ಸೈದ್ಪುರ (ಉತ್ತರ ಪ್ರದೇಶ): ಮಂಟಪದವರೆಗೆ ಹೋದ ‘ಮದುವೆ’ಗಳು ರದ್ದಾದ (Wedding Cancel) ಅದೆಷ್ಟೋ ಉದಾಹರಣೆಗಳನ್ನು ನೋಡಿದ್ದೇವೆ. ವರ ಕುಡಿದು ಮಂಟಪಕ್ಕೆ ಬಂದನೆಂದು, ವರನ ಕಡೆಯವರು ಕೊಟ್ಟ ಸೀರೆ ಚೆನ್ನಾಗಿಲ್ಲವೆಂದು..ಹೀಗೆ ಇತ್ಯಾದಿ ಕಾರಣಕ್ಕೆ ವಧು ಮದುವೆಯನ್ನು ನಿರಾಕರಿಸಿ ಎದ್ದುಹೋದಿದ್ದನ್ನು ಕೇಳಿದ್ದೇವೆ. ಆದರೆ ಈ ಘಟನೆ ವಿಭಿನ್ನ. ಇಲ್ಲೊಬ್ಬಳು ನವವಧು ಮದುವೆಯಾದ ಕೆಲವೇ ಗಂಟೆಯಲ್ಲಿ ಆ ಗಂಡನನ್ನು ಬಿಟ್ಟು, ಅವನ ಕಿರಿಯ ಸಹೋದರನನ್ನು ಮದುವೆಯಾಗಿದ್ದಾಳೆ. ದೇಶದ ಪ್ರಧಾನಮಂತ್ರಿ (Prime Minister Of India) ಯಾರೆಂದು ಕೇಳಿದ ಪ್ರಶ್ನೆಗೆ ಪತಿ ಉತ್ತರಿಸಲಿಲ್ಲ ಎಂಬ ಕಾರಣಕ್ಕೆ ಆ ಯುವತಿ ಹೀಗೆ ಮದುವೆ ಮುರಿದುಕೊಂಡಿದ್ದಾಳೆ.
ಉತ್ತರಪ್ರದೇಶದ ಸೈದ್ಪುರ ಠಾಣೆ ವ್ಯಾಪ್ತಿಯ ನಾಸಿರ್ಪುರ ಗ್ರಾಮದಲ್ಲಿ ರಾಮ್ ಅವತಾರ್ ಎಂಬುವರ ಮಗ ಶಿವಶಂಕರ್ (27) ಮತ್ತು ಲಖೇದು ರಾಮ್ ಎಂಬುವರ ಪುತ್ರಿ ರಂಜನಾಗೆ ವಿವಾಹ ಗೊತ್ತಾಗಿತ್ತು. ಈಕೆ ಬಸಂತ್ ಪಟ್ಟಿ ಗ್ರಾಮದವಳು. ಆರು ತಿಂಗಳ ಹಿಂದೆ ಇವರಿಬ್ಬರ ಮದುವೆ ನಿಶ್ಚಯವಾಗಿತ್ತು. ರಂಜನಾ ಕುಟುಂಬದವರು ಶಿವಶಂಕರ್ಗೆ ತಿಲಕವಿಟ್ಟು ಮದುವೆ ನಿಗದಿ ಮಾಡಿದ್ದರು. ಅಲ್ಲಿಂದ ಮದುವೆಯವರೆಗೂ ಹುಡುಗ-ಹುಡುಗಿ ಇಬ್ಬರೂ ಫೋನ್ನಲ್ಲಿ ಮಾತಾಡಿಕೊಂಡು ಇದ್ದರು. ಈಗ ಜೂನ್ 11ರಂದು ವಿವಾಹವೂ ನೆರವೇರಿತು.
ಇದನ್ನೂ ಓದಿ: Viral News: ನಿಮ್ಮ ಕಿರುಕುಳ, ಒತ್ತಡ ನಿಭಾಯಿಸುವ ಮಂತ್ರ ಕಲಿಯಲು ರಜೆ ಕೊಡಿ: ಪೊಲೀಸ್ ಅಧಿಕಾರಿ ಪತ್ರ!
ಮದುವೆಯಾದ ಮರುದಿನ ಎರಡೂ ಕುಟುಂಬದವರು ಸೇರಿ ಖಿಚಡಿ ಕಾರ್ಯಕ್ರಮ ಆಯೋಜಿಸಿದ್ದರು. ಅಂದರೆ ಪ್ರಶ್ನೋತ್ತರ ಆಟ. ವಧುವಿನ ಕಡೆಯವರು ವರನಿಗೆ, ವರನ ಕಡೆಯವರು ವಧುವಿಗೆ ಪ್ರಶ್ನೆ ಕೇಳಿ, ಉತ್ತರ ಪಡೆಯುವ ಗೇಮ್. ಈ ಖಿಚಡಿ ಆಡುವಾಗ ವಧುವಿನ ಸೋದರಿ ವರನಿಗೆ ದೇಶದ ಪ್ರಧಾನಿ ಯಾರು ಎಂದು ಕೇಳಿದ್ದಾರೆ. ಆದರೆ ಅದಕ್ಕೆ ವರ ಉತ್ತರ ಕೊಡಲಿಲ್ಲ. ಅದು ಬಿಟ್ಟು ಇನ್ನೂ ಕೆಲವು ಪ್ರಶ್ನೆ ಕೇಳಿದಾಗಲೂ ವರನ ಕಡೆಯಿಂದ ಉತ್ತರವೇ ಬರಲಿಲ್ಲ. ಇದರಿಂದ ವಧು ಕೆಂಡಾಮಂಡಲಳಾಗಿದ್ದಾಳೆ. ಇಷ್ಟೆಲ್ಲ ನಿಧಾನ, ಜ್ಞಾನವಿಲ್ಲದ ಗಂಡ ತನಗೆ ಬೇಡವೆಂದು, ಆ ಕ್ಷಣವೇ ಮದುವೆ ಮುರಿದುಕೊಂಡಿದ್ದಾಳೆ. ಬಳಿಕ ಆಕೆಯ ಮತ್ತು ವರನ ಮನೆಯವರ ಒತ್ತಾಯದ ಮೇರೆಗೆ ವರನ ಕಿರಿಯ ಸಹೋದರನನ್ನು ಮತ್ತೆ ಮದುವೆಯಾಗಿದ್ದಾಳೆ.