ಭಾರತದಲ್ಲಿ ಮದುವೆಗಳೆಂದರೆ ವಿಶೇಷ (Weddings In India). ಇಲ್ಲಿ ಇದು ಗಂಡು-ಹೆಣ್ಣೆಂಬ ಸೇತುವೆಯ ಮೂಲಕ ಎರಡು ಕುಟುಂಬಗಳನ್ನು ಸಂಪೂರ್ಣವಾಗಿ ಬೆಸೆಯುತ್ತದೆ. ಒಂದು ಮದುವೆಯಾಗುತ್ತಿದೆ ಎಂದರೆ ಅಲ್ಲಿ ವಧು-ವರನ ನಡುವಳಿಕೆ, ವರ್ತನೆ, ಮಾತುಗಳಷ್ಟೇ ಅಲ್ಲ, ಆ ಎರಡೂ ಕುಟುಂಬದ ಸದಸ್ಯರ ವರ್ತನೆಗಳೂ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಅದರಲ್ಲೂ ವಿಶೇಷವಾಗಿ ಹುಡುಗ/ಹುಡುಗಿಯ ಅಪ್ಪ-ಅಮ್ಮನ ಬಗ್ಗೆಯೂ ಗಮನ ಹೋಗುತ್ತದೆ. ಇವರ ಮಾತು-ವರ್ತನೆಗಳೂ ಪರಿಗಣಿಸಲ್ಪಡುತ್ತವೆ. ಇಷ್ಟೆಲ್ಲ ಹೇಳಲು ಕಾರಣವಿದೆ. ಉತ್ತರ ಪ್ರದೇಶದಲ್ಲಿ ಒಂದು ಮದುವೆ ಮುರಿದುಬಿದ್ದಿದೆ. ವರನೇ ಸ್ವತಃ ತನಗೆ ಈ ಕುಟುಂಬದೊಂದಿಗೆ ಸಂಬಂಧ ಬೇಡವೆಂದಿದ್ದಾನೆ (Wedding Calls Off). ಅದಕ್ಕೆ ಕಾರಣ ವಧುವಿನ ತಾಯಿಯ ಒಂದು ವರ್ತನೆ.
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ರಾಜ್ಪುರ ಎಂಬ ಹಳ್ಳಿಯಲ್ಲಿ ಜೂ.27ರಂದು ಮದುವೆ ನಿಶ್ಚಯವಾಗಿತ್ತು. ವಿವಾಹದ ಮುನ್ನಾದಿನ ವಧು-ವರನ ಕುಟುಂಬದವರು ಸೇರಿ ಭರ್ಜರಿಯಾಗಿ ಕೆಲವು ಆಚರಣೆಗಳನ್ನು ನಡೆಸುತ್ತಿದ್ದರು. ಸಂಪ್ರದಾಯದೊಂದಿಗೆ ಹಾಡು-ಕುಣಿತ, ಮ್ಯೂಸಿಕ್ ಎಲ್ಲವೂ ಇದ್ದವು. ವಧು-ವರ, ಅವರ ಕುಟುಂಬದವರು, ನೆಂಟರೆಲ್ಲ ತಮ್ಮದೇ ಸಂತೋಷದಲ್ಲಿ ಮುಳುಗಿದ್ದರು. ಅದೇ ವೇಳೆ ವಧುವಿನ ಅಮ್ಮ, ಸಿಕ್ಕಾಪಟೆ ಜೋಶ್ನಲ್ಲಿ ಡ್ಯಾನ್ಸ್ ಮಾಡುತ್ತ, ಸಿಗರೇಟ್ ಸೇದುತ್ತ ಹೊಗೆಯನ್ನು ವರನ ಮುಖಕ್ಕೆ ಬಿಟ್ಟಿದ್ದಾಳೆ. ಅದೂ ಕೂಡ ಸುರುಳಿ ಸುರಳಿಯಾಗಿ ಸಿಗರೇಟ್ ಹೊಗೆ ಬಿಟ್ಟಿದ್ದಾಳೆ. ಹೀಗೆ ಸಿಗರೇಟ್ ಹೊಗೆ ಮಖಕ್ಕೆ ರಾಚುತ್ತಿದ್ದಂತೆ ತೀವ್ರ ಕಿರಿಕಿರಿಗೊಂಡ ವರ ಮದುವೆ ಬೇಡ್ವೇ ಬೇಡ ಎಂದು ಪಟ್ಟು ಹಿಡಿದಿದ್ದಾನೆ.
ಇದನ್ನೂ ಓದಿ: Viral Video: ಮದುವೆ ರಿಸೆಪ್ಶನ್‌ನಲ್ಲೇ ನವದಂಪತಿ ಜಗಳ, ಗಂಡ ಸ್ವೀಟ್ ಕೊಟ್ಟರೆ ಎಸೆದ ಪತ್ನಿ; ಮುಂದೆ ಹೇಗೋ?
ವಧುವಿನ ತಾಯಿಯನ್ನು ನೋಡಿ ಕಂಗಾಲಾಗಿದ್ದ ಅವನು ಮದುವೆಯೇ ಬೇಡ ಎನ್ನುತ್ತಿದ್ದಂತೆ ಎರಡೂ ಕುಟುಂಬಗಳ ಮಧ್ಯೆ ವಾಗ್ವಾದ ಶುರುವಾಗಿತ್ತು. ಯಾವ ಕಾರಣಕ್ಕೂ ಮದುವೆ ಬೇಡ ಎಂಬುದೇ ವರನ ಪಟ್ಟಾಗಿತ್ತು. ಪಂಚಾಯಿತಿ ನಡೆಸಿ, ಎರಡೂ ಕುಟುಂಬಗಳ ನಡುವಿನ ವಾಗ್ವಾದ ಬಗೆಹರಿಸಲು ಪ್ರಯತ್ನಿಸಲಾಗಿದೆ. ನೀನು ಸಂಸಾರ ಮಾಡುವುದು ಹೆಂಡತಿಯೊಂದಿಗೆ, ಆಕೆಯ ತಾಯಿಯೊಂದಿಗೆ ಅಲ್ಲ ಎಂಬ ಬುದ್ಧಿಮಾತುಗಳನ್ನೂ ವರನಿಗೆ ಹಿರಿಯರು ಹೇಳಿದರು. ಆದರೆ ಎರಡೂ ಕುಟುಂಬಗಳ ನಡುವಿನ ಜಗಳ ಕೊನೆಗೊಂಡರೂ, ಮದುವೆಯಾಗಲಿಲ್ಲ ಎಂದು ವರದಿಯಾಗಿದೆ. ಇನ್ನು ಆ ವಧು ಕೂಡ ಮಂಟಪಕ್ಕೆ ಬರುವಾಗ ಅತಿಥಿಗಳ ಕಡೆಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾಳೆ. ಇದೂ ನಮಗೆ ಸೂಕ್ತ ಎನ್ನಿಸಿಲ್ಲ ಎಂದು ವರನ ಕುಟುಂಬ ಹೇಳಿಕೊಂಡಿದೆ.