ದಿಸ್ಪುರ: ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ (Ram Mandir) ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಆಹ್ವಾನವನ್ನು (Ram Mandir Invitation) ಕಾಂಗ್ರೆಸ್ ತಿರಸ್ಕರಿಸಿದೆ. ಕಾಂಗ್ರೆಸ್ (Congress) ನಿಲುವಿನ ಕುರಿತು ಭಾರಿ ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲ, ಸ್ವಪಕ್ಷದ ನಾಯಕರೇ ಹೈಕಮಾಂಡ್ ತೀರ್ಮಾನದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕಾಂಗ್ರೆಸ್ ತೀರ್ಮಾನದ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಟಾಂಗ್ ನೀಡಿದ್ದಾರೆ.
“ಕಾಂಗ್ರೆಸ್ಸಿಗರು ಬಾಬರ್‌ನನ್ನು ಪ್ರೀತಿಸುತ್ತಾರೆಯೇ ಹೊರತು ರಾಮನನ್ನು ಆರಾಧಿಸುವುದಿಲ್ಲ. ರಾಮನ ಮೇಲೆ ನಂಬಿಕೆಯೇ ಇರದವರಿಗೆ ಆಹ್ವಾನ ನೀಡಿದ್ದೇ ಸರಿಯಾದ ತೀರ್ಮಾನ ಅಲ್ಲ. ಯಾರು ರಾಮನ ಆರಾಧಕರಾಗಿದ್ದಾರೋ, ಅವರಿಗೆ ಮಾತ್ರ ಆಹ್ವಾನ ನೀಡಬೇಕು. ನಿಮಗೆ ಶ್ರೀರಾಮ ಬೇಕೋ, ಬಾಬರ್ ಬೇಕೋ ಎಂದರೆ, ಕಾಂಗ್ರೆಸ್ ನಾಯಕರು ಮೊದಲು ಬಾಬರನ ಎದುರು ಮಂಡಿಯೂರುತ್ತಾರೆ” ಎಂದು ಹಿಮಂತ ಬಿಸ್ವಾ ಶರ್ಮಾ ವಾಗ್ದಾಳಿ ನಡೆಸಿದ್ದಾರೆ.
#WATCH | On Congress declining the invitation for Ram Temple 'Pran Pratishtha', Assam CM Himanta Biswa Sarma says, "…They love Babur, not Lord Ram. So the decision to invite them was wrong and only those who have faith in Lord Ram should have been invited. Among Lord Ram and… pic.twitter.com/HFZSPvmzm6
— ANI (@ANI) January 13, 2024
ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸದಿರುವ ಕುರಿತು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ. ಇದು ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಾರ್ಯಕ್ರಮವಾಗಿರುವ ಕಾರಣ ಸೋನಿಯಾ ಗಾಂಧಿ ಸೇರಿ ಯಾವುದೇ ನಾಯಕರು ತೆರಳುವುದಿಲ್ಲ ಎಂಬುದಾಗಿ ಪ್ರಕಟಣೆ ಹೊರಡಿಸಿದೆ. ರಾಮಮಂದಿರ ಲೋಕಾರ್ಪಣೆ ಬಳಿಕ ನಾವೂ ಅಯೋಧ್ಯೆಗೆ ತೆರಳುತ್ತೇವೆ ಎಂದು ಈಗಾಗಲೇ ಹಲವು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ತಿರಸ್ಕರಸಿದ ಕಾರಣ ಕಾಂಗ್ರೆಸ್ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ಸಹೋದರ, ಮಾಜಿ ಶಾಸಕ ಲಕ್ಷ್ಮಣ್ ಸಿಂಗ್ ಅವರು ಸ್ವಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದು, “ರಾಮಮಂದಿರ ಆಹ್ವಾನ ತಿರಸ್ಕರಿಸಿದ್ದರ ಪರಿಣಾಮವನ್ನು ಪಕ್ಷವು ಚುನಾವಣೆಯಲ್ಲಿ ಎದುರಿಸಲಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Ayodhya Ram Mandir: ಅಮೆರಿಕದಲ್ಲಿ ರಾಮ ಮಂದಿರ ಪ್ರತಿಷ್ಠಾಪನೆಯ 40 ಬಿಲ್‌ಬೋರ್ಡ್
“ರಾಮಮಂದಿರ ಹೋರಾಟದಲ್ಲಿ ಪಾಲ್ಗೊಂಡವರು ಮಾತ್ರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಕುರಿತು ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ, ಕಾಂಗ್ರೆಸ್ ಈಗಾಗಲೇ ಪಾಲ್ಗೊಳ್ಳದಿರಲು ತೀರ್ಮಾನಿಸಿದೆ. ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರೂ ಅದನ್ನು ತಿರಸ್ಕರಿಸುವುದರಲ್ಲಿ ಅರ್ಥವೇನಿದೆ? ಆ ಮೂಲಕ ನಾವು ಯಾವ ಸಂದೇಶ ರವಾನಿಸುತ್ತಿದ್ದೇವೆ? ಈಗಾಗಲೇ ಪಕ್ಷದ ನಿರ್ಧಾರವು ಪರಿಣಾಮ ಬೀರಿದೆ. ಇದರ ಫಲಿತಾಂಶವನ್ನು ನಾವು ಚುನಾವಣೆ ಬಳಿಕ ನೋಡಲಿದ್ದೇವೆ” ಎಂದಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ