Site icon Vistara News

ಮತದಾರರಿಗೆ ಆಮಿಷಗಳನ್ನು ನಿಲ್ಲಿಸದಿದ್ದರೆ ಚುನಾವಣಾ ಆಯೋಗಕ್ಕೆ ದೇವರೇ ಗತಿ : ಸುಪ್ರೀಂ

Supreme Court

ನವ ದೆಹಲಿ: ಚುನಾವಣೆಯ ವೇಳೆ ರಾಜಕೀಯ ಪಕ್ಷಗಳು ಮತದಾರರಿಗೆ ನೀಡುವ ಉಚಿತ ಕೊಡುಗೆಗಳ ಆಮಿಷಗಳನ್ನು ನಿಲ್ಲಿಸದಿದ್ದರೆ (Freebies) ಹಾಗೂ ಮತದಾರರು ಕೂಡ ಪ್ರಲೋಭನೆಗೆ ಒಳಗಾದರೆ ಚುನಾವಣೆ ಆಯೋಗವನ್ನು ದೇವರೇ ಕಾಪಾಡಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜಕೀಯ ಪಕ್ಷಗಳು ಘೋಷಿಸುವ ಉಚಿತ ಕೊಡುಗೆಗಳನ್ನು ನಿಯಂತ್ರಿಸುವ ಅಗತ್ಯ ಇದೆ ಎಂದು ಹೇಳಿರುವ ಸುಪ್ರೀಕೋರ್ಟ್‌ ವಿಚಾರಣೆಯನ್ನು ಆಗಸ್ಟ್‌ ೩ಕ್ಕೆ ಮಂದೂಡಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರ ನೇತೃತ್ವದ ಪೀಠವು, ಮತದಾರರಿಗೆ ರಾಜಕೀಯ ಪಕ್ಷಗಳು ನೀಡುವ ಉಚಿತ ಆಮಿಷಗಳ ವಿಚಾರದಲ್ಲಿ ಚುನಾವಣಾ ಆಯೋಗದ ಕೈಕಟ್ಟಿ ಹಾಕಿದಂತಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಈ ಸಂಬಂಧ ಕೇಂದ್ರ ಸರ್ಕಾರದ ವಿವರಣೆಯನ್ನು ಕೋರಿದೆ.

ರಾಜಕೀಯ ಪಕ್ಷಗಳು ಸಾರ್ವಜನಿಕರು ನೀಡುವ ತೆರಿಗೆ ಹಣವನ್ನು ಬಳಸಿ ಅತಾರ್ಕಿಕವಾಗಿ ಪುಕ್ಕಟೆ ಆಮಿಷಗಳನ್ನು ಒದಗಿಸಲು ದುರ್ಬಳಕೆ ಮಾಡಕೂಡದು. ಚುನಾವಣಾ ಆಯೋಗ ರಾಜಕೀಯ ಪಕ್ಷಗಳು ಹೊರಡಿಸು ಇಂಥ ಉಚಿತ ಆಮಿಷಗಳ ಘೋಷಣೆಗೆ ಅನುಮತಿ ನೀಡಬಾರದು ಎಂದು ಕೋರಿರುವ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಂಡಿದೆ.

ಚುನಾವಣಾ ಆಯೋಗದ ಅಸಹಾಯಕತೆ: ಚುನಾವಣೆಯ ಸಂದರ್ಭ ರಾಜಕೀಯ ಪಕ್ಷಗಳು ಘೋಷಿಸುವ ಉಚಿತ ಕೊಡುಗೆಗಳ ಆಮಿಷಗಳನ್ನು ನಿಯಂತ್ರಿಸುವ ಅಧಿಕಾರ ತನಗಿಲ್ಲ ಎಂದು ಚುನಾವಣಾ ಆಯೋಗ ಅಸಹಾಯಕತೆ ವ್ಯಕ್ತಪಡಿಸಿದೆ. ಉಚಿತ ಕೊಡುಗೆಗಳು ಯಥಾರ್ಥವಾಗಿ ಸಾಧ್ಯವೇ ಎಂಬುದನ್ನು ಮತದಾರರೇ ನಿರ್ಧರಿಸಬೇಕಾಗಿದೆ. ಇಂಥ ಆಮಿಷಗಳಿಂದ ಆರ್ಥಿಕತೆಯ ಮೇಲೆ ಉಂಟಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಕೂಡ ಮತದಾರರು ಯೋಚಿಸಬೇಕು ಎಂದು ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದೆ.

ಕೇಂದ್ರದ ಅನುದಾನ ಕಡಿತ ಸಾಧ್ಯವೇ?, ಸುಪ್ರೀಂ ಪ್ರಶ್ನೆ: ಅರ್ಜಿದಾರ ಅಶ್ವಿನಿ ಉಪಾಧ್ಯಾಯ ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ,” ಭಾರತದ ಒಟ್ಟು ಸಾಲ ೬.೫ ಲಕ್ಷ ಕೋಟಿ ರೂ.ಗಳಾಗಿದ್ದು, ಶ್ರೀಲಂಕಾ ಮಾದರಿಯಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸುವ ಅಪಾಯ ಇದೆʼʼ ಎಂದು ದೂರಿದ್ದರು. ಈ ಸಂಬಂಧ ಸುಪ್ರೀಂಕೋರ್ಟ್‌ಗೆ ನೀಡಿದ ನಿರ್ದೇಶನದಲ್ಲಿ ಸುಪ್ರೀಂಕೋರ್ಟ್‌, ಮತದಾರರಿಗೆ ಉಚಿತ ಕೊಡುಗೆಗಳ ಆಮಿಷವನ್ನು ನೀಡಿ, ಆರ್ಥಿಕತೆಯ ಹಳಿ ತಪ್ಪಿಸುವ ರಾಜಕೀಯ ಪಕ್ಷಗಳನ್ನು ನಿಯಂತ್ರಿಸುವ ಸಲುವಾಗಿ ಅಂಥ ರಾಜ್ಯಗಳಿಗೆ ನೀಡುವ ಅನುದಾನದಲ್ಲಿ ಕಡಿತಗೊಳಿಸಲು ಸಾಧ್ಯವೇ ಎಂದು ಕೇಳಿದೆ.

Exit mobile version