ನವದೆಹಲಿ: ದೇಶದಲ್ಲಿ ಉಗ್ರರ ನಿಗ್ರಹದ ದಿಸೆಯಲ್ಲಿ ಕೇಂದ್ರ ಸರ್ಕಾರವು ಐತಿಹಾಸಿಕ ಕ್ರಮ ತೆಗೆದುಕೊಂಡಿದೆ. ಕಣಿವೆಯಲ್ಲಿ ಉಗ್ರ ಚಟುವಟಿಕೆಯಲ್ಲಿ ನಿರತವಾಗಿದ್ದ ಜಮ್ಮು-ಕಾಶ್ಮೀರ ಘಜ್ನವಿ ಫೋರ್ಸ್ (JKGF) ಹಾಗೂ ಪಂಜಾಬ್‌ನಲ್ಲಿ ಉಗ್ರವಾದವನ್ನು ಪುನರ್ ಸ್ಥಾಪಿಸುವ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಖಲಿಸ್ತಾನ ಟೈಗರ್ ಫೋರ್ಸ್ (KTF) ಸಂಘಟನೆಗಳನ್ನು ನಿಷೇಧಿಸಿದೆ. ಹಾಗೆಯೇ, ಪಂಜಾಬ್‌ನ ಗ್ಯಾಂಗ್‌ಸ್ಟರ್ ಆಗಿದ್ದವ ದೇಶ ವಿರೋಧಿ ಕೃತ್ಯಗಳಲ್ಲೂ ತೊಡಗಿಕೊಂಡಿರುವ ಹರ್ವಿಂದರ್ ಸಿಂಗ್ ಸಂಧುನನ್ನು ಉಗ್ರ ಎಂದು ಘೋಷಿಸಿದೆ.
ಜೈಶೆ ಮೊಹಮ್ಮದ್ ಹಾಗೂ ಲಷ್ಕರೆ ತಯ್ಬಾ ಉಗ್ರ ಸಂಘಟನೆಗಳ ಉಗ್ರರನ್ನು ಜತೆಗೂಡಿಸಿ ಜೆಕೆಜಿಎಫ್ ಸಂಘಟನೆಯನ್ನು ಸ್ಥಾಪಿಸಿದ್ದು, ಉಗ್ರರು ಒಳನುಸುಳಲು ನೆರವು, ಶಸ್ತ್ರಾಸ್ತ್ರ, ಮಾದಕ ವಸ್ತು ಸಾಗಣೆ, ಕಣಿವೆಯಲ್ಲಿ ಸೈನಿಕರಿಗೆ ಬೆದರಿಕೆ, ಉಗ್ರ ಚಟುವಟಿಕೆಗಳಿಗೆ ನೆರವು ಸೇರಿ ಹಲವು ಕೃತ್ಯಗಳಲ್ಲಿ ತೊಡಗಿದೆ.
ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಉಗ್ರ ಸಂಘಟನೆಯ ಅಂಗಸಂಸ್ಥೆಯಾಗಿ ೨೦೧೧ರಲ್ಲಿ ಸ್ಥಾಪನೆಗೊಂಡ ಕೆಟಿಎಫ್, ಪಂಜಾಬ್‌ನಲ್ಲಿ ವಿಧ್ವಂಸಕ ಚಟುವಟಿಕೆ, ಪ್ರತ್ಯೇಕ ಖಲಿಸ್ತಾನ ಹೋರಾಟ ಸೇರಿ ಕೃತ್ಯಗಳಲ್ಲಿ ತೊಡಗಿದೆ. ಇಷ್ಟೆಲ್ಲ ಅಂಶಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಎರಡೂ ಸಂಘಟನೆಗಳನ್ನು ನಿಷೇಧಿಸಿದೆ.
ಹರ್ವಿಂದರ್ ಸಿಂಗ್ ಸಂಧು ಯಾರು?
ಪಂಜಾಬ್‌ನಲ್ಲಿ ಒಂದು ಕಾಲದಲ್ಲಿ ಗ್ಯಾಂಗ್‌ಸ್ಟರ್ ಆಗಿದ್ದ ಹರ್ವಿಂದರ್ ಸಿಂಗ್ ಸಂಧು, ಇತ್ತೀಚೆಗೆ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದಾನೆ. ೨೦೨೧ರಲ್ಲಿ ಪಂಜಾಬ್ ಪೊಲೀಸ್ ಕೇಂದ್ರ ಕಚೇರಿ ಮೇಲೆ ನಡೆದ ದಾಳಿಯ ರೂವಾರಿ ಈತನೇ ಆಗಿದ್ದಾನೆ ಎಂಬ ಮಾಹಿತಿ ಇದೆ. ಹಾಗೆಯೇ, ಭಾರತದ ಆಂತರಿಕ ವಿಚಾರಗಳ ಕುರಿತು ಮಾಹಿತಿ ಸೋರಿಕೆ ಸೇರಿ ಹಲವು ಆರೋಪಗಳು ಇರುವ ಕಾರಣ ಈತನ ವಿರುದ್ಧ ರೆಡ್ ಕಾರ್ನರ್ ಕೂಡ ಹೊರಡಿಸಲಾಗಿತ್ತು. ಈಗ ಈತನನ್ನು ಉಗ್ರನೆಂದು ಘೋಷಿಸಲಾಗಿದೆ.