ನವದೆಹಲಿ: ಶಾಲೆಗಳಲ್ಲಿ ಒಂದನೇ ತರಗತಿಯ ಪ್ರವೇಶಾತಿಯ (Class 1 Admission Age) ಕನಿಷ್ಠ ವಯಸ್ಸನ್ನು ೬ಕ್ಕೆ ಏರಿಕೆ ಮಾಡಿ ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನ್ವಯ ಎಲ್ಲ ರಾಜ್ಯಗಳಲ್ಲೂ ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ ವಯಸ್ಸು ೬ ಇರಬೇಕು ಎಂಬುದಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ನಿರ್ದೇಶನ ನೀಡಿದೆ.
“ದೇಶದ ೧೪ ರಾಜ್ಯಗಳಲ್ಲಿ ೬ ವರ್ಷ ತುಂಬುವ ಮೊದಲೇ ಒಂದನೇ ತರಗತಿಗೆ ಪ್ರವೇಶಾತಿ ನೀಡಲಾಗುತ್ತದೆ. ಆದರೆ, ನೂತನ ಶಿಕ್ಷಣ ನೀತಿ ಅನ್ವಯ ಒಂದನೇ ತರಗತಿಯ ಪ್ರವೇಶಾತಿಗೆ ಯಾವುದೇ ಮಗುವಿಗೆ ೬ ವರ್ಷವಾಗಿರಬೇಕು. ಹಾಗಾಗಿ, ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕನಿಷ್ಠ ವಯಸ್ಸನ್ನು ೬ಕ್ಕೆ ಏರಿಸಬೇಕು” ಎಂದು ಸೂಚಿಸಿದೆ.
ಅಸ್ಸಾಂ, ಗುಜರಾತ್, ಪುದುಚೇರಿ, ತೆಲಂಗಾಣ ಹಾಗೂ ಲಡಾಕ್‌ನಲ್ಲಿ ೫ ವರ್ಷ ತುಂಬಿದ ಕೂಡಲೇ ಒಂದನೇ ತರಗತಿಗೆ ಪ್ರವೇಶಾತಿ ನೀಡಲಾಗುತ್ತದೆ. ಆಂಧ್ರಪ್ರದೇಶ, ದೆಹಲಿ, ರಾಜಸ್ಥಾನ, ಉತ್ತರಾಖಂಡ, ಹರಿಯಾಣ, ಗೋವಾ, ಜಾರ್ಖಂಡ್, ಕೇರಳ ಹಾಗೂ ಕರ್ನಾಟಕದಲ್ಲಿ ಐದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಬಾಲಕರನ್ನು ಮೊದಲನೇ ತರಗತಿಗೆ ಪ್ರವೇಶಾತಿ ನೀಡಲಾಗುತ್ತದೆ.