Site icon Vistara News

Parliament Session : ವಿಶೇಷ ಅಧಿವೇಶನಕ್ಕೆ ಗೆಜೆಟ್ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

new Parliament building

ನವ ದೆಹಲಿ: ಸೆಪ್ಟೆಂಬರ್ 18 ರಿಂದ 22 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನಕ್ಕಾಗಿ ಭಾರತ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಸಂಸತ್‌ ಮುಂಗಾರು ಅಧಿವೇಶನ ಕೆಲ ದಿನಗಳ ಹಿಂದಷ್ಟೇ ಮುಕ್ತಾಯವಾಗಿತ್ತು. ಕೇಂದ್ರ ಸರ್ಕಾರ ಹಲವು ವಿಧೇಯಕಗಳನ್ನು ಮಂಡಿಸಿ, ಅಂಗೀಕಾರವನ್ನೂ ಪಡೆದಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಐದು ದಿನಗಳ ಸಂಸತ್‌ ವಿಶೇಷ ಅಧಿವೇಶನ (Parliament Session) ಕರೆದಿದೆ. ಅದರ ಗೆಜೆಟ್​ ಅಧಿಸೂಚನೆ ಪ್ರಕಟಿಸಿದೆ.

ಅಧಿವೇಣಶ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಸೆಪ್ಟೆಂಬರ್‌ 18ರಿಂದ 22ರವರೆಗೆ ವಿಶೇಷ ಅಧಿವೇಶನ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದರು. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ದೃಷ್ಟಿಯಿಂದ ವಿಧೇಯಕ ಮಂಡಿಸಲು ಅಧಿವೇಶನ ಕರೆಯಲಾಗಿದೆ ಎಂದೇ ಹೇಳಲಾಗುತ್ತಿದೆ. ಇನ್ನು ಏಕಾಏಕಿ ಅಧಿವೇಶನ ಕರೆದಿರುವುದಕ್ಕೆ ಪ್ರತಿ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

ಇದನ್ನೂ ಓದಿ: Parliament Special Session: ಒಂದು ರಾಷ್ಟ್ರ ಒಂದು ಚುನಾವಣೆಗೆ ಮುಹೂರ್ತ ಫಿಕ್ಸ್? ದಿಢೀರ್ ವಿಶೇಷ ಅಧಿವೇಶನದ ಹಿಂದಿನ ಗುಟ್ಟೇನು?

“ಸೆಪ್ಟೆಂಬರ್‌ 18ರಿಂದ 22ರವರೆಗೆ ಸಂಸತ್‌ ವಿಶೇಷ ಅಧಿವೇಶನ ನಡೆಯಲಿದೆ. 17ನೇ ಲೋಕಸಭೆಯ 13ನೇ ಸೆಷನ್‌ ಇದಾಗಿದ್ದು, ರಾಜ್ಯಸಭೆಯ 261ನೇ ಕಲಾಪ ಆಗಿದೆ. ಐದು ಕಲಾಪಗಳು ನಡೆಯಲಿದ್ದು, ಅಮೃತ ಕಾಲದ ಶುಭ ಘಳಿಗೆಯಲ್ಲಿ ಸಂಸತ್‌ನಲ್ಲಿ ಉತ್ತಮ ಚರ್ಚೆ, ಸಂವಾದ ನಡೆಯಲಿದೆ ಎಂಬ ವಿಶ್ವಾಸವಿದೆ” ಎಂದು ಪ್ರಲ್ಹಾದ್‌ ಜೋಶಿ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ, ಅವರು ಅಧಿವೇಶನಕ್ಕೆ ಕಾರಣ ತಿಳಿಸಿಲ್ಲ. ಸಂಸತ್‌ ಮುಂಗಾರು ಅಧಿವೇಶನವು ಆಗಸ್ಟ್‌ 11ರಂದು ಮುಕ್ತಾಯಗೊಂಡಿದೆ.

ಏಕರೂಪ ನಾಗರಿಕ ಸಂಹಿತೆ ಜಾರಿ?

ದೇಶದಲ್ಲಿ ಎಲ್ಲ ಧರ್ಮೀಯರಿಗೂ ಒಂದೇ ಕಾನೂನು ಅನ್ವಯವಾಗುವ ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಈಗಾಗಲೇ ರಾಷ್ಟ್ರೀಯ ಕಾನೂನು ಆಯೋಗವು ಜನರಿಂದ ಅಭಿಪ್ರಾಯ ಸಂಗ್ರಹಿಸಿದೆ. ಅಭಿಪ್ರಾಯ ಸಂಗ್ರಹಿಸಲು ನೀಡಿದ ಒಂದು ತಿಂಗಳಲ್ಲಿ 75 ಲಕ್ಷ ಜನ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಮೂಲಗಳ ಪ್ರಕಾರ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದಕ್ಕಾಗಿ ವಿಧೇಯಕ ಮಂಡಿಸಲು ವಿಶೇಷ ಅಧಿವೇಶನ ಕರೆದಿದೆ ಎಂದು ತಿಳಿದುಬಂದಿದೆ.

ಏನಿದು ಏಕರೂಪ ನಾಗರಿಕ ಸಂಹಿತೆ?

ಜಾತಿ, ಧರ್ಮ, ಪಂಥಗಳ ಭೇದ-ಭಾವ ಇಲ್ಲದೆ, ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂಬುದೇ ಏಕರೂಪ ನಾಗರಿಕ ಸಂಹಿತೆಯಾಗಿದೆ. ಸಂವಿಧಾನದ 44ನೇ ವಿಧಿಯು ಕೂಡ ಏಕರೂಪ ನಾಗರಿಕ ಸಂಹಿತೆ ಇರಬೇಕು ಎಂದು ಹೇಳುತ್ತದೆ. ಹಾಗಾಗಿ, ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಎಂದು 2019ರಲ್ಲಿಯೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದರೆ ಮುಸ್ಲಿಮರಲ್ಲಿರುವ ಬಹುಪತ್ನಿತ್ವದಂತಹ ಪದ್ಧತಿಗಳು ಕೊನೆಗೊಳ್ಳುತ್ತವೆ. ಎಲ್ಲರಿಗೂ ಒಂದೇ ಕಾನೂನು ಜಾರಿಗೆ ಬರುತ್ತದೆ. ಇದಕ್ಕಾಗಿ, ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬಾರದು ಎಂದು ಹಲವು ಧಾರ್ಮಿಕ ಸಂಸ್ಥೆಗಳು, ರಾಜಕಾರಣಿಗಳ ಒತ್ತಾಯವಾಗಿದೆ.

Exit mobile version