನವದೆಹಲಿ: ಹಿಂದು ಧಾರ್ಮಿಕ ಗ್ರಂಥಗಳ ವಿಶ್ವದ ಬೃಹತ್‌ ಪ್ರಕಾಶನ ಸಂಸ್ಥೆ ಗೀತಾ ಪ್ರೆಸ್‌ಗೆ (Gita Press) ಕೇಂದ್ರ ಸರ್ಕಾರವು 2021ನೇ ಸಾಲಿನ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿ ಘೋಷಿಸಿದೆ. ಇದೇ ವರ್ಷ ಗೀತಾ ಪ್ರೆಸ್‌ ಶತಮಾನೋತ್ಸವ ಆಚರಿಸುತ್ತಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಪ್ರತಿಷ್ಠಿತ ಪ್ರಶಸ್ತಿ ಘೋಷಿಸಿದೆ. ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಗೀತಾ ಪ್ರೆಸ್‌ ಇದೆ.

ಭಗವದ್ಗೀತೆ, ಮಹಾಭಾರತ, ತುಳಸಿದಾಸರ ಶ್ರೀರಾಮಚರಿತ ಮಾನಸ, ವಾಲ್ಮೀಕಿ ರಾಮಾಯಣ, ಪುರಾಣಗಳು, ಉಪನಿಷತ್ತುಗಳು ಸೇರಿ ಹಲವು ಗ್ರಂಥಗಳ ಪ್ರಕಾಶನದ ಹೊಣೆಯನ್ನು ಗೀತಾ ಪ್ರೆಸ್‌ ಹೊಂದಿದೆ. ಅಲ್ಲದೆ, ಕರ್ನಾಟಕ, ಚೆನ್ನೈ, ದೆಹಲಿ ಸೇರಿ ದೇಶದ ಪ್ರಮುಖ ರಾಜ್ಯಗಳಲ್ಲಿ ಗೀತಾ ಪ್ರೆಸ್‌ ಪುಸ್ತಕ ಮಳಿಗೆಗಳಿವೆ. ಹಿಂದು ಧರ್ಮಕ್ಕೆ ಸಂಬಂಧಿಸಿದ ಲಕ್ಷಾಂತರ ಪುಸ್ತಕಗಳನ್ನು ಗೀತಾ ಪ್ರೆಸ್‌ ಪ್ರಕಟಿಸಿದೆ. ಕನ್ನಡದಲ್ಲೂ ಗೀತಾ ಪ್ರೆಸ್‌ ಪುಸ್ತಕಗಳಿವೆ.

ಗೀತಾ ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. “2021ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿಗೆ ಭಾಜನವಾಗಿರುವ ಗೀತಾ ಪ್ರೆಸ್‌ಗೆ ಅಭಿನಂದನೆಗಳು. ದೇಶದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಏಳಿಗೆಗೆ ಗೀತಾ ಪ್ರೆಸ್‌ ನೀಡಿದ ಕೊಡುಗೆ ಅಪಾರವಾಗಿದೆ” ಎಂದು ಶುಭಾಶಯ ಕೋರಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.

ತಗಾದೆ ತೆಗೆದ ಕಾಂಗ್ರೆಸ್‌

ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡಿರುವುದಕ್ಕೆ ಕಾಂಗ್ರೆಸ್‌ ತಗಾದೆ ತೆಗೆದಿದೆ. “ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ ಕೊಡುವುದೂ ಒಂದೇ, ನಾಥುರಾಮ್‌ ಗೋಡ್ಸೆ ಹಾಗೂ ವೀರ ಸಾವರ್ಕರ್‌ ಅವರಿಗೆ ಕೊಡುವುದೂ ಒಂದೇ” ಎಂದು ಕಾಂಗ್ರೆಸ್‌ ಹಿರಿಯ ನಾಯಕ ಜೈರಾಮ್‌ ರಮೇಶ್ ಹೇಳಿದ್ದಾರೆ. ಮಹಾತ್ಮ ಗಾಂಧೀಜಿಯವರ 125ನೇ ಜಯಂತಿ ಸ್ಮರಣಾರ್ಥ 1995ರಲ್ಲಿ ಗಾಂಧಿ ಶಾಂತಿ ಪ್ರಶಸ್ತಿ ನೀಡುವುದನ್ನು ಆರಂಭಿಸಲಾಗಿದೆ.

ಇದನ್ನೂ ಓದಿ: Media Awards: ಜೂ.25ರಂದು ವಿಎಸ್‌ಕೆ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ

ಪ್ರಶಸ್ತಿಯ ಮೊತ್ತ ಬೇಡವೆಂದ ಗೀತಾ ಪ್ರೆಸ್‌

ಗೀತಾ ಪ್ರೆಸ್‌ಗೆ ನೀಡಲಾದ ಗಾಂಧಿ ಶಾಂತಿ ಪ್ರಶಸ್ತಿಯು ಒಂದು ಕೋಟಿ ರೂಪಾಯಿ ನಗದು, ಪ್ರಮಾಣಪತ್ರವನ್ನು ಹೊಂದಿದೆ. ಆದರೆ, ಗೀತಾ ಪ್ರೆಸ್‌ಗೆ ಪ್ರಶಸ್ತಿ ನೀಡಿರುವ ಕುರಿತು ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ. ಹಾಗಾಗಿ, ಪ್ರಶಸ್ತಿಯ ಒಂದು ಕೋಟಿ ರೂಪಾಯಿಯನ್ನು ಸ್ವೀಕರಿಸುವುದಿಲ್ಲ ಎಂದು ಗೀತಾ ಪ್ರೆಸ್‌ ತಿಳಿಸಿದೆ. ಅಂದಹಾಗೆ, ಪ್ರಶಸ್ತಿ ನೀಡುವ ಸಮಿತಿಗೆ ನರೇಂದ್ರ ಮೋದಿ ಅವರೇ ಅಧ್ಯಕ್ಷರಾಗಿದ್ದಾರೆ.

Exit mobile version