ಅಹಮದಾಬಾದ್: ಎಲೆಕ್ಷನ್‌ಗೆ ಸ್ಪರ್ಧಿಸಲು ಟಿಕೆಟ್ ನೀಡದ ಬೆನ್ನಲ್ಲೇ ಬಿಜೆಪಿಯ ಒಬ್ಬ ಹಾಲಿ ಶಾಸಕ ಹಾಗೂ ಕನಿಷ್ಠ ನಾಲ್ವರು ಮಾಜಿ ಶಾಸಕರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಗುಜರಾತ್‌ನಲ್ಲಿ ಚುನಾವಣೆ ಮುಂದಿರುವಾಗ ಬಿಜೆಪಿಯು ಬಂಡಾಯವನ್ನು ಎದುರಿಸುತ್ತಿದೆ. ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5ರಂದು ಎರಡು ಹಂತದಲ್ಲಿ ಎಲೆಕ್ಷನ್ ನಡೆಯಲಿದೆ(Gujarat Election). ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
ಬಂಡಾಯ ಕಹಳೆ ಊದಿರುವ ಈ ಐವರ ಪೈಕಿ ಕೆಲವರು ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ, ಅವರ ನಿರ್ಧಾರ ತಿಳಿದುಕೊಂಡು ಮುಂದಿನ ಹೆಜ್ಜೆ ಇಡಲಾಗುವುದು ಎಂದು ಹೇಳಿದ್ದಾರೆ. ಬಿಜೆಪಿಯ ಮಾಜಿ ಶಾಸಕ ಹಾಗೂ ಪಕ್ಷದ ಬುಡಕಟ್ಟು ಸಮುದಾಯ ನಾಯಕನಾಗಿರುವ ಹರ್ಷದ್ ವಾಸವಾ ಅವರು ಈಗಾಗಲೇ ನಾಂದೋಡ್ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಈ ಕ್ಷೇತ್ರವು ಎಸ್ ಟಿ ಅಭ್ಯರ್ಥಿಗಳಿಗೆ ಮೀಸಲಾಗಿದೆ.
ವಾಸವಾ ಅವರು ಬಿಜೆಪಿಯ ಪರಿಶಿಷ್ಟ ಬುಡಕಟ್ಟು ಮೋರ್ಚಾ ರಾಜ್ಯ ಅಧ್ಯಕ್ಷರಾಗಿದ್ದಾರೆ. ಈ ಹಿಂದಿನ ರಾಜ್‌ಪಿಪ್ಲಾ ಕ್ಷೇತ್ರವನ್ನು 2002ರಿಂದ 2007 ಮತ್ತು 2007ರಿಂದ 2012ರವರೆಗೆ ಪ್ರತಿನಿಧಿಸಿದ್ದರು. ಸದ್ಯ, ನಾಂದೋಡ್ ಕ್ಷೇತ್ರವನ್ನು ಕಾಂಗ್ರೆಸ್ ಪ್ರತಿನಿಧಿಸುತ್ತಿದೆ. ಬಿಜೆಪಿಯು ಈ ಕ್ಷೇತ್ರದಿಂದ ಡಾ. ದರ್ಶನ್ ದೇಶಮುಖ್ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ವಾಸವಾ ಅವರು ಅಸಂತುಷ್ಟಗೊಂಡಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅಲ್ಲದೇ ಪಕ್ಷದ ಎಲ್ಲ ಹುದ್ದೆಗಳಿಗೆ ಅವರು ರಾಜೀನಾಮೆ ನೀಡಿದ್ದಾರೆ.
ಮತ್ತೊಂದೆಡೆ, ವಡೋದಾರ ಜಿಲ್ಲೆಯ ಒಬ್ಬ ಹಾಲಿ ಶಾಸಕ ಮತ್ತು ಇಬ್ಬರು ಮಾಜಿ ಶಾಸಕರು ಬಿಜೆಪಿಯ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಈ ಮೂವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. 6 ಬಾರಿ ಶಾಸಕರಾಗಿದ್ದ ಮಧು ಶ್ರೀವಾಸ್ತವ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಆದರೆ, ಅವರ ಬೆಂಬಲಿಗರು ಸ್ವತಂತ್ರವಾಗಿ ಸ್ಪರ್ಧಿಸುವಂತೆ ದುಂಬಾಲು ಬಿದ್ದಿದ್ದಾರೆ.
ಇದನ್ನೂ ಓದಿ | Gujarat Cabinet | ಗುಜರಾತ್‌ನಲ್ಲಿ ಇಬ್ಬರು ಸಚಿವರ ಖಾತೆ ವಾಪಸ್, ಚುನಾವಣೆಗೆ ಮುನ್ನ ಬಿಜೆಪಿಯಲ್ಲಿ ಬಿಕ್ಕಟ್ಟು?