Site icon Vistara News

Road Accident: ನಿಂತಿದ್ದ ಟ್ರಕ್‌ಗೆ ಗುದ್ದಿದ ಕಾರು; ಭೀಕರ ಅಪಘಾತದಲ್ಲಿ 10 ಜನರ ದುರ್ಮರಣ

Road Accident

Gujarat: 10 Dead As Car Rams Into Truck From Behind on Ahmedabad-Vadodara Expressway

ಗಾಂಧಿನಗರ: ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದೆ. ನದಿಯಾಡ್‌ ನಗರದ ಬಳಿಯ ಅಹಮದಾಬಾದ್‌-ವಡೋದರ ಎಕ್ಸ್‌ಪ್ರೆಸ್‌ವೇನಲ್ಲಿ (Ahmedabad-Vadodara Expressway) ಟ್ರಕ್‌ಗೆ ಕಾರು ಗುದ್ದಿದ್ದು, ಕಾರಿನಲ್ಲಿದ್ದ ಎಲ್ಲ 10 ಜನ ಮೃತಪಟ್ಟಿದ್ದಾರೆ. ಅತಿಯಾದ ವೇಗದಲ್ಲಿದ್ದ ಕಾರು ಟ್ರಕ್‌ಗೆ ಹಿಂಬದಿಯಿಂದ ಗುದ್ದಿದ ಕಾರಣ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಅಪಘಾತದ ತೀವ್ರತೆಗೆ 8 ಜನ ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

“ವಡೋದರದಿಂದ ಎರ್ಟಿಗಾ ಕಾರು ಅಹಮದಾಬಾದ್‌ಗೆ ತೆರಳುತ್ತಿತ್ತು. ವೇಗವಾಗಿ ಚಲಿಸುವ ವೇಳೆ, ಹೈವೇ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಟ್ರಕ್‌ಗೆ ಹಿಂಬದಿಯಿಂದ ಗುದ್ದಿದೆ. ರಭಸವಾಗಿ ಚಲಿಸುತ್ತಿದ್ದ ಕಾರು ನಿಂತಿದ್ದ ಟ್ರಕ್‌ಗೆ ಗುದ್ದಿದ ಪರಿಣಾಮ ಕಾರ್‌ನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ. 8 ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ” ಎಂಬುದಾಗಿ ನದಿಯಾಡ್‌ ಗ್ರಾಮೀಣ ಪೊಲೀಸ್‌ ಸ್ಟೇಷನ್‌ ಇನ್ಸ್‌ಪೆಕ್ಟರ್‌ ಕಿರಿತ್‌ ಚೌಧರಿ ಮಾಹಿತಿ ನೀಡಿದ್ದಾರೆ.

ಅಹಮದಾಬಾದ್‌ಗೆ ತೆರಳುತ್ತಿದ್ದ ಟ್ರಕ್‌ ಎಕ್ಸ್‌ಪ್ರೆವೇನ ಎಡ ಭಾಗದಲ್ಲಿ ನಿಂತಿತ್ತು. ತಾಂತ್ರಿಕ ಸಮಸ್ಯೆಯಿಂದಾಗಿ ಟ್ರಕ್‌ಅನ್ನು ನಿಲ್ಲಿಸಲಾಗಿತ್ತು. ಕಾರು ವೇಗವಾಗಿ ಚಲಿಸುತ್ತಿದ್ದ ಕಾರಣ ಟ್ರಕ್‌ ಸಮೀಪ ಬಂದಾಗ ಏಕಾಏಕಿ ನಿಲ್ಲಿಸಲಾಗದೆ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.

ಅಪಘಾತ ಸಂಭವಿಸುತ್ತಲೇ ಹೆದ್ದಾರಿ ಪ್ಯಾಟ್ರೋಲಿಂಗ್‌ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿ, ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಎರಡು ಆಂಬುಲೆನ್ಸ್‌ಗಳನ್ನೂ ಕರೆಸಿ, ಗಾಯಾಳುಗಳನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ, ಕಾರಿನಲ್ಲಿದ್ದ ಒಬ್ಬರೂ ಬದುಕುಳಿಯಲಿಲ್ಲ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಭೀಕರ ಅಪಘಾತದ ಹಿನ್ನೆಲೆಯಲ್ಲಿ ಎಕ್ಸ್‌ಪ್ರೆಸ್‌ವೇನಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Road Accident: ವಾಟರ್‌ ಟ್ಯಾಂಕರ್‌ಗೆ ಡಿಕ್ಕಿಯಾಗಿ ಬೈಕ್‌ ಹಿಂಬದಿ ಸವಾರ ಸಾವು; ಬೆಚ್ಚಿ ಬೀಳಿಸುವ ಅಪಘಾತದ ದೃಶ್ಯ!

Exit mobile version