ವಡೋದರ: ಗುಜರಾತ್ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಭರತ್ ಸಿನ್ಹ್ ಸೋಲಂಕಿ ಸದ್ಯ ತಮ್ಮ ಅನೈತಿಕ ಸಂಬಂಧದ ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಮತ್ತೊಬ್ಬ ಮಹಿಳೆಯೊಂದಿಗೆ ಇದ್ದಾಗಲೇ ಪತ್ನಿಯ ಕೈಯಲ್ಲಿ ಸಿಕ್ಕಿಬಿದ್ದ ಅವರ ವಿಡಿಯೋ ಸಖತ್ ವೈರಲ್ ಆಗಿತ್ತು. ಈಗವರು ಒಂದು ಸುದ್ದಿಗೋಷ್ಠಿ ನಡೆಸಿ, ತಾವು ರಾಜಕೀಯದಿಂದ ಕೆಲ ತಿಂಗಳುಗಳ ಕಾಲ ದೂರ ಉಳಿಯುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ವಿಡಿಯೋ ವೈರಲ್ ಮಾಡಿದ ಪತ್ನಿ ರೇಷ್ಮಾ ಪಟೇಲ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಅಷ್ಟಲ್ಲದೆ, ಆಕೆ ವಾಮಾಚಾರದ ಮೂಲಕ ನನ್ನ ಪ್ರಾಣ ತೆಗೆಯಲು ಪ್ರಯತ್ನಿಸಿದ್ದಳು. ಇದಕ್ಕಾಗಿ ಮಾಂತ್ರಿಕನೊಬ್ಬನನ್ನು ಕೂಡ ಸಂಪರ್ಕಿಸಿದ್ದಳು ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಭರತ್ ಸಿನ್ಹ್ ಸೋಲಂಕಿ ಮತ್ತು ರೇಷ್ಮಾ ಪಟೇಲ್ ಮದುವೆಯಾಗಿದ್ದು 1999ರಲ್ಲಿ. ಆದರೆ ಭರತ್ ಸಿಂಗ್ ಇನ್ನೊಬ್ಬಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ರೇಷ್ಮಾ ಆರೋಪ ಮಾಡಿದ್ದಲ್ಲದೆ, ಕೋರ್ಟ್ ಮೆಟ್ಟಿಲು ಕೂಡ ಏರಿದ್ದಾರೆ. ತಾನು ಭರತ್‌ಗೆ ಡಿವೋರ್ಸ್ ನೀಡುವುದಿಲ್ಲ. ಆದರೆ ಅವರು ನನಗೆ ಮಾಡಿರುವ ಅನ್ಯಾಯದ ವಿರುದ್ಧ ಹೋರಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಭರತ್ ಸಿನ್ಹ್ ಸೋಲಂಕಿ ಗುಜರಾತ್‌ನ ಆನಂದ್‌ನಲ್ಲಿರುವ ಬಂಗಲೆಯೊಂದರಲ್ಲಿ ಬೇರೊಬ್ಬ ಯುವತಿಯೊಂದಿಗೆ ಇದ್ದ ಖಚಿತ ಮಾಹಿತಿ ತಿಳಿದು ರೇಷ್ಮಾ ಅಲ್ಲಿಗೆ ಹೋಗಿದ್ದರು. ಆ ಯುವತಿಗೆ ಹೊಡೆದಿದ್ದಲ್ಲದೆ, ಅಲ್ಲಿ ನಡೆದಿದ್ದನ್ನೆಲ್ಲ ವಿಡಿಯೋ ಮಾಡಿದ್ದರು. ಅದಾಗಿ ಐದಾರು ದಿನಗಳ ಬಳಿಕ ಈಗ ಸೋಲಂಕಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ʼನಾನು ರಾಜಕೀಯದಿಂದ ಬ್ರೇಕ್ ಪಡೆಯುತ್ತಿರುವುದು ನನ್ನ ಸ್ವಂತ ನಿರ್ಧಾರ. ಪಕ್ಷದ ನಾಯಕರ ಒತ್ತಡವಿಲ್ಲʼ ಎಂದು ಸ್ಪಷ್ಟಪಡಿಸಿರುವ ಸೋಲಂಕಿ, ʼನಾನು ಮತ್ತು ನನ್ನ ಪತ್ನಿ ರೇಷ್ಮಾ ಪಟೇಲ್ ಈಗ ಒಟ್ಟಿಗೇ ವಾಸವಾಗಿಲ್ಲ. ನನ್ನ ಆಸ್ತಿ ಕಬಳಿಸುವುದೇ ಆಕೆಯ ಮುಖ್ಯ ಉದ್ದೇಶ. ಅದಕ್ಕಾಗಿ ನನಗೆ ಅನೇಕ ರೀತಿಯ ತೊಂದರೆ ಮಾಡಿದ್ದಾಳೆ. ನನ್ನ ಮಾನ-ಮರ್ಯಾದೆ ತೆಗೆಯುತ್ತಿದ್ದಾಳೆ. ಆಕೆಯಿಂದ ನನಗೆ ಡಿವೋರ್ಸ್ ಬೇಕೆಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇನೆ. ಅದರ ವಿಚಾರಣೆ ಜೂ.15ರಂದು ನಡೆಯಲಿದೆ. ಡಿವೋರ್ಸ್ ಸಿಕ್ಕ ತಕ್ಷಣ ಈ ಯುವತಿಯನ್ನೇ ಮದುವೆಯಾಗುತ್ತೇನೆʼ ಎಂದು ತಿಳಿಸಿದ್ದಾರೆ. ಹಾಗೊಮ್ಮೆ ಆದರೆ ಇದು ಮಾಜಿ ಸಚಿವರ ಮೂರನೇ ಮದುವೆಯಾಗಲಿದೆ.
ಇದನ್ನೂ ಓದಿ: ಚಾಮರಾಜಪೇಟೆ ವೃದ್ಧ ಉದ್ಯಮಿಯ ಹಂತಕ ಗುಜರಾತ್‌ನಲ್ಲಿ ಪೊಲೀಸ್ ಬಲೆಗೆ
ನನ್ನ ವೈರಿಗಳೊಂದಿಗೆ ರೇಷ್ಮಾ ಪಟೇಲ್ ಕೈಜೋಡಿಸಿದ್ದಾಳೆ. ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಹೀಗಾಗಿ ಇಂಥ ವಿಷಯಗಳ ಬಗ್ಗೆ ಪ್ರತಿಪಕ್ಷಗಳೂ ಹೆಚ್ಚಿನ ಆಸಕ್ತಿ ವಹಿಸುತ್ತವೆ. ನನ್ನ ಗೌರವ ಹಾಳು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ನಾನೀಗ ಸಕ್ರಿಯ ರಾಜಕಾರಣದಿಂದ ದೂರ ಉಳಿದು ದಲಿತರು, ಬುಡಕಟ್ಟು ಜನಾಂಗದವರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಜನರನ್ನು ಭೇಟಿಯಾಗಿ ಅವರ ಕುಂದು-ಕೊರತೆ ಆಲಿಸುತ್ತೇನೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಭರತ್ ಸಿನ್ಹ್ ಸೋಲಂಕಿ ಯುವತಿಯೊಂದಿಗೆ ಬಂಗಲೆಯೊಳಗೆ ಇದ್ದ ಹೊತ್ತಲ್ಲಿ, ರೇಷ್ಮಾ ಪಟೇಲ್ ಮೂರ್ನಾಲ್ಕು ಜನರೊಂದಿಗೆ ಹೋಗಿ ಬಾಗಿಲು ಬಡಿದಿದ್ದರು. ಆ ಯುವತಿಯೇ ಬಂದು ಬಾಗಿಲು ತೆಗೆದು, ದೂರ ಹೋಗಿ ನಿಂತಿದ್ದಳು. ರೇಷ್ಮಾ ಒಳ ಬರುವುದನ್ನು ತಡೆಯಲು ಭರತ್ ಸಿನ್ಹ್ ಸೋಲಂಕಿ ಪ್ರಯತ್ನಿಸುವುದು ವಿಡಿಯೋದಲ್ಲಿ ಕಾಣುತ್ತದೆ. ಆಗ ರೇಷ್ಮಾ ಯುವತಿಯ ಮೇಲೆ ದಾಳಿ ಮಾಡುತ್ತಾರೆ. ಆಕೆಯ ಕೂದಲು ಹಿಡಿದು ಎಳೆದಾಡುತ್ತಾರೆ. ಮತ್ತೆ ಸೋಲಂಕಿಯೇ ಅದನ್ನು ತಡೆಯಲು ಹೋಗುತ್ತಾರೆ. ಇಡೀ ವಿಡಿಯೋದಲ್ಲಿ ರೇಷ್ಮಾ ಪಟೇಲ್ ಗುಜರಾತಿ ಭಾಷೆಯಲ್ಲಿ ಯುವತಿ ಮತ್ತು ತನ್ನ ಪತಿಯನ್ನು ನಿಂದಿಸುವುದು ಕೇಳುತ್ತದೆ. ಇನ್ನು ಯುವತಿ ತನ್ನ ಮುಖವನ್ನು ಎಷ್ಟೇ ಮುಚ್ಚಿಕೊಂಡರೂ ಆಕೆಯ ಗುರುತು ಪತ್ತೆಯಾಗಿದೆ.
ಇದನ್ನೂ ಓದಿ: ಮತ್ತೊಬ್ಬ ಮಹಿಳೆಯೊಂದಿಗೆ ಇದ್ದಾಗ ಪತ್ನಿ ಕೈಯ್ಯಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್ ಮಾಜಿ ಕೇಂದ್ರ ಸಚಿವ