Site icon Vistara News

Gujarat Election | ಬಿಜೆಪಿ ಗೂಂಡಾಗಳಿಂದ ತಪ್ಪಿಸಿಕೊಳ್ಳಲು ರಾತ್ರಿಪೂರ್ತಿ ಕಾಡಿನಲ್ಲಿದ್ದೆ: ಕಾಣೆಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ

Kanthi Kharadi @ Gujarat Election

ಅಹಮದಾಬಾದ್: ಭಾನುವಾರ ಸಂಜೆ ಕಾಣೆಯಾಗಿದ್ದ ಕಾಂಗ್ರೆಸ್ ಶಾಸಕ ಕಾಂತಿಭಾಯಿ ಖರಾಡಿ ಅವರು ಈಗ ಪತ್ತೆಯಾಗಿದ್ದು, ಬಿಜೆಪಿಯ ತಮ್ಮ ಪ್ರತಿಸ್ಪರ್ಧಿ ಹಾಗೂ ಅವರ ಗೂಂಡಾಗಳು ತಮ್ಮ ಮೇಲೆ ತಲ್ವಾರ್ ಮೂಲಕ ದಾಳಿಗೆ ಮುಂದಾಗಿದ್ದರು. ಅವರಿಂದ ತಪ್ಪಿಸಿಕೊಂಡು ಅರಣ್ಯದಲ್ಲಿ ಅಡಗಿಕೊಂಡಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಆರೋಪಕ್ಕೆ ಬಿಜೆಪಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏತನ್ಮಧ್ಯೆ, ತಮ್ಮ ಪಕ್ಷದ ಅಭ್ಯರ್ಥಿ ಖರಾಡಿ ಅವರು ಕಾಣೆಯಾಗಿದ್ದಾರೆಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದರು(Gujarat Election).

ಗುಜರಾತ್‌ನ ಬನಸ್ಕಂಠದ ದಾಂತಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಖರಾಡಿ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಎರಡನೇ ಹಂತದ ಚುನಾವಣೆಯಲ್ಲಿ ಈ ಕ್ಷೇತ್ರಕ್ಕೆ ಸೋಮವಾರ ಮತದಾನ ನಡೆಯುತ್ತಿದೆ. ಖರಾಡಿ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ವಿರುದ್ಧ ಎಫ್ಐಆರ್ ಕೂಡ ದಾಖಲಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಹಾಗೂ ಅವರ 150 ಗೂಂಡಾಗಳು ತಲ್ವಾರ್‌ಗಳನ್ನು ಹಿಡಿದುಕೊಂಡು ಬೆನ್ನಟ್ಟಿದ್ದರು. ಅವರಿಂದ ತಪ್ಪಿಸಿಕೊಳ್ಳಲು ನಾನು ಅರಣ್ಯದಲ್ಲಿ ಅಡಗಿಕೊಂಡು ಕುಳಿತಿದ್ದೆ. ತಪ್ಪಿಸಿಕೊಳ್ಳದೇ ಹೋಗಿದ್ದರೆ ಅವರು ನನ್ನನ್ನು ಕೊಂದೇ ಹಾಕುತ್ತಿದ್ದರು. ಮೂರ್ನಾಲ್ಕು ಗಂಟೆಗಳ ಬಳಿಕ ಪೊಲೀಸರು ನನ್ನನ್ನು ಪತ್ತೆ ಹಚ್ಚಿ, ಆಸ್ಪತ್ರೆಗೆ ದಾಖಲಿಸಿದರು ಎಂದು ಮಾಧ್ಯಮಗಳಿಗೆ ಖರಾಡಿ ಅವರು ತಿಳಿಸಿದ್ದಾರೆ.

ನಾನು ನನ್ನ ಮತದಾರರನ್ನು ಭೇಟಿಯಾಗಲು ನಿನ್ನೆ ಸಂಜೆ ಹೊರಟಿದ್ದೆ. ಆಗ ಬಿಜೆಪಿ ಅಭ್ಯರ್ಥಿ ಹಾಗೂ ಅವರ ಗೂಂಡಾಗಳು ನನ್ನ ಕಾರನ್ನು ತಡೆದು, ಸುತ್ತುವರಿದರು. ಆಗ ಅಲ್ಲಿಂದ ತಪ್ಪಿಸಿಕೊಂಡು ಸುಮಾರು ಹತ್ತರಿಂದ ಹದಿನೈದು ಕಿ.ಮೀ.ವರೆಗೆ ಕಾರ್ ಚಲಾಯಿಸಿಕೊಂಡು ಬಂದೆವು. ಬಳಿಕ ಅವರಿಂದ ತಪ್ಪಿಸಿಕೊಳ್ಳಲು ನಾನು ಕಾಡಿಗೆ ಓಡಿ ಹೋದೆ ಎಂದು ಖರಾಡಿ ಅವರು ತಿಳಿಸಿದ್ದಾರೆ.

ತಮ್ಮ ಪಕ್ಷದ ಆದಿವಾಸಿ ಸಮುದಾಯದ ನಾಯಕ, ದಾಂತಾ ಕ್ಷೇತ್ರದ ಅಭ್ಯರ್ಥಿ ಕಾಂತಿಭಾಯಿ ಖರಾಡಿ ಅವರು ಕಾಣೆಯಾಗಿದ್ದಾರೆ. ಬಿಜೆಪಿ ಗೂಂಡಾಗಳು ಅವರ ಮೇಲೆ ಹಲ್ಲೆ ಮಾಡಿದ್ದಾರೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ ಬಳಿಕ, ಇಡೀ ಘಟನೆಯು ಪ್ರಚಾರಕ್ಕೆ ಬಂದಿತ್ತು.

ಇದನ್ನೂ ಓದಿ | Gujarat Election | ಕ್ರಿಮಿನಲ್‌ ಅಭ್ಯರ್ಥಿಗಳಿಗೆ ಆಪ್, ಕೋಟ್ಯಧಿಪತಿ ಕ್ಯಾಂಡಿಡೇಟ್ಸ್‌ಗೆ ಬಿಜೆಪಿ ನಂ.1

Exit mobile version