ಲಕ್ನೋ: ಮಹಿಳೆಯರ ಉದ್ದ ಕೂದಲು ಸೌಂದರ್ಯದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇದೀಗ ಉದ್ದ ಕೂದಲಿನಿಂದಲೇ ಮಹಿಳೆಯೊಬ್ಬರು ಗಿನ್ನಿಸ್ ವಿಶ್ವ ದಾಖಲೆ (Guinness World Record) ನಿರ್ಮಿಸಿದ್ದಾರೆ. ಉತ್ತರ ಪ್ರದೇಶದ 46 ವರ್ಷದ ಸ್ಮಿತಾ ಶ್ರೀವಾಸ್ತವ (Smita Srivastava) ಎನ್ನುವ ಮಹಿಳೆ ಅತೀ ಉದ್ದದ ಕೂದಲು ಹೊಂದುವ ಮೂಲಕ ಸುದ್ದಿಯಾಗಿದ್ದಾರೆ. ಅವರ ಕೂದಲು ಬರೋಬ್ಬರಿ 7 ಅಡಿ 9 ಇಂಚು (236.22 ಸೆಂಟಿ ಮೀಟರ್) ಉದ್ದ ಹೊಂದಿದೆ.
“ಭಾರತೀಯ ಸಂಸ್ಕೃತಿಯಲ್ಲಿ, ದೇವತೆಗಳು ಸಾಂಪ್ರದಾಯಿಕವಾಗಿ ಬಹಳ ಉದ್ದವಾದ ಕೂದಲನ್ನು ಹೊಂದಿದ್ದರು. ನಮ್ಮ ಸಮಾಜದಲ್ಲಿ ಕೂದಲನ್ನು ಕತ್ತರಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮಹಿಳೆಯರು ಕೂದಲನ್ನು ಉದ್ದ ಬೆಳೆಸುತ್ತಿದ್ದರು” ಎನ್ನುವ ಸ್ಮಿತಾ ಅವರ ಹೇಳಿಕೆಯನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ವೆಬ್‌ಸೈಟ್ ಉಲ್ಲೇಖಿಸಿದೆ. “ಉದ್ದನೆಯ ಕೂದಲು ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುತ್ತದೆ” ಎಂದೂ ಸ್ಮಿತಾ ಅಭಿಪ್ರಾಯಪಟ್ಟಿದ್ದಾರೆ.
Say hello to Smita Srivastava from India, the woman with the longest hair in the world 🙋♀️
— Guinness World Records (@GWR) November 29, 2023
Her long locks were measured at 236.22 centimeters (7 ft 9 in) 👀 pic.twitter.com/Pkb6xms8Sp
ಕೂದಲು ತೊಳೆಯಲು 35-40 ನಿಮಿಷ ಬೇಕು!
ಸ್ಮಿತಾ ವಾರಕ್ಕೆ ಎರಡು ಬಾರಿ ಕೂದಲನ್ನು ತೊಳೆಯುತ್ತಾರೆ ಎಂದು ಗಿನ್ನಿಸ್ ವೆಬ್‌ಸೈಟ್ ವರದಿ ಮಾಡಿದೆ. ಕೂದಲು ಒಣಗಿಸುವುದು ಮತ್ತು ಸ್ಟೈಲಿಂಗ್ ಅನ್ನು ಒಳಗೊಂಡಿರುವ ಈ ಪ್ರಕ್ರಿಯೆಯು ಪ್ರತಿ ಬಾರಿಯೂ ಮೂರು ಗಂಟೆ ತೆಗೆದುಕೊಳ್ಳುತ್ತದೆಯಂತೆ. ʼʼಕೂದಲನ್ನು ತೊಳೆಯಲು ಸುಮಾರು 35-40 ನಿಮಿಷ ಬೇಕು. ಅದರ ನಂತರ ಒಣಗಿಸುವ ಪ್ರಕ್ರಿಯೆ. ಟವೆಲ್ ಬಳಸಿ ಕೂದಲನ್ನು ಒಣಗಿಸುವ ಕೆಲಸ ಮತ್ತು ಕೈಯನ್ನು ಬಳಸಿ ಕೂದಲಿನ ಸಿಕ್ಕು ಬಿಡಿಸುವ ಪ್ರಕ್ರಿಯೆ ಸುಮಾರು ಎರಡು ಗಂಟೆ ತೆಗೆದುಕೊಳ್ಳುತ್ತದೆʼʼ ಎಂದು ಸ್ಮಿತಾ ಅವರ ಆಪ್ತರು ಹೇಳಿದ್ದಾರೆ.
ಸ್ಮಿತಾ ತನ್ನ ಕೂದಲನ್ನು ಕಾಳಜಿಯಿಂದ ಆರೈಕೆ ಮಾಡುತ್ತಾರೆ ಮತ್ತು ಆ ಬಗ್ಗೆ ಹೆಮ್ಮೆ ಹೊಂದಿದ್ದಾರೆ. ಬಿದ್ದ ಎಳೆಗಳ ಸಹ ಅವರು ಎಸೆಯುವುದಿಲ್ಲ. ಸುಮಾರು 20 ವರ್ಷಗಳಲ್ಲಿ ತಾನು ಎಂದಿಗೂ ತನ್ನ ಕೂದಲನ್ನು ಬಿಸಾಡಿಲ್ಲ ಎಂದು ಅವರು ಹೇಳಿದ್ದಾರೆ. ಸದ್ಯ ಅವರು ತಮ್ಮ ಕೂದಲಿನ ದೊಡ್ಡ ಸಂಗ್ರಹವನ್ನೇ ಹೊಂದಿದ್ದಾರೆ.
ಇದನ್ನೂ ಓದಿ: Solar Storm: ಇಂದು ಬೀಸಲಿದೆ ಸೌರ ಬಿರುಗಾಳಿ! ರೇಡಿಯೋ, ಇಂಟರ್‌ನೆಟ್ ಸಿಗ್ನಲ್ ಮೇಲೆ ಪ್ರಭಾವ
ರಾಪುನ್ಜೆಲ್‌ನೊಂದಿಗೆ ಹೋಲಿಕೆ
ಸ್ಮಿತಾ ಅವರ ಉದ್ದನೆಯ ಕೂದಲು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನೇ ಹುಟ್ಟು ಹಾಕಿದೆ. ಅನೇಕರು ಅವರನ್ನು ನಿಜ ಜೀವನದ ರಾಪುನ್ಜೆಲ್ ಎಂದು ಕರೆದಿದ್ದಾರೆ. ರಾಪುನ್ಜೆಲ್ ಎಂದರೆ ನಂಬಲಾಗದಷ್ಟು ಉದ್ದವಾದ ಕೂದಲನ್ನು ಹೊಂದಿದ್ದ ಜರ್ಮನ್ ಕಾಲ್ಪನಿಕ ಕಥೆಯ ಒಂದು ಪಾತ್ರ. ಕೆಲವು ನೆಟ್ಟಿಗರಂತೂ ಅಚ್ಚರಿ ವ್ಯಕ್ತಪಡಿಸಿ, ಅದು ನಿಜವಾದ ಕೂದಲೇ? ಎಂದು ಪ್ರಶ್ನಿಸಿದ್ದಾರೆ.
ಸ್ಮಿತಾ ಏನು ಹೇಳುತ್ತಾರೆ?
ʼʼದೇವರು ನನ್ನ ಪ್ರಾರ್ಥನೆ ಕೇಳಿದ್ದಾನೆ. ಈ ದಾಖಲೆ ಸಾಧಿಸಿದ್ದು ಸಂತಸ ತಂದಿದೆ. ಸಾಧ್ಯವಾದಷ್ಟು ಸಮಯ ನನ್ನ ಕೂದಲನ್ನು ನಾನೇ ನೋಡಿಕೊಳ್ಳುತ್ತೇನೆ. ಎಂದಿಗೂ ನನ್ನ ಕೂದಲನ್ನು ಕತ್ತರಿಸುವುದಿಲ್ಲʼʼ ಎಂದು ಸ್ಮಿತಾ ಹೇಳುತ್ತಾರೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತನ್ನ ಎಕ್ಸ್ ಖಾತೆಯಲ್ಲಿ ಸ್ಮಿತಾ ಅವರ ವಿಡಿಯೊವನ್ನು ಹಂಚಿಕೊಂಡಿದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ. ಸ್ಮಿತಾ ಅವರ ದಿನಚರಿಯನ್ನು ಈ ವಿಡಿಯೊ ಒಳಗೊಂಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ