Site icon Vistara News

Yoga Day 2023: ಯೋಗ ದಿನಾಚರಣೆ; ವಿದೇಶಗಳಿಂದಲೂ ಸಿಕ್ಕಿದೆ ಅದ್ಭುತ ಸ್ಪಂದನೆ

international yoga day celebration

#image_title

ಭಾರತದಲ್ಲಿ ಯೋಗಾಭ್ಯಾಸ (Yoga Day 2023) ಪುರಾತನ ಕಾಲದಿಂದಲೂ ಇರುವ ಪದ್ಧತಿ. ಋಷಿ-ಮುನಿಗಳ ಕಾಲದಿಂದಲೂ ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿಗಾಗಿ ಈ ಯೋಗಾಭ್ಯಾಸವನ್ನು ಮಾಡಿಕೊಂಡೇ ಬರಲಾಗಿದೆ.

ಯೋಗ ದಿನದ ವಿಶೇಷ

ಆದರೆ ಈಗೀಗ ಅಂತಾರಾಷ್ಟ್ರೀಯ ಮಟ್ಟದಲ್ಲೂ (yoga day celebration Across the World) ಯೋಗ ಪ್ರಸಿದ್ಧಿ ಪಡೆದಿದೆ. ಯೋಗವನ್ನು ವಿಶ್ವಸಂಸ್ಥೆಯೇ ಒಪ್ಪಿಕೊಂಡಿದೆ. ಮೈ-ಮನಸಿಗೆ ಮುದ-ಆರೋಗ್ಯ ಕೊಡುವ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಬೇಕು ಎಂದು 2015ರಲ್ಲಿ ಭಾರತ ವಿಶ್ವಸಂಸ್ಥೆಯಲ್ಲಿ ಕರಡು ಪ್ರಸ್ತಾಪವನ್ನು ಇಟ್ಟಾಗ ಅದಕ್ಕೆ ವಿಶ್ವಸಂಸ್ಥೆಯ 175 ರಾಷ್ಟ್ರಗಳು ಅನುಮೋದನೆ ಕೊಟ್ಟವು (ಸದ್ಯ ಯೋಗ ದಿನವನ್ನು 177 ರಾಷ್ಟ್ರಗಳು ಅನುಮೋದಿಸಿವೆ) ಅದಾದ ಮೇಲೆ ಅದೇ ವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು, 44 ಮುಸ್ಲಿಂ ರಾಷ್ಟ್ರಗಳು ಸೇರಿ ಒಟ್ಟು 192 ರಾಷ್ಟ್ರಗಳು ಯೋಗ ದಿನವನ್ನು ಆಚರಿಸಿದವು. ಅಂದಮೇಲೆ ಭಾರತದ ಸಂಪ್ರದಾಯಕ್ಕೆ, ಪದ್ಧತಿಗೆ ಸಿಕ್ಕಿದ್ದು ಅಭೂತಪೂರ್ವ ಸ್ಪಂದನೆಯೇ ಅಲ್ಲವೇ?

ವಿದೇಶಗಳಲ್ಲೂ ಇತ್ತು ಯೋಗ!

ಯೋಗದ ಜನಕ ಭಾರತವೇ ಆದರೂ, ಚೀನಾ, ಜಪಾನ್​, ಅಮೆರಿಕ ಸೇರಿ ಒಂದಷ್ಟು ದೇಶಗಳಲ್ಲಿ ಕೂಡ ತುಂಬ ಹಿಂದಿನಿಂದಲೇ ಯೋಗಾಭ್ಯಾಸ ಪದ್ಧತಿ ಇತ್ತು. ಸೀಮಿತ ವರ್ಗದ ಜನರು ಯೋಗವನ್ನು ಮಾಡುತ್ತಿದ್ದರು. ಆದರೆ ಅದಕ್ಕೊಂದು ರೂಪುರೇಷೆ ಇರಲಿಲ್ಲ. ಚೌಕಟ್ಟು ಇರಲಿಲ್ಲ. ಭಾರತದಲ್ಲಿ ಯೋಗ ಪ್ರಸಿದ್ಧಿಯಾದಷ್ಟು, ಇಲ್ಲಿ ಸಿಕ್ಕಷ್ಟು ಮನ್ನಣೆ ಉಳಿದ ದೇಶಗಳಲ್ಲಿ ಯೋಗಾಭ್ಯಾಸಕ್ಕೆ ಸಿಕ್ಕಿರಲಿಲ್ಲ. ಯೋಗದಿಂದ ಇರುವ ಆರೋಗ್ಯ ಪ್ರಯೋಜನಗಳು, ಮಾನಸಿಕ ಆರೋಗ್ಯದ ಮಹತ್ವ ಮತ್ತು ಅದಕ್ಕಿರುವ ಅಧ್ಯಾತ್ಮಿಕ ಪ್ರಾಮುಖ್ಯತೆಯ ಪರಿಕಲ್ಪನೆ ಯಾವುದೇ ದೇಶಕ್ಕೂ ಇರಲಿಲ್ಲ. ಯೋಗವನ್ನು ಅನುಸರಿಸಿ, ಅಳವಡಿಸಿಕೊಂಡವರ ವರ್ಗ ಸಣ್ಣದಿತ್ತು.

ಆದರೆ 2015ರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ, ಯೋಗವನ್ನು ದೊಡ್ಡದಾಗಿ ಆಚರಿಸಲಾಗುತ್ತಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಟರ್ಕಿ, ಇರಾನ್, ಇಂಡೋನೇಷಿಯಾ, ಯುನೈಟೆಡ್​ ಅರಬ್​ ಎಮಿರೇಟ್ಸ್​, ಕತಾರ್ ಮತ್ತು ಓಮನ್ ಸೇರಿ 46 ಮುಸ್ಲಿಂ ದೇಶಗಳು ಕೂಡ 2015ರಲ್ಲಿಯೇ ಯೋಗವನ್ನು ಒಪ್ಪಿಕೊಂಡು, ಆಚರಿಸಿದ್ದವು. 2017ರಲ್ಲಿ ಸೌದಿ ಅರೇಬಿಯಾ ಕೂಡ ಅಪ್ಪಿಕೊಂಡಿತು. ಇನ್ನು ಅಮೆರಿಕ, ಕೆನಡಾ, ಸಿಂಗಾಪುರ, ಚೀನಾ, ಜಪಾನ್ ಮತ್ತಿತರ ರಾಷ್ಟ್ರಗಳಲ್ಲಿ ಕೂಡ ಯೋಗ ದಿನಾಚರಣೆಯನ್ನು ಅತ್ಯುತ್ಸಾಹದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅಷ್ಟೇ ಅಲ್ಲ, ಬರೀ ಜೂ.21ರ ಯೋಗ ದಿನಾಚರಣೆ ದಿನವಷ್ಟೇ ಅಲ್ಲ, ಉಳಿದ ದಿನಗಳಲ್ಲೂ ಅಲ್ಲೆಲ್ಲ ಯೋಗ್ಯಾಭ್ಯಾಸ ನಡೆಯುತ್ತಲೇ ಇರುತ್ತದೆ.

ಕೆನಡಾ ಮೊದಲ ಸ್ಥಾನದಲ್ಲಿ!

2023ರ ಗ್ಲೋಬಲ್​ ಯೋಗಾ ಇಂಡಸ್ಟ್ರಿ ಮಾಹಿತಿ ಪ್ರಕಾರ, ವಿಶ್ವದಲ್ಲಿ ಯೋಗ್ಯಾಭ್ಯಾಸ ಅತಿ ಹೆಚ್ಚು ನಡೆಯುತ್ತಿರುವುದು ಕೆನಡಾದಲ್ಲಿ. ಅಂದರೆ ಇಡೀ ಜಗತ್ತಿನಲ್ಲಿ, ಕೆನಡಾದಲ್ಲೇ ಅತಿ ಹೆಚ್ಚು ಜನರು ಪ್ರತಿದಿನ ಯೋಗಾಭ್ಯಾಸ ಮಾಡುತ್ತಿದ್ದಾರಂತೆ. ಎರಡನೇ ಸ್ಥಾನದಲ್ಲಿ ಸಿಂಗಾಪುರ, ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾ, ನಂತರ ಯುಎಸ್​, ಭಾರತ ದೇಶಗಳು ಇವೆ. ಯೋಗ ಅತ್ಯಂತ ಪ್ರಸಿದ್ಧಿ ಪಡೆದಿರುವ ಕೆನಡಾದಲ್ಲಿ, ಐವರಲ್ಲಿ ಒಬ್ಬರು ಯೋಗಾಭ್ಯಾಸ ಅಳವಡಿಸಿಕೊಂಡಿದ್ದಾರೆ. ಇಲ್ಲೀಗ 2000ಕ್ಕೂ ಅಧಿಕ ಯೋಗ ಬೋಧಕರು ಇದ್ದಾರೆ. ಇಲ್ಲಿನ ಶೇ.9ರಷ್ಟು ವಯಸ್ಕರು ಯೋಗವನ್ನು ಚಿಕಿತ್ಸೆ ಮತ್ತು ವ್ಯಾಯಾಮದ ಒಂದು ಭಾಗವಾಗಿ ಮಾಡುತ್ತಿದ್ದಾರೆ.

ಇನ್ನು ಯೋಗ ಎಂಬುದು ಅಮೆರಿಕ ಸಂಸ್ಕೃತಿಯ ಒಂದು ಅಂಗ ಎಂದೇ ಹೇಳಿಕೊಳ್ಳುತ್ತಿದೆ. ಇಲ್ಲಿ ಒಟ್ಟಾರೆ ಜನಸಂಖ್ಯೆಯ ಶೇ.10ರಷ್ಟು ಜನರು ಯೋಗಾಭ್ಯಾಸವನ್ನು ಪ್ರತಿನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. 2010ರಿಂದ 2021ರ ಅವಧಿಯಲ್ಲಿ ಇಲ್ಲಿ ಯೋಗದ ಪ್ರಸಿದ್ಧತೆ ಶೇ.63.8ರಷ್ಟು ಹೆಚ್ಚಿದೆ. ಅದೂ ಕೂಡ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಾರಂಭವಾದ ಮೇಲೆಯೇ ಯೋಗದ ಪ್ರಾಮುಖ್ಯತೆ ಅಧಿಕವಾಗಿದೆ ಎನ್ನಲಾಗಿದೆ. ಚೀನಾದಲ್ಲೂ ಕೂಡ ಸುಮಾರು 1 ಕೋಟಿ ಜನರು ಯೋಗವನ್ನು ಅಳವಡಿಸಿಕೊಂಡಿದ್ದಾರಂತೆ. ಸಿಂಗಾಪುರ್​​ನಲ್ಲಿ 4 ಮಿಲಿಯನ್​ಗೂ ಹೆಚ್ಚಿನ ಜನರು ಯೋಗ ಮಾಡುತ್ತಿದ್ದಾರಂತೆ. ಇದರಾಚೆ ವಿಶ್ವದ ಹಲವು ಸಣ್ಣಪುಟ್ಟ ರಾಷ್ಟ್ರಗಳೆಲ್ಲ ಯೋಗಾಭ್ಯಾಸವನ್ನು ಅಳವಡಿಸಿಕೊಂಡಿವೆ.

ಯಾಕೆ ಪ್ರಸಿದ್ಧಿ ಪಡೆಯಿತು?

ವಿವಿಧ ದೇಶಗಳಲ್ಲಿ ಬಹಳ ಹಿಂದಿನಿಂದಲೂ ಯೋಗದ ಬಗ್ಗೆ ಅರಿವಿದ್ದರೂ ಅದರಲ್ಲಿ ನ ‘ಆಸನ’ಗಳ ಪರಿಕಲ್ಪನೆ ಇರಲಿಲ್ಲ. ನಮ್ಮ ದೇಶದ ಆಯುರ್ವೇದ ಪದ್ಧತಿಯಲ್ಲಿ ಹಲವು ಬಗೆಯ ಅನಾರೋಗ್ಯಕ್ಕೆ ಇಂತಿಂಥ ಆಸನ ಮಾಡಬೇಕು ಎಂದು ಉಲ್ಲೇಖಿಸಲಾಗಿದೆ. ಯೋಗಾಭ್ಯಾಸದಲ್ಲಿ ಇರುವ ಕೆಲವು ಆಸನಗಳನ್ನು ಮಾಡಿಯೇ ಅದೆಷ್ಟೊ ತೊಂದರೆಗಳನ್ನು ಕಡಿಮೆ ಮಾಡಿಕೊಂಡವರ ಉದಾಹರಣೆಗಳೂ ಇವೆ. 2105ರಲ್ಲಿ ಭಾರತ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರ ಪಡಿಸುವ ಜತೆ ಆಸನಗಳ ಮಹತ್ವವನ್ನೂ ಸಾರಿತು. ಆಸನಗಳಿಂದ ಅನಾರೋಗ್ಯ ಪರಿಹಾರ ಮಾಡಿಕೊಳ್ಳಬಹುದು ಎಂಬುದನ್ನೂ ಲೋಕಕ್ಕೆ ತಿಳಿಸಿತು. ಅಷ್ಟೇ ಅಲ್ಲ, ಧ್ಯಾನ, ಪ್ರಾಣಾಯಾಮಗಳು ದೇಹಕ್ಕೆ ಕೊಡುವ ಚೈತನ್ಯವನ್ನು ತೋರಿಸಿಕೊಟ್ಟಿತು. ಪಾಶ್ಚಾತ್ಯ ರಾಷ್ಟ್ರಗಳು ಯೋಗದ ಬಗ್ಗೆ ಆಕರ್ಷಿತರಾಗಲು ಇದೇ ಕಾರಣವೂ ಆಯಿತು. ಚರ್ಮಕ್ಕೆ ಸಂಬಂಧಪಟ್ಟ, ಆಹಾರ ಸಂಬಂಧಿ, ಮತ್ತಿತರ ಕಾಯಿಲೆಗಳಿಂದ ಪಾರಾಗಲು, ಒತ್ತಡದ ಬದುಕಿಂದ ಮುಕ್ತಿ ಪಡೆಯಲು ವಿದೇಶಿಯರು ಯೋಗದ ಬಗ್ಗೆ ಹೆಚ್ಚೆಚ್ಚು ಆಸಕ್ತಿ ತೋರಿಸಲು ಪ್ರಾರಂಭಿಸಿದರು.

ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’ ಪ್ರಸ್ತಾಪವನ್ನು ಇಟ್ಟರು. ಯಾಕಾಗಿ ಇದನ್ನ ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಬೇಕು ಎಂಬುದಕ್ಕೆ ಸಮರ್ಥ ವಿವರಣೆಯನ್ನೂ ಭಾರತ ಕೊಟ್ಟಿದೆ. ಅದನ್ನು ವಿಶ್ವ ಸಂಸ್ಥೆ ಒಪ್ಪಿಕೊಂಡು, ಸದಸ್ಯ ರಾಷ್ಟ್ರಗಳು ಅನುಮೋದಿಸಿವೆ. ಆಗಿನಿಂದಲ ಇಲ್ಲಿಯವರೆಗೆ ಭಾರತ, ಯೋಗಕ್ಕೆ ಸಂಬಂಧಪಟ್ಟ ಹಲವು ಕಾರ್ಯಕ್ರಗಳನ್ನು ಆಯೋಜಿಸುತ್ತಿದೆ. ವಿದೇಶಗಳಲ್ಲೂ ಯೋಗದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅದರ ಮಹತ್ವವನ್ನು ಸಾರುತ್ತಿದೆ. ಯೋಗದಲ್ಲಿರುವ ಬಗೆಗಳನ್ನು, ಇದು ಮನುಷ್ಯನ ಮನಸು, ದೇಹವನ್ನು ಆರೋಗ್ಯವನ್ನಾಗಿಸುವ ರೀತಿಯನ್ನು ಮನಮುಟ್ಟುವಂತೆ ಹೇಳುತ್ತಿದೆ. ಹೀಗಾಗಿ ಯೋಗದ ಪ್ರಸಿದ್ಧಿ ದಿನೇದಿನೇ ಪ್ರಖರಿಸುತ್ತಲೇ ಇದೆ. ಹೆಚ್ಚೆಚ್ಚು ರಾಷ್ಟ್ರಗಳು ಒಪ್ಪಿಕೊಳ್ಳುತ್ತಿವೆ. ಕೊವಿಡ್ 19 ಕಾಲದಲ್ಲೂ ಕೂಡ ಜಗತ್ತಿನಾದ್ಯಂತ ಯೋಗ ಅನೇಕರ ಕೈ ಹಿಡಿದಿದೆ. ಈ ವರ್ಷ ಜೂ.21ಕ್ಕೂ ಕೂಡ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ಅತ್ಯುತ್ಸಾಹದಿಂದ ಕಾಯುತ್ತಿವೆ.

Exit mobile version