ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಟೀಕೆಗಳು ಏನೇ ಇರಲಿ. ಆದರೆ, ಅವರು ಮೇಲ್ಪಂಕ್ತಿ ಹಾಕುವುದರಲ್ಲಿ ಮಾತ್ರ ನಿಸ್ಸೀಮರು. ಯೋಜನೆಗಳ ಪರಿಶೀಲನೆ ಸ್ಥಳದಲ್ಲಿ ಸಣ್ಣ ಕಸ ಬಿದ್ದರೂ ಅದನ್ನು ಹೆಕ್ಕುವುದು, ಬೇರೆ ದೇಶಗಳು ನೀಡುವ ಪ್ರಶಸ್ತಿ ಮೊತ್ತವನ್ನು ಸರಕಾರದ ಯೋಜನೆಗಳಿಗೆ ನೀಡುವುದು ಸೇರಿ ಹಲವು ರೀತಿಯಲ್ಲಿ ಮೋದಿ ಮಾದರಿ ಎನಿಸುತ್ತಾರೆ. ಈಗ ನರೇಂದ್ರ ಮೋದಿ ಅವರು ತಮ್ಮ ಊಟದ ವೆಚ್ಚವನ್ನು (Modi Food) ತಾವೇ ಭರಿಸುತ್ತಾರೆ. ಇದಕ್ಕಾಗಿ ಸರ್ಕಾರದ ಒಂದು ರೂಪಾಯಿಯನ್ನೂ ಪಡೆಯುವುದಿಲ್ಲ ಎಂದು ತಿಳಿದುಬಂದಿದೆ.
ಮೋದಿ ಅವರ ಊಟದ ವೆಚ್ಚವನ್ನು ಯಾರು ಭರಿಸುತ್ತಾರೆ ಎಂದು ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಇ) ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಪ್ರಧಾನಮಂತ್ರಿ ಕಚೇರಿ (ಪಿಎಂಒ) ಕಾರ್ಯದರ್ಶಿ ವಿನೋದ್ ಬಿಹಾರಿ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. “ನರೇಂದ್ರ ಮೋದಿ ಅವರು ತಮ್ಮ ಆಹಾರದ ವೆಚ್ಚವನ್ನು ತಾವೇ ಭರಿಸುತ್ತಾರೆ. ಇದಕ್ಕೆ ಸರ್ಕಾರದ ಬಜೆಟ್‌ನಿಂದ ಒಂದು ರೂಪಾಯಿಯೂ ಖರ್ಚಾಗುವುದಿಲ್ಲ” ಎಂದು ತಿಳಿಸಿದ್ದಾರೆ.
೨೦೧೫ರಲ್ಲಿ ಮೋದಿ ಅವರು ಬಜೆಟ್ ಅಧಿವೇಶನ ಮುಗಿದ ಬಳಿಕ ಸಂಸತ್ ಕ್ಯಾಂಟೀನ್‌ಗೆ ತೆರಳಿ ಅಚ್ಚರಿ ಮೂಡಿಸಿದ್ದರು. ಸಂಸದರಿಗೆ ಕ್ಯಾಂಟೀನ್‌ನಲ್ಲಿ ಸಿಗುತ್ತಿದ್ದ ಸಬ್ಸಿಡಿಯನ್ನು ಕಳೆದ ವರ್ಷ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ರದ್ದುಪಡಿಸಿದ್ದರು. ೨೦೨೧ಕ್ಕೂ ಮೊದಲು ಕ್ಯಾಂಟೀನ್‌ನಲ್ಲಿ ಸಂಸದರ ಸಬ್ಸಿಡಿಗಾಗಿ ೧೭ ಕೋಟಿ ರೂ. ವ್ಯಯಿಸಲಾಗಿತ್ತು.
ಇದನ್ನೂ ಓದಿ | ಯುವಜನರು ಡಿಗ್ರಿಗಾಗಿ ಕಲಿಯಬೇಡಿ, ವೃತ್ತಿಪರರಾಗಲು ಕಲಿಯಿರಿ ಎಂದ ಪ್ರಧಾನಿ ಮೋದಿ