Site icon Vistara News

ಔರಂಗಜೇಬ್‌ ದಾಳಿಕೋರ, ಗೋಡ್ಸೆ ಭಾರತ ಮಾತೆಯ ಸುಪುತ್ರ; ಓವೈಸಿಗೆ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಟಾಂಗ್

Giriraj Singh On Godse

Godse was Son of Bharat Mata, not invader like Aurangzeb: Giriraj Singh hits back at Owaisi

ನವದೆಹಲಿ: ಮಹಾರಾಷ್ಟ್ರದಲ್ಲಿ ಮೈಸೂರು ಅರಸ ಟಿಪ್ಪು ಸುಲ್ತಾನ್‌ ಹಾಗೂ ಮೊಘಲ್‌ ಅರಸ ಔರಂಗಜೇಬ್‌ ಅವರನ್ನು ವೈಭವೀಕರಿಸಿ ಪೋಸ್ಟ್‌ ಮಾಡಿದ್ದು ಭಾರಿ ವಿವಾದ ಸೃಷ್ಟಿಯಾದ ಬೆನ್ನಲ್ಲೇ, ಔರಂಗಜೇಬ್‌ ಹಾಗೂ ನಾಥುರಾಮ್‌ ಗೋಡ್ಸೆ ಬಗ್ಗೆ ಬಿಜೆಪಿ ನಾಯಕರು ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಮಧ್ಯೆ ವಾಗ್ಯುದ್ಧವೇ ಆರಂಭವಾಗಿದೆ. ಗೋಡ್ಸೆ ಕುರಿತು ಅಸಾದುದ್ದೀನ್‌ ಓವೈಸಿ ನೀಡಿದ ಹೇಳಿಕೆಗೆ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ತಿರುಗೇಟು ನೀಡಿದ್ದಾರೆ. “ಔರಂಗಜೇಬ್‌ ಆಕ್ರಮಣಕಾರಿಯಾಗಿದ್ದು, ನಾಥುರಾಮ್‌ ಗೋಡ್ಸೆ ಭಾರತ ಮಾತೆಯ ಸುಪುತ್ರ” ಎಂದು ಹೇಳಿದ್ದಾರೆ.

“ನಾಥುರಾಮ್‌ ಗೋಡ್ಸೆ ಗಾಂಧೀಜಿಯವರ ಹತ್ಯೆಕೋರ ಹೇಗೋ, ಆತ ಭಾರತಮಾತೆಯ ಸುಪುತ್ರನೂ ಹೌದು. ಗೋಡ್ಸೆ ಹುಟ್ಟಿದ್ದು ಭಾರತದಲ್ಲಿ, ಆತ ಔರಂಗಜೇಬ ಹಾಗೂ ಬಾಬರನ ರೀತಿ ಭಾರತದ ಮೇಲೆ ಆಕ್ರಮಣ ಮಾಡಿಲ್ಲ. ಯಾರು ಬಾಬರನ ಪುತ್ರ ಎಂದು ಖುಷಿಪಡುತ್ತಾರೋ, ಅವರು ಭಾರತ ಮಾತೆಯ ಸುಪುತ್ರರಾಗಲು ಸಾಧ್ಯವಿಲ್ಲ” ಎಂದು ಗಿರಿರಾಜ್‌ ಸಿಂಗ್‌ ಛತ್ತೀಸ್‌ಗಢದಲ್ಲಿ ತಿರುಗೇಟು ನೀಡಿದ್ದಾರೆ.

ಗಿರಿರಾಜ್‌ ಸಿಂಗ್‌ ಟಾಂಗ್‌

ಓವೈಸಿ ಹೇಳಿದ್ದೇನು?

ದೇವೇಂದ್ರ ಫಡ್ನವಿಸ್‌ ಅವರು ಅಸಾದುದ್ದೀನ್‌ ಓವೈಸಿ ಅವರನ್ನು ಔರಂಗಜೇಬನ ಸಂತತಿ ಎಂದು ಹೇಳಿದ್ದರು. ಇದಕ್ಕೆ ಅಸಾದುದ್ದೀನ್‌ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದರು. “ನಾನು ದೇವೇಂದ್ರ ಫಡ್ನವಿಸ್‌ ಅವರಂತೆ ದೊಡ್ಡ ತಜ್ಞ ಅಲ್ಲ. ಅವರು ಯಾರ ಸಂತತಿಯನ್ನು ಹೇಗೆ ಪತ್ತೆಹಚ್ಚುತ್ತಾರೋ, ಹಾಗೆಯೇ, ನಾಥುರಾಮ್‌ ಗೋಡ್ಸೆ ಅವರ ಸಂತತಿಯನ್ನು ಕೂಡ ಪತ್ತೆಹಚ್ಚಲಿ” ಎಂದು ಟೀಕಿಸಿದ್ದರು. ಇದಕ್ಕೆ ಗಿರಿರಾಜ್‌ ಸಿಂಗ್‌ ಅವರೀಗ ಟಾಂಗ್‌ ಕೊಟ್ಟಿದ್ದಾರೆ.

ಫಡ್ನವಿಸ್‌ ನೀಡಿದ ಹೇಳಿಕೆ ಏನು?

ಮಹಾರಾಷ್ಟ್ರದ ಒಂದಷ್ಟು ಜಿಲ್ಲೆಗಳಲ್ಲಿ ದಿಢೀರನೆ ಔರಂಗಜೇಬನ ಮಕ್ಕಳು ಜನಿಸಿದ್ದಾರೆ. ಅವರು ತಮ್ಮ ಪೋಸ್ಟರ್‌ಗಳಲ್ಲಿ ಔರಂಗಜೇಬನ ಫೋಟೊ ಹಾಕಿದ್ದಾರೆ. ಇದರಿಂದಾಗಿಯೇ ಗಲಾಟೆ ಆರಂಭವಾಗಿದೆ. ಅಸಾದುದ್ದೀನ್‌ ಓವೈಸಿ ಕೂಡ ಔರಂಗಜೇಬನ ಸಂತತಿಯ. ಅಷ್ಟಕ್ಕೂ ಔರಂಗಜೇಬನ ಈ ಮಕ್ಕಳು ಎಲ್ಲಿಂದ ಬಂದರು? ಇವರ ಹಿಂದೆ ಯಾರಿದ್ದಾರೆ ಎಂಬುದನ್ನು ಶೀಘ್ರದಲ್ಲೇ ಪತ್ತೆಹಚ್ಚುತ್ತೇವೆ” ಎಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್‌ ಹೇಳಿದ್ದರು.

ಇದನ್ನೂ ಓದಿ: NCERT Textbooks: ಪಠ್ಯದಿಂದ ಗಾಂಧೀಜಿ, ಗೋಡ್ಸೆ, ಆರೆಸ್ಸೆಸ್‌ ವಿಷಯ ಕೈಬಿಟ್ಟ ಎನ್‌ಸಿಇಆರ್‌ಟಿ, ಭಾರಿ ವಿರೋಧ

ಟಿಪ್ಪು ಸುಲ್ತಾನ ಹಾಗೂ ಔರಂಗಜೇಬ್‌ ಅವರನ್ನು ವೈಭವೀಕರಿಸಿ, ಹೊಗಳಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಹಲವೆಡೆ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಕೆಲ ದಿನಗಳ ಹಿಂದಷ್ಟೇ, ಕೊಲ್ಹಾಪುರದಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಕಲ್ಲುತೂರಾಟ ಕೂಡ ನಡೆದಿತ್ತು.

Exit mobile version