Site icon Vistara News

Ram Mandir: ನೇಪಾಳದ ಸೀತೆಯ ಮನೆಯಿಂದ ರಾಮಮಂದಿರಕ್ಕೆ 3 ಸಾವಿರ ಉಡುಗೊರೆ!

Ram Mandir Gifts

Government Shares Pics Of jewellery, Other gifts received for Ram Mandir From Nepal

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರ (Ram Mandir) ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿ ಇವೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಬೃಹತ್‌ ಧಾರ್ಮಿಕ ಕಾರ್ಯಕ್ರಮದಲ್ಲಿ ದೇಶದ ಸಾವಿರಾರು ಗಣ್ಯರು ಭಾಗಿಯಾಗಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೇ, ರಾಮಮಂದಿರಕ್ಕಾಗಿ ನೇಪಾಳವು (Nepal) ಚಿನ್ನಾಭರಣ ಸೇರಿ ಸುಮಾರು 3 ಸಾವಿರ ಉಡುಗೊರೆಗಳನ್ನು ಕಳುಹಿಸಿದೆ.

ಹೌದು, ನೇಪಾಳದ ಜನಕಪುರ ಧಾಮದಲ್ಲಿರುವ ಸೀತೆಯ ಮನೆಯಿಂದ ಚಿನ್ನ, ರಥ, ಬಾಣ, ಕಳಶ, ಬೆಳ್ಳಿಯ ಆಭರಣಗಳು ಸೇರಿ ಸುಮಾರು 3 ಸಾವಿರ ಉಡುಗೊರೆಗಳನ್ನು ಕಳುಹಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅಲ್ಲದೆ, ನೇಪಾಳ ಕಳುಹಿಸಿದ ಉಡುಗೊರೆಗಳ ಫೋಟೊಗಳನ್ನು ಕೂಡ ಹಂಚಿಕೊಂಡಿದೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ನೇಪಾಳದ ಗಣ್ಯರ ನಿಯೋಗ ಕೂಡ ಭಾಗಿಯಾಗಲಿದೆ. ಜನಕಪುರ ಧಾಮವು ಶ್ರೀರಾಮನ ಪತ್ನಿ ಸೀತೆ ಜನಿಸಿದ ಸ್ಥಳವಾಗಿದೆ. ಹಾಗಾಗಿ, ಉಡುಗೊರೆ ಕಳುಹಿಸಲಾಗಿದೆ.

ಯಾವ ದೇಶಗಳಿಂದ ಗಣ್ಯರ ಆಗಮನ?

ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ 55 ದೇಶಗಳಿಂದ ಸುಮಾರು 100ಕ್ಕೂ ಅಧಿಕ ಗಣ್ಯರು ಅಯೋಧ್ಯೆಗೆ ಆಗಮಿಸಲಿದ್ದಾರೆ. ಜರ್ಮನಿ, ಫಿಜಿ, ಫಿನ್‌ಲ್ಯಾಂಡ್‌, ಅಮೆರಿಕ, ಬ್ರಿಟನ್‌, ಜರ್ಮನಿ, ಇಂಡೋನೇಷ್ಯಾ, ಐರ್ಲೆಂಡ್‌, ಜಪಾನ್‌, ಕೀನ್ಯಾ, ಕೊರಿಯಾ, ಮಾರಿಷಸ್‌, ನಾರ್ವೆ ಸೇರಿ 55 ದೇಶಗಳ ಗಣ್ಯರು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಿಂಗಾಪುರ, ಸ್ಪೇನ್‌, ಶ್ರೀಲಂಕಾ, ಜಾಂಬಿಯಾ, ವಿಯೇಟ್ನಾಂ, ಉಗಾಂಡ, ವೆಸ್ಟ್‌ ಇಂಡೀಸ್‌ ದೇಶಗಳ ನಾಯಕರು ಕೂಡ ಪಟ್ಟಿಯಲ್ಲಿದ್ದಾರೆ.

ಬಿಗಿ ಬಂದೋಬಸ್ತ್

ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಉದ್ಘಾಟನೆ ದಿನ ಪ್ರಾಯೋಗಿಕವಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಇದೇ ತಂತ್ರಜ್ಞಾನ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Pranita Subhash: ರಾಮಮಂದಿರ ನಿರ್ಮಾಣಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದ ಪ್ರಣೀತಾ ಸುಭಾಷ್

ರಾಮಮಂದಿರ ಉದ್ಘಾಟನೆ ದಿನ ಗಣ್ಯರಿಗೂ ಸೇರಿ ಲಕ್ಷಾಂತರ ಜನರಿಗೆ ವಿಶೇಷ ರಾಮ ಹಲ್ವಾ ವಿತರಿಸಲಾಗುತ್ತದೆ. ವಿಷ್ಣು ಮನೋಹರ್‌ ಅವರು ರಾಮಮಂದಿರ ಉದ್ಘಾಟನೆಯ ದಿನ ಸುಮಾರು 7 ಸಾವಿರ ಕೆ.ಜಿ ರಾಮ ಹಲ್ವಾ ತಯಾರಿಸಲಿದ್ದಾರೆ. ಇದಕ್ಕಾಗಿ ಅವರು 12 ಸಾವಿರ ಲೀಟರ್‌ ನೀರಿನ ಸಾಮರ್ಥ್ಯದ ಬೃಹತ್‌ ಕಡಾಯಿಯೊಂದನ್ನು ಕೂಡ ತಯಾರಿಸಿದ್ದಾರೆ. “900 ಕೆಜಿ ರವೆ, 1 ಸಾವಿರ ಕೆಜಿ ತುಪ್ಪ, ಸಾವಿರ ಕೆಜಿ ಸಕ್ಕರೆ, 2 ಸಾವಿರ ಲೀಟರ್‌ ಹಾಲು, 2,500 ಲೀಟರ್‌ ನೀರು, 300 ಕೆಜಿ ಡ್ರೈ ಫ್ರೂಟ್ಸ್‌, 75 ಕೆಜಿ ಏಲಕ್ಕಿ ಪೌಡರ್‌ ಬಳಸಿಕೊಂಡು ವಿಶೇಷ ರಾಮ ಹಲ್ವಾ ತಯಾರಿಸಲಾಗುವುದು” ಎಂದು ವಿಷ್ಣು ಮನೋಹರ್‌ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version