Site icon Vistara News

Pegasus Case | ಸಮಿತಿ ತನಿಖೆಗೆ ಕೇಂದ್ರದಿಂದ ಅಸಹಕಾರ? ಸುಪ್ರೀಂಗೆ ಸಮಿತಿ ಹೇಳಿದ್ದೇನು?

Supreme Court

ನವದೆಹಲಿ: ಪೆಗಾಸಸ್‌ ಸ್ಪೈವೇರ್‌ (Pegasus Case) ಬಳಸಿ ದೇಶದ ರಾಜಕಾರಣಿಗಳು, ಪತ್ರಕರ್ತರು ನೂರಾರು ಗಣ್ಯರ ಮೊಬೈಲ್‌ ಕದ್ದಾಲಿಕೆ ಮಾಡಲಾಗಿದೆ ಎಂಬ ಪ್ರಕರಣದ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ರಚಿಸಿರುವ ಸಮಿತಿಗೆ ಕೇಂದ್ರ ಸರಕಾರವು ಸಹಕಾರ ನೀಡಿಲ್ಲ ಎಂದು ಸಮಿತಿ ತಿಳಿಸಿದೆ. ಮತ್ತೊಂದೆಡೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ೨೯ ಮೊಬೈಲ್‌ಗಳನ್ನು ತಪಾಸಣೆ ಮಾಡಿದ್ದು, ಇವುಗಳಲ್ಲಿ ಐದು ಮೊಬೈಲ್‌ಗಳಲ್ಲಿ ಮಾತ್ರ ಮಾಲ್ವೇರ್‌ (Malware) ಪತ್ತೆಯಾಗಿದೆ. ಆದರೆ, ಅದು ಪೆಗಾಸಸ್‌ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದೆ.

ಪೆಗಾಸಸ್‌ ಪ್ರಕರಣದ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ತಾಂತ್ರಿಕ ಸಮಿತಿ ರಚಿಸಿದ್ದು, ವಿಷಯ ಪರಿಣತರು ಮೂರು ಭಾಗಗಳಲ್ಲಿ ವರದಿ ಸಲ್ಲಿಸಿದ್ದಾರೆ. ಇವು ವಿಸ್ತೃತ ವರದಿಗಳಾದ ಕಾರಣ ಎಲ್ಲವನ್ನೂ ವಿವರಿಸಲು ಆಗುವುದಿಲ್ಲ. ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲಾಗುವುದು ಎಂದು ಮುಖ್ಯ ನ್ಯಾ.ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠವು ತಿಳಿಸಿದೆ.

ವರದಿಗಳಲ್ಲಿ ಮುಖ್ಯವಾಗಿ ಕೇಂದ್ರ ಸರಕಾರವು ತಾಂತ್ರಿಕ ಸಮಿತಿಗೆ ಸಹಕಾರ ನೀಡಿಲ್ಲ ಎಂಬುದನ್ನು ನ್ಯಾಯಪೀಠ ಒತ್ತಿ ಹೇಳಿದೆ. ಹಾಗೆಯೇ, ೨೯ ಫೋನ್‌ಗಳಲ್ಲಿ ಪೆಗಾಸಸ್‌ ಸ್ಪೈವೇರ್‌ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ನಾಲ್ಕು ವಾರಗಳ ಬಳಿಕ ಈ ಕುರಿತು ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿತು.

ಕೇಂದ್ರ ಸರಕಾರವು ಇಸ್ರೇಲ್‌ ಮೂಲದ ಸ್ಪೈವೇರ್‌ ಬಳಸಿ ರಾಜಕಾರಣಿಗಳು, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಸೇರಿ ೧೪೦ಕ್ಕೂ ಅಧಿಕ ಗಣ್ಯರ ಮೊಬೈಲ್‌ ಕದ್ದಾಲಿಕೆ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದು ದೇಶಾದ್ಯಂತ ಸುದ್ದಿಯಾಗಿ, ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತವಾದ ಕಾರಣ ಸರ್ವೋಚ್ಚ ನ್ಯಾಯಾಲಯವು ಈ ಕುರಿತು ತನಿಖೆ ನಡೆಸಲು ಸಮಿತಿ ರಚಿಸಿದೆ.

ಇದನ್ನೂ ಓದಿ | ಆ್ಯಪಲ್ ಹಾಗೂ ಆಂಡ್ರಾಯ್ಡ್‌ ಫೋನ್‌ಗಳ ಮೇಲೆ ಇಟಲಿ ಮೂಲದ spyware ದಾಳಿ

blob:https://www.ndtv.com/c0c40329-59f1-40f6-a1ff-774c6b77403c

Exit mobile version