ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರಾವಣ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ದೇಶದ ಪ್ರಧಾನಿಯನ್ನು ನಿಂದಿಸಲು ಕಾಂಗ್ರೆಸಿಗರು ಸ್ಪರ್ಧೆಗೆ ಬಿದ್ದಿದ್ದಾರೆ. ಸತತ ಸೋಲಿನಿಂದ ಅವರು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ನನ್ನನ್ನು ರಾವಣನಿಗೆ ಹೋಲಿಸಲು ಖರ್ಗೆ ಅವರಿಗೆ ಹೇಳಿಕೊಡಲಾಗಿದೆ ಎಂದು ಟೀಕಿಸಿದರು(Gujarat Election).
ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಕಲೋಲ್ ಪ್ರದೇಶದ ವೆಜಲ್ಪುರ್ ಎಂಬಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ”ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನಾಯಕರೊಬ್ಬರು ಮೋದಿ ಅವರಿಗೆ ನಾಯಿ ಸಾವು ಬರಲಿದೆ, ಮತ್ತೊಬ್ಬರು ಹಿಟ್ಲರ್ ಸಾವು ಬರಲಿದೆ ಎಂದಿದ್ದರು. ಇದೇ ರೀತಿ, ಮತ್ತೊಬ್ಬರು ಮೋದಿಯನ್ನು ಕೊಲ್ಲುತ್ತೇನೆ ಎಂದಿದ್ದರು. ಇನ್ನೊಬ್ಬರು ದೆವ್ವ ಅಂತ ಹೇಳಿದ್ದರು. ಕಾಂಗ್ರೆಸ್ ಕೇವಲ ಮೋದಿ ಹೆಸರು ಜಪ ಮಾಡುತ್ತಿರುವುದಕ್ಕೆ ನನಗೆ ಆಶ್ಚರ್ಯವೇನೂ ಇಲ್ಲ. ಆದರೆ, ಯಾರಾದರೂ ಈ ರೀತಿ ಮಾತನಾಡುತ್ತಾರೆಯೇ? ಮೋದಿಯನ್ನು ಅವಮಾನಿಸುವುದು ಕಾಂಗ್ರೆಸಿಗರು ತಮ್ಮ ಜನ್ಮಸಿದ್ಧ ಹಕ್ಕು ಎಂದು ಭಾವಿಸಿಕೊಂಡಿದ್ದಾರೆ,” ಎಂದು ಪ್ರಧಾನಿ ಮೋದಿ ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಹೇಳಿದ್ದೇನು?
”ಪ್ರಧಾನಿ ನರೇಂದ್ರ ಮೋದಿ ರಾವಣ ಇದ್ದಂತೆ. ಅವರಿಗೂ ರಾವಣನಂತೆ 10 ತಲೆಗಳು ಇವೆ. ನರೇಂದ್ರ ಮೋದಿಯವರ ರಾವಣನ ಸ್ವರೂಪ ಪ್ರತಿ ಚುನಾವಣೆಯಲ್ಲೂ ಗೋಚರವಾಗುತ್ತದೆ. ತಾವು ಸಿಕ್ಕಾಪಟ್ಟೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ ಎಂದು ಬಿಜೆಪಿ ಹೇಳಿಕೊಳ್ಳುತ್ತದೆ. ಆದರೆ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಮುಖಂಡರು ತಮ್ಮ ಸರ್ಕಾರಗಳ ಅಭಿವೃದ್ಧಿ ಕೆಲಸದ ಬಗ್ಗೆ ಮಾತನಾಡದೆ, ಸಮಾಜವನ್ನು ಒಡೆಯುವ, ಸಾಮಾಜಿಕ ಸ್ವಾಸ್ಥ್ಯ, ಕೋಮು ಸೌಹಾರ್ದತೆ ಕದಡುವ ದ್ವೇಷಯುಕ್ತ ಮಾತುಗಳನ್ನಷ್ಟೇ ಆಡುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದರು.
ಇದನ್ನೂ ಓದಿ | Opinion Poll | ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಮತ್ತೆ ಬಿಜೆಪಿಗೇ ಅಧಿಕಾರ? ಸಮೀಕ್ಷೆ ಹೇಳುವುದೇನು?