ನವದೆಹಲಿ: ದೇಶದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಕೊಂಕಣಿ ಸೇರಿ 10 ಸ್ಥಳೀಯ ಭಾಷೆಗಳಲ್ಲಿ ತಾಂತ್ರಿಕ ಹಾಗೂ ವೈಜ್ಞಾನಿಕ ಪದಗಳ ಅರ್ಥಗಳುಳ್ಳ ನಿಘಂಟುಗಳನ್ನು ಮುದ್ರಿಸಲು ವೈಜ್ಞಾನಿಕ ಹಾಗೂ ತಾಂತ್ರಿಕ ಪರಿಭಾಷೆ ಆಯೋಗ (CSTT) ತೀರ್ಮಾನಿಸಿದೆ. ಇದರಿಂದ ತಾಂತ್ರಿಕ ಹಾಗೂ ವೈಜ್ಞಾನಿಕ ಪದಗಳ ಅರ್ಥಗಳು ಆಯಾ ಸ್ಥಳೀಯ ಭಾಷೆಗಳಲ್ಲಿ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಲಿದೆ.
ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಲಾಗಿರುವ 22 ಭಾಷೆಗಳಲ್ಲಿ ಸಂಸ್ಕೃತ, ಕೊಂಕಣಿ, ಬೋಡೊ, ಸಂಥಾಲಿ, ಡೋಗ್ರಿ, ಕಾಶ್ಮೀರಿ, ನೇಪಾಳಿ, ಮಣಿಪುರಿ, ಸಿಂಧಿ ಹಾಗೂ ಮೈಥಿಲಿ ಭಾಷೆಗಳಲ್ಲಿ ತಾಂತ್ರಿಕ ಹಾಗೂ ವೈಜ್ಞಾನಿಕ ಪದಗಳ ಅರ್ಥಗಳುಳ್ಳ ಡಿಕ್ಷನರಿಗಳನ್ನು ಸಿಎಸ್‌ಟಿಟಿ ಮುದ್ರಿಸಲಿದೆ. ತಾಂತ್ರಿಕ ಹಾಗೂ ವೈಜ್ಞಾನಿಕ ಪರಿಭಾಷೆಯ ಪದಗಳ ಅರ್ಥವು ಆಯಾ ಪ್ರಾದೇಶಿಕ ಭಾಷೆಗಳ ಜನರಿಗೆ ಗೊತ್ತಾಗಲಿ ಎಂಬ ದಿಸೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಹೇಗಿರಲಿವೆ ನಿಘಂಟುಗಳು?
ಸಿಎಸ್‌ಟಿಟಿಯು ಮುಂದಿನ ಮೂರು ತಿಂಗಳಲ್ಲಿ ಆರಂಭಿಕ ಹಂತವಾಗಿ 10 ಭಾಷೆಗಳಲ್ಲೂ 5 ಸಾವಿರ ಪದಗಳುಳ್ಳ ಸಾಮಾನ್ಯ ನಿಂಘಂಟುಗಳನ್ನು ಜನರಿಗೆ ಪರಿಚಯಿಸಲಿದೆ. ಸುಮಾರು 1ರಿಂದ 2 ಸಾವಿರ ಪ್ರತಿಗಳನ್ನು ಮುದ್ರಣ ಮಾಡಲಾಗುತ್ತದೆ. ಡಿಜಿಟಲ್ ರೂಪದಲ್ಲಿಯೂ ಜನರಿಗೆ ಉಚಿತವಾಗಿ ಈ ನಿಘಂಟುಗಳು ಲಭ್ಯ ಇರಲಿವೆ. ಬಳಿಕ ಬೃಹತ್ ಮಟ್ಟದಲ್ಲಿ ನಿಘಂಟುಗಳನ್ನು ಮುದ್ರಿಸುವ ಯೋಜನೆ ಸಿಎಸ್‌ಟಿಟಿ ಮುಂದಿದೆ ಎಂದು ತಿಳಿದುಬಂದಿದೆ.
15 ವಿಷಯಗಳಿಗೆ ಆದ್ಯತೆ
ಮೊದಲಿಗೆ 15 ವಿಷಯಗಳ ತಾಂತ್ರಿಕ ಹಾಗೂ ವೈಜ್ಞಾನಿಕ ಪದಗಳನ್ನು ನಿಘಂಟಿನಲ್ಲಿ ಸೇರಿಸಲಾಗುತ್ತದೆ. ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಕೆಮಿಸ್ಟ್ರಿ, ಫಿಸಿಕ್ಸ್, ಕಂಪ್ಯೂಟರ್ ಸೈನ್ಸ್, ಪತ್ರಿಕೋದ್ಯಮ, ಸಾರ್ವಜನಿಕ ಆಡಳಿತ, ಸಿವಿಲ್ ಹಾಗೂ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಸೇರಿ 15 ವಿಷಯಗಳ ಪದಗಳು ನಿಘಂಟಿನಲ್ಲಿ ಇರಲಿವೆ. ಇದಾದ ನಂತರ, ಮಾಧ್ಯಮಿಕ, ಹೈಸ್ಕೂಲ್ ಹಾಗೂ ವಿಶ್ವವಿದ್ಯಾಲಯ ಮಟ್ಟದ ಪಠ್ಯಪುಸ್ತಕಗಳ ಪದಗಳುಳ್ಳ ನಿಘಂಟುಗಳನ್ನು ಮುದ್ರಿಸಲಾಗುತ್ತದೆ. ಈ ನಿಘಂಟುಗಳನ್ನು ಶೈಕ್ಷಣಿಕ ಮಂಡಳಿಗಳು, ವಿಶ್ವವಿದ್ಯಾಲಯಗಳು ಹಾಗೂ ಟೆಸ್ಟಿಂಗ್ ಏಜೆಂಟ್‌ಗಳಿಗೆ ಕಳುಹಿಸಲಾಗುತ್ತದೆ.
ಇದನ್ನೂ ಓದಿ: Nirmala Sitharaman | ಸ್ಥಳೀಯ ಭಾಷೆ ಮಾತನಾಡುವವರನ್ನೇ ನೇಮಕ ಮಾಡಿಕೊಳ್ಳಿ, ಬ್ಯಾಂಕ್‌ಗಳಿಗೆ ನಿರ್ಮಲಾ ಸೂಚನೆ
ದೇಶದಲ್ಲಿ ಮೊದಲಿಗೆ 1950ರಲ್ಲಿ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ 14 ಭಾಷೆಗಳನ್ನು ಸೇರಿಸಿ, ಇವುಗಳನ್ನು ಅಧಿಕೃತ ಭಾಷೆಗಳು ಎಂದು ಘೋಷಿಸಲಾಯಿತು. ನಂತರ, 1967ರಲ್ಲಿ ಸಿಂಧಿ, 2004ರಲ್ಲಿ ಕೊಂಕಣಿ, ಮಣಿಪುರಿ ಸೇರಿ 22 ಭಾಷೆಗಳನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲಾಗಿದೆ.