ಗಾಂಧಿನಗರ: ಗುಜರಾತ್ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಭೂಪೇಂದ್ರ ಪಟೇಲ್ ಅವರು ನೂತನ ಸಚಿವ ಸಂಪುಟ (Gujarat New Cabinet) ರಚಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಆಪ್ತ ಹರ್ಷ್ ಸಂಘ್ವಿ ಅವರಿಗೆ ಗೃಹ ಖಾತೆ ನೀಡಲಾಗಿದೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಬಳಿ ನಗರಾಭಿವೃದ್ಧಿ, ನಗರ ವಸತಿ ಅಭಿವೃದ್ಧಿ, ರಸ್ತೆ ಹಾಗೂ ಕಟ್ಟಡ, ಗಣಿ ಮತ್ತು ಖನಿಜ ಸಂಪನ್ಮೂಲ, ಮಾಹಿತಿ ಮತ್ತು ಪ್ರಸಾರ ಖಾತೆ ಸೇರಿ ಹಲವು ಖಾತೆಗಳು ಇವೆ. ಕನುಭಾಯಿ ದೇಸಾಯಿ ಅವರಿಗೆ ಹಣಕಾಸು, ಇಂಧನ ಹಾಗೂ ಪೆಟ್ರೋಕೆಮಿಕಲ್ಸ್, ರಿಷಿಕೇಶ್ ಪಟೇಲ್ ಅವರಿಗೆ ಆರೋಗ್ಯ, ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಉನ್ನತ ಹಾಗೂ ತಾಂತ್ರಿಕ ಶಿಕ್ಷಣ, ಕಾನೂನು, ನ್ಯಾಯಾಂಗ, ಸಂಸದೀಯ ವ್ಯವಹಾರಗಳ ಖಾತೆ ವಹಿಸಲಾಗಿದೆ.
ರಾಘವ್‌ಜಿ ಪಟೇಲ್ ಅವರಿಗೆ ಕೃಷಿ, ಪಶು ಸಂಗೋಪನೆ, ಮೀನುಗಾರಿಕೆ, ಗ್ರಾಮೀಣ ವಸತಿ ಹಾಗೂ ಗ್ರಾಮೀಣ ಅಭಿವೃದ್ಧಿ ಖಾತೆ ಸಿಕ್ಕಿದೆ. ಬಲವಂತ್ ಸಿಂಗ್ ರಜಪೂತ್ ಅವರು ವಾಣಿಜ್ಯ, ಎಂಎಸ್‌ಎಂಇ, ಖಾದಿ, ಗ್ರಾಮೀಣ ಕೈಗಾರಿಕೆಗಳು, ಕಾರ್ಮಿಕ ಮತ್ತು ಉದ್ಯೋಗ ಖಾತೆ ವಹಿಸಲಾಗಿದೆ. ಮೊದಲಿಗೆ 16 ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಇವರಲ್ಲಿ 8 ಶಾಸಕರಿಗೆ ಸಂಪುಟ ದರ್ಜೆ ನೀಡಿದರೆ, ಇನ್ನೂ 8 ಶಾಸಕರು ಸಹಾಯಕ ಸಚಿವರಾಗಿದ್ದಾರೆ.
ಇದನ್ನೂ ಓದಿ | Bhupendra Patel | ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಭೂಪೇಂದ್ರ ಪಟೇಲ್