Site icon Vistara News

Ram Mandir: ರಾಮಲಲ್ಲಾಗೆ 11 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ ಕೊಟ್ಟ ಉದ್ಯಮಿ!

Ram Lalla

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ (Ram Mandir) ರಾಮಲಲ್ಲಾ (Ram Lalla) ವಿರಾಜಮಾನನಾಗಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22ರಂದು ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠೆ ನೆರವೇರಿಸಿದ್ದಾರೆ. ಆ ಮೂಲಕ ಕೋಟ್ಯಂತರ ಭಾರತೀಯರ 500 ವರ್ಷಗಳ ಕನಸು ನನಸಾದಂತಾಗಿದೆ. ಇದರ ಬೆನ್ನಲ್ಲೇ, ಗುಜರಾತ್‌ ಮೂಲದ ವಜ್ರದ ವ್ಯಾಪಾರಿ ಮುಕೇಶ್‌ ಪಟೇಲ್‌ (Mukesh Patel) ಎಂಬುವರು ರಾಮಲಲ್ಲಾನಿಗೆ ಸುಮಾರು 11 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸೂರತ್‌ನಲ್ಲಿ ಗ್ರೀನ್ ಲ್ಯಾಬ್ ಡೈಮಂಡ್‌ ಕಂಪನಿಯ ಮಾಲೀಕರಾಗಿರುವ, ರಾಮನ ಮೇಲೆ ಅಪಾರ ನಂಬಿಕೆ ಇಟ್ಟಿರುವ ಮುಕೇಶ್‌ ಪಟೇಲ್‌ ಕುಟುಂಬಸ್ಥರು 11 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟವನ್ನು ಕೊಡುಗೆಯಾಗಿ ಕೊಟ್ಟು ರಾಮನ ಮೇಲಿನ ಭಕ್ತಿ ಮೆರೆದಿದ್ದಾರೆ. ಚಿನ್ನ, ಮುತ್ತುಗಳು ಹಾಗೂ ವಜ್ರಗಳಿಂದ ಉತ್ತರ ಭಾರತ ಶೈಲಿಯಲ್ಲಿ ಕಿರೀಟವನ್ನು ತಯಾರಿಸಲಾಗಿದೆ. ಮುಕೇಶ್‌ ಪಟೇಲ್‌ ಅವರ ಕಂಪನಿಯ ಇಬ್ಬರು ಉದ್ಯೋಗಿಗಳು ಅಯೋಧ್ಯೆಗೆ ಬಂದು, ರಾಮಲಲ್ಲಾ ಮೂರ್ತಿಯ ಅಳತೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಇದಾದ ಬಳಿಕ ಕಿರೀಟವನ್ನು ತಯಾರಿಸಲಾಗಿದೆ ಎಂದು ತಿಳಿದುಬಂದಿದೆ.

“ನಮ್ಮ ಇಡೀ ಕುಟುಂಬವು ರಾಮನ ಮೇಲೆ ಅಪಾರ ಭಕ್ತಿಯನ್ನು ಹೊಂದಿದೆ. ನಮ್ಮ ಪೂರ್ವಜರು ಕೂಡ ಅಯೋಧ್ಯೆಯಲ್ಲೊಂದು ರಾಮಮಂದಿರ ನಿರ್ಮಾಣವಾಗಬೇಕು ಎಂಬ ಕನಸು ಕಂಡಿದ್ದರು. ರಾಮಮಂದಿರದ ಕನಸು ಈಗ ನನಸಾಗಿದೆ. ಇದರಿಂದ ನಮ್ಮ ಕುಟುಂಬವು ಸಂತಸದ ಕಡಲಲ್ಲಿ ಮುಳುಗಿಸಿದೆ. ಭಗವಾನ್‌ ಶ್ರೀರಾಮನು ನಮಗೆ ಸಾಕಷ್ಟು ಕೊಟ್ಟಿದ್ದಾನೆ. ಈಗ ನಾವು ರಾಮಲಲ್ಲಾನಿಗೆ ಕಿರೀಟ ನೀಡುವ ಮೂಲಕ ಸಣ್ಣ ಕೊಡುಗೆ ಕೊಟ್ಟಿದ್ದೇವೆ. ರಾಮನ ದರ್ಶನ ಪಡೆದಿರುವುದು ಕೂಡ ನಮ್ಮ ಸೌಭಾಗ್ಯ” ಎಂದು ಮುಕೇಶ್‌ ಪಟೇಲ್‌ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Ram Mandir: ರಾಮಮಂದಿರ ಉದ್ಘಾಟನೆ; ಅಭಿನಂದನೆ ಸಲ್ಲಿಸಿದ ಪಾಕಿಸ್ತಾನ ಕ್ರಿಕೆಟಿಗ

ರಾಮ ವಿರೋಧಿಗಳಿಗೆ ಮೋದಿ ಆಹ್ವಾನ

ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಮನ ವಿರೋಧಿಗಳು ಕೂಡ ರಾಮಮಂದಿರಕ್ಕೆ ಬರಬೇಕು ಎಂದರು. “ರಾಮಮಂದಿರ ನಿರ್ಮಿಸಿದರೆ ದೇಶದಲ್ಲಿ ಬೆಂಕಿ ಹೊತ್ತಿ ಉರಿಯುತ್ತದೆ ಎಂದು ಒಂದಷ್ಟು ಜನ ಹೇಳುತ್ತಿದ್ದರು. ಆದರೆ, ರಾಮಮಂದಿರ ನಿರ್ಮಾಣದಿಂದ ಬೆಂಕಿ ಹೊತ್ತಿ ಉರಿಯುವುದಿಲ್ಲ. ಬದಲಾಗಿ ಸಮಾಜದಲ್ಲಿ ಶಾಂತಿ, ಸಾಮರಸ್ಯ ನೆಲೆಸುತ್ತದೆ. ದೇಶದ ಏಳಿಗೆ ಹೊಸ ಶಕ್ತಿಯೊಂದು ಉದ್ಭವವಾಗುತ್ತದೆ. ಹಾಗಾಗಿ, ರಾಮಮಂದಿರವನ್ನು ವಿರೋಧಿಸುವವರು ಈಗ ರಾಮಮಂದಿರಕ್ಕೆ ಆಗಮಿಸಬೇಕು. ಅವರು ತಮ್ಮ ಮನೋಭಾವವನ್ನು ಮರು ಪರಿಶೀಲಿಸಿಕೊಳ್ಳಬೇಕು. ಚಿಂತನೆಗಳನ್ನು ಬದಲಿಸಿಕೊಳ್ಳಬೇಕು” ಎಂದು ಮನವಿ ಮಾಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version