Site icon Vistara News

Bilkis Bano: ಸುಪ್ರೀಂ ತೀರ್ಪಿನ ಬೆನ್ನಲ್ಲೇ ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳು ನಾಪತ್ತೆ!

Bilkis Bano Convicts

Gujarat: 9 of 11 convicts in Bilkis Bano case missing, families remain silent

ಗಾಂಧಿನಗರ: 2002ರ ಗೋದ್ರಾ ಹತ್ಯಾಕಾಂಡದ ವೇಳೆ ಬಿಲ್ಕಿಸ್‌ ಬಾನೊ (Bilkis Bano) ಅವರ ಮೇಲೆ ಸಾಮೂಹಿಕವಾಗಿ ಅತ್ಯಾಚಾರ, ಅವರ ಕುಟುಂಬಸ್ಥರ ಕೊಲೆ ಪ್ರಕರಣದಲ್ಲಿ ಬಿಡುಗಡೆಯಾಗಿದ್ದ ಅಪರಾಧಿಗಳು ಶರಣಾಗಬೇಕು ಎಂದು ಸುಪ್ರೀಂ ಕೋರ್ಟ್‌ (Supreme Court) ತೀರ್ಪು ನೀಡಿದೆ. ಇದರ ಬೆನ್ನಲ್ಲೇ, 11 ಅಪರಾಧಿಗಳ ಪೈಕಿ, 9 ಅಪರಾಧಿಗಳು (Convicts) ಪೊಲೀಸರಿಗೆ ಶರಣಾಗಿ, ಜೈಲು ಸೇರುವ ಬದಲು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಅಪರಾಧಿಗಳ ಕುಟುಂಬಸ್ಥರು ಕೂಡ ಈ ಕುರಿತು ಮಾಹಿತಿ ನೀಡುತ್ತಿಲ್ಲ ಎನ್ನಲಾಗಿದೆ.

ಸನ್ನಡತೆ ಆಧಾರದ ಮೇಲೆ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ್ದ ಗುಜರಾತ್‌ ಸರ್ಕಾರದ ಆದೇಶ ಪ್ರಶ್ನಿಸಿ ಬಿಲ್ಕಿಸ್‌ ಬಾನೊ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಗುಜರಾತ್‌ ಸರ್ಕಾರದ ಆದೇಶವನ್ನು ರದ್ದುಗೊಳಿಸಿದೆ. “ಅತ್ಯಾಚಾರದ ಅಪರಾಧಿಗಳಿಗೆ ಕ್ಷಮಾದಾನ ನೀಡುವ ವಿಧಾನದಲ್ಲಿ ಗುಜರಾತ್‌ ಸರ್ಕಾರ ಸಮರ್ಪಕವಾಗಿ ನಿಯಮ ಪಾಲಿಸಿಲ್ಲ. ಬಿಲ್ಕಿಸ್‌ ಬಾನೊ ಸಲ್ಲಿಸಿದ ಅರ್ಜಿಯು ವಿಚಾರಣೆಗೆ ಅರ್ಹವಾಗಿದೆ. ಹಾಗಾಗಿ, ಗುಜರಾತ್‌ ಸರ್ಕಾರದ ಆದೇಶವನ್ನು ರದ್ದುಗೊಳಿಸಲಾಗುತ್ತಿದೆ” ಎಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ. ಹಾಗೆಯೇ, ಎರಡು ವಾರಗಳಲ್ಲಿ ಅಪರಾಧಿಗಳು ಜೈಲು ಸೇರಬೇಕು ಎಂದು ಸೂಚಿಸಿದೆ.

Bilkis Bano Case

ಮೂಲಗಳ ಪ್ರಕಾರ, 11 ಅಪರಾಧಿಗಳ ಪೈಕಿ 9 ಅಪರಾಧಿಗಳು ಮನೆಯಿಂದಲೇ ಪರಾರಿಯಾಗಿದ್ದಾರೆ. ಅವರ ಕುರಿತು ಕುಟುಂಬಸ್ಥರು ಕೂಡ ಸುಳಿವು ನೀಡುತ್ತಿಲ್ಲ. ಹಾಗಾಗಿ, ಇವರು ಶರಣಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಆದರೆ, ಪೊಲೀಸ್‌ ಮೂಲಗಳ ಪ್ರಕಾರ, ಅಪರಾಧಿಗಳು ಎಲ್ಲಿಗೂ ಪರಾರಿಯಾಗಿಲ್ಲ. ಅವರು ಮನೆಯಲ್ಲಿಯೇ ಇದ್ದಾರೆ. ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅವರ ಮನೆಗಳಿಗೆ ಭದ್ರತೆ ಒದಗಿಸಲಾಗಿದೆ ಎಂದು ತಿಳಿದುಬಂದಿದೆ.

ಗುಜರಾತ್​ ಸರ್ಕಾರ ಆರೋಪಿಗಳನ್ನು 1992ರ ಕ್ಷಮಾದಾನ ನೀತಿಯ ಅನ್ವಯ ಬಿಡುಗಡೆಗೊಳಿಸಿತ್ತು. ಅಂದರೆ ಹಲವು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ, ಸನ್ನಡತೆ ತೋರಿದ್ದನ್ನೇ ಮುಖ್ಯ ಆಧಾರವನ್ನಿಟ್ಟುಕೊಂಡು ಅವರಿಗೆ ಜೈಲಿನಿಂದ ಮುಕ್ತಿ ಕೊಟ್ಟಿತ್ತು. ಆದರೆ, ಗುಜರಾತ್‌ ಸರ್ಕಾರದ ತೀರ್ಪು ಪ್ರಶ್ನಿಸಿ ಬಿಲ್ಕಿಸ್‌ ಬಾನೊ ಅವರು ನ್ಯಾಯಾಂಗ ಹೋರಾಟ ಮುಂದುವರಿಸಿದ್ದರು. ಬಿಲ್ಕಿಸ್‌ ಬಾನೊ ಸೇರಿ ಹಲವು ಸಾಮಾಜಿಕ ಹೋರಾಟಗಾರರು ಕೂಡ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಈಗ ಕೊನೆಗೂ ನ್ಯಾಯಾಂಗ ಹೋರಾಟದಲ್ಲಿ ಬಿಲ್ಕಿಸ್‌ ಬಾನೊ ಗೆದ್ದಿದ್ದಾರೆ.

ಇದನ್ನೂ ಓದಿ: Bilkis Bano: ಕಾನೂನು ಹೋರಾಟದಲ್ಲಿ ಗೆದ್ದ ಬಿಲ್ಕಿಸ್‌ ಬಾನೊ; ಇವರಿಗಾದ ಅನ್ಯಾಯ ಎಂಥಾದ್ದು?

ಬಿಡುಗಡೆಯಾದ ಅಪರಾಧಿಗಳು ಯಾರು?

ಬಿಲ್ಕಿಸ್​ ಬಾನೊ ಅತ್ಯಾಚಾರ ಕೇಸ್​​ನಲ್ಲಿ ಜೈಲು ಸೇರಿ, ಕಳೆದ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾದವರ ಹೆಸರು, ಜಸ್ವಂತ್ ಭಾಯಿ ನಾಯ್, ಗೋವಿಂದಭಾಯಿ ನಾಯ್, ಶೈಲೇಶ್ ಭಟ್, ರಾಧೇಶ್ಯಾಮ್​ ಶಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಪ್ರದೀಪ್ ಮೋರ್ಧಿಯಾ, ಬಕಾಭಾಯಿ ವೋಹಾನಿಯಾ, ರಾಜುಭಾಯಿ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನಾ ಎಂದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version