ವಾರಾಣಸಿ: ಬಹು ನಿರೀಕ್ಷಿತ ಜ್ಞಾನವಾಪಿ-ಶೃಂಗಾರ ಗೌರಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯ ಇಂದು (ಜುಲೈ-೪, ಸೋಮವಾರ) ಮುಂದುವರಿಸಲಿದೆ.
ಐವರು ಹಿಂದೂ ಮಹಿಳೆಯರು ೨೦೨೧ರ ಆಗಸ್ಟ್‌ನಲ್ಲಿ ಜ್ಞಾನವಾಪಿ-ಶೃಂಗಾರ ಗೌರಿ ವಿವಾದ ಕುರಿತು ಕೇಸ್ ದಾಖಲಿಸಿದ್ದರು. ಕಾಶಿ ವಿಶ್ವನಾಥ- ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಶೃಂಗಾರ ಗೌರಿ ಸ್ಥಳದಲ್ಲಿ ಪ್ರತಿನಿತ್ಯ ಪೂಜೆ ಮಾಡಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು.
ಕಳೆದ ಮೇ ೩೦ರಂದು ಜಿಲ್ಲಾ ನ್ಯಾಯಾಧೀಶ ಎಕೆ ವಿಶ್ವೇಶ್ ಅವರು ಪ್ರಕರಣದ ವಿಚಾರಣೆಯನ್ನು ಜುಲೈ ೪ಕ್ಕೆ ಮುಂದೂಡಿದ್ದರು. ವಾರಾಣಸಿಯ ವಿಶ್ವನಾಥ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇರುವ ಜ್ಞಾನವಾಪಿ ಮಸೀದಿಯ ಪಶ್ಚಿಮ ಗೋಡೆಯಲ್ಲಿ ದೇವರ ಚಿತ್ರಗಳಿವೆ. ಅವುಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಐವರು ಮಹಿಳೆಯರು ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಮುಸ್ಲಿಂ ಬಣ ಇದನ್ನು ಪ್ರಶ್ನಿಸಿದೆ. ಐವರು ಹಿಂದೂ ಮಹಿಳೆಯರು ವೈಯಕ್ತಿಕವಾಗಿ ಅರ್ಜಿ ಸಲ್ಲಿಸಿದ್ದಾರೆ. ಇದನ್ನು ಇಡೀ ಹಿಂದೂ ಸಮುದಾಯದ ಪ್ರಾತಿನಿಧ್ಯ ಎಂದು ಪರಿಗಣಿಸಬಾರದು ಎಂದು ಮುಸ್ಲಿಂ ಬಣದ ವಕೀಲ ಅಖ್ಲಾಕ್ ಅಹಮದ್ ಹೇಳಿದ್ದಾರೆ.
ಐವರು ಮಹಿಳೆಯರು ಕೇಸ್ ದಾಖಲಿಸಿದ ಬಳಿಕ ಜ್ಞಾನವಾಪಿ ಸಂಕೀರ್ಣದ ವಿಡಿಯೊಗ್ರಾಫಿಕ್ ಸರ್ವೇಕ್ಷಣೆಗೆ ಕೋರ್ಟ್ ಆದೇಶಿಸಿತ್ತು. ಈ ಸರ್ವೇಕ್ಷಣೆಯ ವೇಳೆ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಬಣ ಹೇಳಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ಹಿಂದೂ ಬಣದ ಪರ ವಕೀಲ ಸುಭಾಷ್ ನಂದನ್ ಚತುರ್ವೇದಿ ಹೇಳಿದ್ದಾರೆ.