ನವದೆಹಲಿ: ಗುಜರಾತ್ ವಿಧಾನಸೆಭೆಗೆ ಡಿಸೆಂಬರ್ 1ರಂದು ಮೊದಲನೆ ಹಂತದ ಮತದಾನ (Gujarat Election) ನಡೆಯಲಿದ್ದು, ಕಣದಲ್ಲಿರುವ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹಿನ್ನೆಲೆಯೂ ಅಷ್ಟೇ ಕುತೂಹಲಕಾರಿಯಾಗಿದೆ. ಗುಜರಾತ್ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಆಮ್ ಆದ್ಮಿ ಪಾರ್ಟಿ(ಆಪ್) ಅತಿ ಹೆಚ್ಚು ಕ್ರಿಮಿನಲ್ ಹಿನ್ನೆಲೆಯ ಇದ್ದವರನ್ನು ಕಣಕ್ಕೆ ಇಳಿಸಿದ್ದರೆ, ಕಾಂಗ್ರೆಸ್ ಮತ್ತು ಬಿಜೆಪಿ ನಂತರದ ಸ್ಥಾನದಲ್ಲಿವೆ. ಗುಜರಾತ್ ಎಲೆಕ್ಷನ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಗುಜರಾತ್ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಹಿನ್ನೆಲೆಯನ್ನು ಅಭ್ಯಸಿಸಿ ವರದಿಯನ್ನು ಸಿದ್ಧಪಡಿಸಿದೆ.
ಮತ್ತೊಂದೆಡೆ, ಮೊದಲ ಹಂತದ ಚುನಾವಣೆಗೆ ಸ್ಪರ್ಧಿಸಿರುವ 788 ಅಭ್ಯರ್ಥಿಗಳ ಪೈಕಿ 211 ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ. ಈ ಪೈಕಿ ಬಿಜೆಪಿಯಿಂದ ಸ್ಪರ್ಧಿಸಿರುವರು ಪೈಕಿ ಹೆಚ್ಚಿನವರು ಕೋಟ್ಯಧಿಪತಿಗಳಿದ್ದಾರೆ. ಅಂದರೆ, ಒಟ್ಟು 79 ಬಿಜೆಪಿ ಅಭ್ಯರ್ಥಿಗಳು ಕೋಟಿ ಕೋಟಿ ಹಣವನ್ನು ಉಳ್ಳವರಾಗಿದ್ದಾರೆ. ಬಿಜೆಪಿ ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಮತ್ತು ಆಪ್ ಪಕ್ಷಗಳಿವೆ. ಕಾಂಗ್ರೆಸ್‌ನ 65 ಅಭ್ಯರ್ಥಿಗಳು ಮತ್ತು ಆಪ್‌ನ 33 ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ ಎಂದು ಎಡಿಆರ್ ತನ್ನ ವರದಿಯಲ್ಲಿ ತಿಳಿಸಿದೆ.
ಪ್ರಮುಖ ಪಕ್ಷಗಳ ಪೈಕಿ, ಆಪ್‌ನಿಂದ ಸ್ಪರ್ಧಿಸಿರುವ 88 ಅಭ್ಯರ್ಥಿಗಳಲ್ಲಿ 32 (ಶೇ. 36), ಕಾಂಗ್ರೆಸ್‌ನ 89 ಅಭ್ಯರ್ಥಿಗಳಲ್ಲಿ 31 (ಶೇ. 35), ಬಿಜೆಪಿಯ 89 ಅಭ್ಯರ್ಥಿಗಳಲ್ಲಿ 14 (ಶೇ.16) ಮತ್ತು ಭಾರತೀಯ ಬುಡಕಟ್ಟು ಪಕ್ಷದ 14 ಅಭ್ಯರ್ಥಿಗಳ 4 ( 29%) ಅಭ್ಯರ್ಥಿಗಳು ತಮ್ಮ ಅಫಿಡವಿಟ್‌ನಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದನ್ನು ಘೋಷಿಸಿಕೊಂಡಿದ್ದಾರೆ.
ವಿಶ್ಲೇಷಣೆ ಮಾಡಲಾದ 788 ಅಭ್ಯರ್ಥಿಗಳ ಪೈಕಿ 21 ಪ್ರತಿಶತ ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಕೇಸ್‌ಗಳಿರುವುದನ್ನು ಘೋಷಿಸಿಕೊಂಡಿದ್ದಾರೆ. 167 ಅಭ್ಯರ್ಥಿಗಳು ಸಾಮಾನ್ಯ ಕ್ರಿಮಿನಲ್ ಕೇಸ್‌ಗಳನ್ನು ಎದುರಿಸುತ್ತಿದ್ದರೆ, 100 ಮಂದಿ ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಕೇಸ್‌ಗಳಿರುವುದನ್ನು ಒಪ್ಪಿಕೊಂಡಿದ್ದಾರೆ. 182 ಸದಸ್ಯ ಬಲವನ್ನು ಹೊಂದಿರುವ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು ಡಿಸೆಂಬರ್ 5ರಂದು ಎರಡು ಹಂತದಲ್ಲಿ ಮತಾದನ ನಡೆಯಲಿದೆ. ಮತ ಏಣಿಕೆಯು ಡಿಸೆಂಬರ್ 8ರಂದು ನಡೆಯಲಿದೆ.
ಇದನ್ನೂ ಓದಿ | Opinion Poll | ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಮತ್ತೆ ಬಿಜೆಪಿಗೇ ಅಧಿಕಾರ? ಸಮೀಕ್ಷೆ ಹೇಳುವುದೇನು?