ಮುಂಬೈ: ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ (Maharashtra BJP chief Chandrakant Patil) ನಾಲಿಗೆ ಹರಿಬಿಟ್ಟು ವಿವಾದ ಸೃಷ್ಟಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಮುಂಬೈನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಾತನಾಡಿದ ಪಾಟೀಲ್, ಎನ್‌ಸಿಪಿ ಸಂಸದೆ ಸುಪ್ರಿಯಾ ಸುಲೆಯವರನ್ನು ಉದ್ದೇಶಿಸಿ ʼನಿಮಗೆ ರಾಜಕೀಯ ಅರ್ಥವಾಗದೆ ಇದ್ದರೆ, ಮನೆಗೆ ಹೋಗಿ ಅಡುಗೆ ಮಾಡಿಕೊಂಡಿರಿʼ ಎಂದು ಹೇಳಿದ್ದಾರೆ. ಇದು ಲಿಂಗ ತಾರತಮ್ಯವನ್ನು ಪ್ರತಿನಿಧಿಸುವ ಮಾತು ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಮಧ್ಯಪ್ರದೇಶದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಅದಾದ ಬೆನ್ನಲ್ಲೇ ಶರದ್ ಪವಾತ್ ಪುತ್ರಿ ಸುಪ್ರಿಯಾ ಸುಲೆ ಹೇಳಿಕೆಯೊಂದನ್ನು ನೀಡಿದ್ದರು. ಮಹಾರಾಷ್ಟ್ರದಲ್ಲಿಯೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಒಬಿಸಿಗೆ ಮೀಸಲಾತಿ ನೀಡಬೇಕು ಎಂದು ಬಿಜೆಪಿ ಹೋರಾಟ ಮಾಡುತ್ತಿದೆ. ನಾನು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ರನ್ನು ಇತ್ತೀಚೆಗೆ ದೆಹಲಿಯಲ್ಲಿ ಭೇಟಿಯಾದಾಗ ಈ ಬಗ್ಗೆ ಕೇಳಿದೆ. ಮೀಸಲಾತಿ ನೀಡಲು ಸುಪ್ರೀಂಕೋರ್ಟ್ ಒಪ್ಪಿಗೆ ಪಡೆಯಲು ನೀವು ಏನು ಮಾಡಿದಿರಿ ಎಂದು ಪ್ರಶ್ನಿಸಿದೆ. ಆದರೆ ಅವರೇನೂ ಉತ್ತರಿಸಲೇ ಇಲ್ಲ ಎಂದಿದ್ದರು.
ಇದನ್ನೂ ಓದಿ: ಪೆಟ್ರೋಲ್ ವ್ಯಾಟ್ ತಾನೇ ಕಡಿತಗೊಳಿಸಿದ್ದಾಗಿ ಯಾಮಾರಿಸಿತೇ ಮಹಾರಾಷ್ಟ್ರ ಸರಕಾರ?
ಸುಪ್ರಿಯಾ ಈ ಹೇಳಿಕೆ ನೀಡಿದ್ದರ ಬಗ್ಗೆ ಬಿಜೆಪಿ ಅಧ್ಯಕ್ಷ ಅಸಮಾಧಾನ ವ್ಯಕ್ತಪಡಿಸಿದ್ದರು. ʼನೀವ್ಯಾಕೆ ಇನ್ನೂ ರಾಜಕೀಯದಲ್ಲಿದ್ದೀರಿ. ಮನೆಗೆ ಹೋಗಿ ಅಡುಗೆ ಮಾಡಿಕೊಂಡಿರಿ. ನೀವು ದೆಹಲಿಗಾದರೂ ಹೋಗಿ, ಸ್ಮಶಾನಕ್ಕಾದರೂ ಹೋಗಿ. ಒಬಿಸಿ ಕೋಟಾದಡಿ ಮೀಸಲಾತಿ ಕೊಡಿ ಎಂಬ ನಮ್ಮ ಬೇಡಿಕೆಯನ್ನು ಮೊದಲು ಈಡೇರಿಸಿ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಎನ್‌ಸಿಪಿ ನಾಯಕರು ಪಾಟೀಲ್ ವಿರುದ್ಧ ಕಿಡಿ ಕಾರಿದ್ದರು. ನೀವು ಮೊದಲು ಮನೆಗೆ ಹೋಗಿ ಪತ್ನಿ ಜತೆ ಚಪಾತಿ ಲಟ್ಟಿಸಿ ಎಂದು ಹೇಳಿದ್ದರು. ಸುಪ್ರಿಯಾ ಸುಲೆಯ ಕಸಿನ್, ಎನ್‌ಸಿಪಿ ನಾಯಕ ಅಜಿತ್ ಪವಾರ್ ಪ್ರತಿಕ್ರಿಯೆ ನೀಡಿ, ನನ್ನ ಸಹೋದರಿಯ ಬಗ್ಗೆ ಇಂಥ ಮಾತುಗಳನ್ನಾಡಲು ಬಿಜೆಪಿ ನಾಯಕನಿಗೆ ಹಕ್ಕು ಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದ್ದರು.
ತಮ್ಮ ಮಾತಿಗೆ ವಿರೋಧ ಹೆಚ್ಚುತ್ತಿದ್ದಂತೆ ಅದನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನೂ ಚಂದ್ರಕಾಂತ್ ಪಾಟೀಲ್ ಮಾಡಿದ್ದರು. ನಾನು ಮಹಿಳೆಯರಿಗೆ ಗೌರವ ನೀಡುತ್ತೇನೆ. ಸುಪ್ರಿಯಾ ಅವರ ಬಗ್ಗೆಯೂ ನನಗೆ ಅಪಾರ ಗೌರವ ಇದೆ. ಸುಪ್ರಿಯಾ ಹಳ್ಳಿ ಪ್ರದೇಶಗಳಿಗೆ ಹೋಗಿ ಅಲ್ಲಿನ ಜನಜೀವನ ಅರ್ಥ ಮಾಡಿಕೊಳ್ಳಬೇಕು ಎಂಬುದು ನನ್ನ ಮಾತಿನ ಆಶಯವಾಗಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗದಾಧಾರಿ V/S ಘಂಟಾಧಾರಿ ಹಿಂದುತ್ವ: ಬಿಜೆಪಿ ವಿರುದ್ಧ ಹರಿಹಾಯ್ದ ಮಹಾರಾಷ್ಟ್ರ CM ಠಾಕ್ರೆ