ಪಣಜಿ: ಗೋವಾದಲ್ಲಿ ಕಾಂಗ್ರೆಸ್‌ನಲ್ಲಿ ಏಳು ಶಾಸಕರು ಬಂಡಾಯ ಎದ್ದ ಬೆನ್ನಲ್ಲೇ, ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ. ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ಭರ್ಜರಿ ಹಣದ ಆಫರ್ ಬರುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಇನ್ನು ಪಕ್ಷದಲ್ಲಿ ಉಂಟಾದ ಈ ಗೊಂದಲಕ್ಕೆ ಪಕ್ಷದ ನಾಯಕರಾದ ಮೈಕಲ್ ಲೋಬೋ ಮತ್ತು ದಿಗಂಬರ್ ಕಾಮತ್ ಅವರೇ ಕಾರಣ ಎಂದೂ ಕಾಂಗ್ರೆಸ್ ಪ್ರಮುಖರು ಹೇಳಿದ್ದಾರೆ. ಈಗಾಗಲೇ ಮೈಕೆಲ್ ಲೋಬೋರನ್ನು ಗೋವಾ ವಿಧಾನಸಭೆ ವಿಪಕ್ಷ ನಾಯಕನ ಸ್ಥಾನದಿಂದ ವಜಾಗೊಳಿಸಲಾಗಿದೆ. ಇದೀಗ ಇನ್ನೂ ಮುಂದುವರಿದು ಮೈಕೆಲ್ ಲೋಬೋ ಮತ್ತು ದಿಗಂಬರ್ ಕಾಮತ್‌ರನ್ನು ಅನರ್ಹಗೊಳಿಸಬೇಕು ಎಂಬ ಅರ್ಜಿಯನ್ನು ವಿಧಾನಸಭೆ ಸ್ಪೀಕರ್‌ಗೆ ಸಲ್ಲಿಸಲಾಗಿದೆ.
ಲೋಬೋ ಮತ್ತು ಕಾಮತ್ ಅನರ್ಹತೆಗೆ ಮನವಿ ಮಾಡಿ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿದ ಬಳಿಕ ಮಾತನಾಡಿದ ಕಾಂಗ್ರೆಸ್ ಗೋವಾ ಅಧ್ಯಕ್ಷ ಅಮಿತ್ ಪಾಟ್ಕರ್, ʼಹಿರಿಯ ನಾಯಕರಾದ ಮೈಕೆಲ್ ಲೋಬೋ ಮತ್ತು ದಿಗಂಬರ್ ಕಾಮತ್ ಇಬ್ಬರೂ ಪಕ್ಷ ವಿರೋಧಿ ಚಟುವಟಿಕೆ ನಡೆಸುವ ಮೂಲಕ ಸ್ವಯಂ ಇಷ್ಟದಿಂದಲೇ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಬಿಟ್ಟಿದ್ದಾರೆ. ಯಾರೇ ಆಗಲಿ ಪಕ್ಷ ದುರ್ಬಲಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡರೆ, ಅವರು ಸ್ವಯಂಪ್ರೇರಿತರಾಗಿಯೇ ಪ್ರಾಥಮಿಕ ಸದಸ್ಯತ್ವ ಬಿಟ್ಟಂತೆ ಎಂದು 2020ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಅದೇ ತೀರ್ಪಿನ ಆಧಾರದ ಮೇಲೆ ನಾವು ಇಂದು ಕ್ರಮ ಕೈಗೊಂಡಿದ್ದೇವೆ. ಅನರ್ಹಗೊಳಿಸಲು ಮನವಿ ಮಾಡಲಾಗಿದೆʼ ಎಂದು ತಿಳಿಸಿದ್ದಾರೆ.
ದಿನೇಶ್ ಗುಂಡೂರಾವ್ ಆರೋಪದಿಂದ ಬೇಸರ
ಗೋವಾದ ಕಾಂಗ್ರೆಸ್ ನಾಯಕರು ಪಕ್ಷದ ಸಭೆಗೆ ಗೈರಾಗುತ್ತಿದ್ದಂತೆ ಬಂಡಾಯದ ವಾಸನೆ ಬಡಿದಿತ್ತು. ಒಟ್ಟು 11 ಶಾಸಕರಿದ್ದು, ಅದರಲ್ಲಿ ಏಳು ಮಂದಿ ಸಭೆಗೆ ಬಂದಿರಲಿಲ್ಲ. ಆ ಏಳು ಜನರಲ್ಲಿ ಆರು ಮಂದಿ ಬಿಜೆಪಿ ಸೇರುವುದು ಪಕ್ಕಾ ಎನ್ನಲಾಗಿತ್ತು. ಅದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ್ದ ಎಐಸಿಸಿ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್, ಲೋಬೋ ಮತ್ತು ಕಾಮತ್ ವಿರುದ್ಧ ಆರೋಪ ಮಾಡಿದ್ದರು.
ತಮ್ಮ ಮೇಲಿನ ಆಪಾದನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ದಿಗಂಬರ್ ಕಾಮತ್, ʼನಾನು ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನೋಡಿದೆ. ಅವರು ಮಾಡಿದ ಆರೋಪ ಕೇಳಿ ನನಗೇ ದಿಗಿಲಾಯಿತು. ಶಾಕ್ ಆಯಿತುʼ ಎಂದು ಹೇಳಿಕೊಂಡಿದ್ದರು. ಲೋಬೋ ಕೂಡ ಇದನ್ನು ತೀವ್ರವಾಗಿ ಖಂಡಿಸಿದ್ದರು. ನಾವು ಕಾಂಗ್ರೆಸ್ ಒಡೆಯುವ ಪ್ರಯತ್ನ ಮಾಡುತ್ತಿಲ್ಲ. ಬಿಜೆಪಿ ಸೇರ್ಪಡೆಯಾಗುವುದಿಲ್ಲ ಎಂದು ಇಬ್ಬರೂ ನಾಯಕರು ಪದೇಪದೆ ಹೇಳುತ್ತಿದ್ದಾರೆ. ಹಾಗಿದ್ದಾಗ್ಯೂ ಇಬ್ಬರ ವಿರುದ್ಧ ಕ್ರಮ ಮತ್ತಷ್ಟು ಜಟಿಲವಾಗುತ್ತಲೇ ಇದೆ.
ಇದನ್ನೂ ಓದಿ: ಗೋವಾದಲ್ಲಿ ದಿನೇಶ್ ಗುಂಡೂರಾವ್; ವಿಧಾನಸಭೆ ವಿಪಕ್ಷ ನಾಯಕನ ಸ್ಥಾನದಿಂದ ಮೈಕೆಲ್ ಲೋಬೋ ವಜಾ