Site icon Vistara News

ಹೋಗಿ ಜೈಲು ಅನುಭವಿಸಿ! ಆರೋಪಿಗಳನ್ನು ಹೊಡೆದಿದ್ದ ಗುಜರಾತ್ ಪೊಲೀಸರಿಗೆ ಸುಪ್ರೀಂ ಕೋರ್ಟ್ ಚಾಟಿ

8 votes cast in Chandigarh mayoral election were Valid Says Supreme Court

ನವದೆಹಲಿ: 2022ರಲ್ಲಿ ಖೇಡಾ ಜಿಲ್ಲೆಯ (Kheda District) ಹಳ್ಳಿಯೊಂದರಲ್ಲಿ ಮುಸ್ಲಿಂ ಸಮುದಾಯಕ್ಕೆ (Muslim Community) ಸೇರಿದ ಐವರನ್ನು ಸಾರ್ವಜನಿಕವಾಗಿ ಥಳಿಸಿರುವ ಆರೋಪ ಎದುರಿಸುತ್ತಿರುವ ಗುಜರಾತ್ ಪೊಲೀಸರಿಗೆ (Gujarat Police) ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ತಾಕೀತು ಮಾಡಿದ್ದು, ಜನರನ್ನು ಕಂಬಗಳಿಗೆ ಕಟ್ಟಿ ಹಾಕುವ ಅಧಿಕಾರ ಎಲ್ಲಿಂದ ಬಂತು. ಹೋಗಿ ಸೆರವಾಸ ಅನುಭವಿಸಿದೆ ಎಂದು ಹೇಳಿದೆ.

2023ರ ಅಕ್ಟೋಬರ್ 19 ರ ಗುಜರಾತ್ ಹೈ ಕೋರ್ಟ್ ಆದೇಶದ ವಿರುದ್ಧ ಇನ್ಸ್‌ಪೆಕ್ಟರ್ ಎವಿ ಪರ್ಮಾರ್, ಸಬ್ ಇನ್ಸ್‌ಪೆಕ್ಟರ್ ಡಿಬಿ ಕುಮಾವತ್, ಹೆಡ್ ಕಾನ್‌ಸ್ಟೆಬಲ್ ಕೆಎಲ್ ದಾಭಿ ಮತ್ತು ಕಾನ್‌ಸ್ಟೆಬಲ್ ಆರ್‌ಆರ್ ದಾಭಿ ಎಂಬ ನಾಲ್ವರು ಪೊಲೀಸ್ ಸಿಬ್ಬಂದಿ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ವಿಚಾರಣೆ ನಡೆಸುತ್ತಿದೆ. ಶಂಕಿತರನ್ನು ಬಂಧಿಸುವ ಮತ್ತು ವಿಚಾರಣೆ ಮಾಡುವ ಕುರಿತು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ನ್ಯಾಯಾಲಯದ ನಿಂದನೆಗಾಗಿ ನ್ಯಾಯಾಲಯವು ಅವರಿಗೆ 14 ದಿನಗಳ ಸರಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.

ಜನರನ್ನು ಕಂಬಕ್ಕೆ ಕಟ್ಟಿ ಅವರನ್ನು ಹೊಡೆಯಲು ಕಾನೂನಿನಡಿಯಲ್ಲಿ ನಿಮಗೆ ಅಧಿಕಾರವಿದೆಯೇ? ಹೋಗಿ ಕಸ್ಟಡಿಯನ್ನು ಆನಂದಿಸಿ ಎಂದು ವಿಚಾರಣೆಯ ಸಂದರ್ಭದಲ್ಲಿ ಕೋಪಗೊಂಡ ನ್ಯಾಯಮೂರ್ತಿ ಗವಾಯಿ ಹೇಳಿದರು.

ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಮೆಹ್ತಾ, “ಇದು ಯಾವ ರೀತಿಯ ದೌರ್ಜನ್ಯ? ಜನರನ್ನು ಕಂಬಕ್ಕೆ ಕಟ್ಟಿಹಾಕುವುದು, ಸಾರ್ವಜನಿಕವಾಗಿ ಹೊಡೆಯುವುದು ಮತ್ತು ವೀಡಿಯೊ ತೆಗೆಯುವುದು.. ಎಂಥ ದೌರ್ಜನ್ಯ ಇದು. ಇಷ್ಟೆಲ್ಲ ಮಾಡಿ, ಈ ನ್ಯಾಯಾಲಯ ಮಧ್ಯಪ್ರವೇಶಿಸಬೇಕೆಂದು ಹೇಗೆ ಬಯಸುತ್ತೀರಿ” ಎಂದು ಪ್ರಶ್ನಿಸಿದರು.

ಅಧಿಕಾರಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ದವೆ, ಅವರು ಈಗಾಗಲೇ ಕ್ರಿಮಿನಲ್ ಮೊಕದ್ದಮೆ, ಇಲಾಖಾ ಪ್ರಕ್ರಿಯೆಗಳು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.

“ಇಲ್ಲಿನ ಪ್ರಶ್ನೆಯು ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಯಲ್ಲಿ ಮುಂದುವರಿಯಲು ಹೈಕೋರ್ಟ್‌ನ ಅಧಿಕಾರ ವ್ಯಾಪ್ತಿಯ ಬಗ್ಗೆ” ಎಂದು ದವೆ ಹೇಳಿದರು. ಡಿಕೆ ಬಸು ಪ್ರಕರಣದಲ್ಲಿ 1996 ರ ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ ಅವರ ವಿರುದ್ಧ ಉದ್ದೇಶಪೂರ್ವಕ ಅಸಹಕಾರದ ಯಾವುದೇ ಅಪರಾಧವನ್ನು ಮಾಡಲಾಗಿಲ್ಲ ಎಂದು ಹೇಳಿದರು.

ದವೆ ಅವರ ವಾದಕ್ಕೆ ಪ್ರತಿಕ್ರಿಯಿಸಿ ನ್ಯಾಯಮೂರ್ತಿ ಗವಾಯಿ ಅವರು, ಕಾನೂನಿನ ಅಜ್ಞಾನವು ಮಾನ್ಯಮಾಡಬಹುದಾದ ಪ್ರತಿವಾದವಲ್ಲ. ಡಿಕೆ ಬಸು ಅವರ ಕಾನೂನು ಏನೆಂದು ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯೂ ತಿಳಿದುಕೊಳ್ಳಬೇಕು. ಕಾನೂನು ವಿದ್ಯಾರ್ಥಿಗಳಾದ ನಾವು ಡಿಕೆ ಬಸು ತೀರ್ಪಿನ ಬಗ್ಗೆ ಕೇಳುತ್ತಿದ್ದೇವೆ ಮತ್ತು ಓದುತ್ತಿದ್ದೇವೆ ಎಂದು ಹೇಳಿದರು.

2022 ರ ಅಕ್ಟೋಬರ್‌ನಲ್ಲಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಖೇಡಾ ಜಿಲ್ಲೆಯ ಉಂಧೇಲಾ ಗ್ರಾಮದಲ್ಲಿ ನಡೆದ ಗರ್ಬಾ ಕಾರ್ಯಕ್ರಮಕ್ಕೆ ಕಲ್ಲು ಎಸೆದ ಆರೋಪದ ಮೇಲೆ 13 ಜನರನ್ನು ಬಂಧಿಸಲಾಗಿತ್ತು. ಈ ಪೈಕಿ ಐವರ ಮುಸ್ಲಿಮರನ್ನು ಲಾಠಿಯಿಂದ ಹೊಡೆದು ಅವರನ್ನು ಕಂಬಕ್ಕೆ ಕಟ್ಟಿ ಹಾಕಿದ್ದರು ಎನ್ನಲಾಗಿದೆ. ಪೊಲೀಸರು ನಡೆದುಕೊಂಡ ರೀತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ: Krishna Janmabhoomi: ಮಥುರಾ ಶಾಹಿ ಈದ್ಗಾ ಮಸೀದಿಯ ಸರ್ವೇಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

Exit mobile version