ನವದೆಹಲಿ: ಮಲಯಾಳಂ ಚಿತ್ರರಂಗದ ಮೊದಲ ಅಭಿನೇತ್ರಿ ಪಿ.ಕೆ. ರೋಸಿ (p k rosy) ಅವರ ೧೨೦ನೇ ಜನ್ಮದಿನದಂದು, ಡೂಡಲ್ (Doodle) ಮೂಲಕ ಗೂಗಲ್ (Google) ಗೌರವ ಸಲ್ಲಿಸಿದೆ. ಕೇರಳದ ತಿರುವನಂತಪುರದಲ್ಲಿ ೧೯೦೩ರಲ್ಲಿ ರಾಜಮ್ಮ ಎಂಬ ಹೆಸರಿನಿಂದ ಜನಿಸಿದ್ದ ಆಕೆ, ಭಾರತದ ಮೊದಲ ದಲಿತ ಅಭಿನೇತ್ರಿಯೂ ಹೌದು.
ಕಿರಿಯ ವಯಸ್ಸಿನಲ್ಲೇ ಅಭಿನಯದಲ್ಲಿ ಆಸಕ್ತಿ ಹೊಂದಿದ್ದ ಆಕೆಗೆ, ಅದನ್ನು ಸಾಕಾರಗೊಳಿಸಿಕೊಳ್ಳಲು ಸಾಮಾಜಿಕ ಅಡೆತಡೆಗಳು ಪ್ರಬಲವಾಗಿದ್ದವು. ಮಹಿಳೆಯರಿಗೆ ಅಭಿನಯದಂಥ ಕ್ಷೇತ್ರಗಳಲ್ಲಿ ಆಸ್ಪದವೇ ಇರದಿದ್ದ ಕಾಲವದು. ದಲಿತ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ್ದ ಆಕೆಯ ಹೆತ್ತವರು ದಿನಗೂಲಿಯಲ್ಲಿ ಬದುಕುತ್ತಿದ್ದವರು. ಆಕೆಯೂ ಇಂಥದ್ದೇ ಕೆಲಸಗಳಲ್ಲಿ ಬದುಕುವುದು ಅನಿವಾರ್ಯವಾಗಿತ್ತು. ಅಲ್ಲಿನ ಜಾನಪದ ರಂಗಭೂಮಿಯಲ್ಲಿ ಆಕೆ ತೊಡಗಿಸಿಕೊಂಡಿದ್ದರು. ಅಂತಹ ಕಷ್ಟದ ದಿನಗಳಲ್ಲಿ ತನ್ನ ಆಸಕ್ತಿಯನ್ನು ಪೋಷಿಸಿಕೊಂಡು ಬಂದು, ಮಲಯಾಳಂ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೇ ಹೊಸ ಅಧ್ಯಾಯ ತೆರೆದ ದಿಟ್ಟ ವ್ಯಕ್ತಿತ್ವಕ್ಕೆ ಗೂಗಲ್ ಈ ಮೂಲಕ ಗೌರವ ಸಲ್ಲಿಸಿದೆ. “ನಿಮ್ಮ ದಿಟ್ಟತನ ಮತ್ತು ನೀವು ಸೃಷ್ಟಿಸಿದ ಪರಂಪರೆಗಾಗಿ ಧನ್ಯವಾದಗಳು, ಪಿ.ಕೆ. ರೋಸಿ” ಎಂದು ಗೂಗಲ್ ಹೇಳಿದೆ.
ರೋಸಿ ಸಿನಿಮಾ ಪಯಣ
ʻವಿಗತಕುಮಾರನ್ʼ (ಕಳೆದುಹೋದ ಮಗು) ಎಂಬ ಮೂಕಿ ಚಿತ್ರದಲ್ಲಿ ೧೯೨೮ರಲ್ಲಿ ನಾಯಕಿ ಪಾತ್ರದಲ್ಲಿ ಅವರು ನಟಿಸಿದ್ದರು. ಆವರೆಗೆ ಮಲಯಾಳಂ ಚಿತ್ರರಂಗದಲ್ಲಿ ನಾಯಕಿರೇ ಇರಲಿಲ್ಲ ಎಂದರೆ, ಅವರು ಸೃಷ್ಟಿಸಿದ ಇತಿಹಾಸ ಎಷ್ಟು ದೊಡ್ಡದು ಎಂಬುದು ಅರಿವಾಗಬೇಕು. ಆ ಚಿತ್ರದಲ್ಲಿ ಸರೋಜಿನಿ ಎಂಬ ನಾಯರ್ ಸಮುದಾಯದ ಮಹಿಳೆಯ ಪಾತ್ರದಲ್ಲಿ ಅವರು ನಟಿಸಿದ್ದರು. ಅವರ ಪಾತ್ರ ಚಿತ್ರಣ ಆ ಕಾಲದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿತ್ತು. ದಲಿತ ಮಹಿಳೆಯೊಬ್ಬಳು ಮೇಲ್ವರ್ಗದ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಕ್ಕೆ ಕೆಲವು ಸಮುದಾಯಗಳ ಕೋಪಕ್ಕೆ ಗುರಿಯಾಗಿದ್ದ ರೋಸಿ, ತಮ್ಮ ಮನೆಗೆ ಬೆಂಕಿ ಹಚ್ಚಿದ್ದ ಸಂದರ್ಭದಲ್ಲಿ ಅಲ್ಲಿಂದ ತಪ್ಪಿಸಿಕೊಂಡಿದ್ದರು. ನಂತರ ತಮಿಳುನಾಡಿನತ್ತ ಹೋಗುತ್ತಿದ್ದ ಲಾರಿಯೊಂದನ್ನು ಹತ್ತಿ, ಲಾರಿಯ ಚಾಲಕನನ್ನೇ ವಿವಾಹವಾಗಿ ರಾಜಮ್ಮ ಎಂಬ ಹೆಸರಿನಲ್ಲಿ ಬದುಕಿದ್ದರು.
ಇದನ್ನೂ ಓದಿ: Google Doodle | ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಅಥ್ಲಿಟ್ ಜಾಧವ್‌ಗೆ ಗೂಗಲ್ ಡೂಡಲ್ ಗೌರವ!
ಕೆಲವೇ ವರ್ಷಗಳ ಕಾಲ ನಟನೆ ಮತ್ತು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಆಕೆ, ಆ ಕಾಲದಲ್ಲಿ ಕಲೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಮಹಿಳೆಯರ ಮೇಲಿದ್ದ ಕಠೋರವಾದ ಚೌಕಟ್ಟನ್ನು ಮುರಿದು ಹೊಸತನಕ್ಕೆ ನಾಂದಿ ಹಾಡಿದ್ದಂತೂ ಹೌದಾಗಿತ್ತು. ಇದರಿಂದ ಇಂದಿಗೂ ಆಕೆ ಅನುಸರಣೀಯರು ಎಂಬುದು ಸತ್ಯ.