Site icon Vistara News

Gujarat Election Result | 27 ವರ್ಷಗಳ ಬಳಿಕವೂ ಗುಜರಾತ್‌ನಲ್ಲಿ ಸೋಲದ ಬಿಜೆಪಿ, ಈಗ ಮತ್ತಷ್ಟು ಬಲಾಢ್ಯ, ಏನಿದರ ಹಿನ್ನೋಟ?

Gujarat Election Result

| ರಾಮಸ್ವಾಮಿ ಹುಲಕೋಡು, ಬೆಂಗಳೂರು

ಇದುವರೆಗೂ ಗುಜರಾತ್‌ ನೇರಾನೇರ ಚುನಾವಣೆ ಕಾದಾಟಕ್ಕೆ ಹೆಸರಾದ ರಾಜ್ಯವಾಗಿತ್ತು. ಆದರೆ ಈ ಬಾರಿಯ ಚುನಾವಣೆ (Gujarat Election Result) ಈ ಇತಿಹಾಸವನ್ನು ಬದಲಾಯಿಸಿದೆ. ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವ ಮೂಲಕ ಹೊಸ ದಾಖಲೆ ಬರೆದಿದೆ. 1985ರ ಚುನಾವಣೆಯಲ್ಲಿ ಅಧಿಕಾರ ಹಿಡಿದಿದ್ದ ಕಾಂಗ್ರೆಸ್‌ 149 ಸ್ಥಾನ ಗೆದ್ದಿದ್ದೇ ಇದುವರೆಗಿನ ದಾಖಲೆಯಾಗಿತ್ತು. ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿ ಜನಪ್ರಿಯತೆಯ ಉತ್ತುಂಗದಲ್ಲಿ ಇದ್ದಾಗಲೇ, ಅಂದರೆ 2012ರಲ್ಲಿ ನಡೆದ ವಿದಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲಲು ಸಾಧ್ಯವಾಗಿದ್ದು 127 ಸ್ಥಾನಗಳನ್ನು ಮಾತ್ರ. ಈಗ ಈ ಎಲ್ಲ ದಾಖಲೆಗಳು ಛಿದ್ರಗೊಂಡಿವೆ. ಬಿಜೆಪಿಯ ಈ ಗೆಲುವು ರಾಷ್ಟ್ರ ಮಟ್ಟದಲ್ಲಿ ಕೂಡ ಹೊಸ ದಾಖಲೆಯೇ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ತವರು ರಾಜ್ಯವಾಗಿರುವ ಕಾರಣಕ್ಕೆ ಗುಜರಾತ್‌ನಲ್ಲಿ ನಡೆದ ಚುನಾವಣೆ ಈಗ ದೇಶದ ಗಮನ ಸೆಳೆಯುತ್ತಿದೆ. ಆದರೆ ಮೊದಲಿನಿಂದಲೂ ಈ ರಾಜ್ಯ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಗೆ, ನಾಟಕೀಯ ತಿರುವುಗಳಿಗೆ ಹೆಸರುವಾಸಿ. ಇಲ್ಲಿಯ ರಾಜಕೀಯ ಲೆಕ್ಕಾಚಾರಗಳು, ಜಾತಿ ಸಮೀಕರಣಗಳು ಬೇರೆಲ್ಲಾ ರಾಜ್ಯಗಳಿಗಿಂತಲೂ ಭಿನ್ನ.

ಮೂರನೇ ಪಕ್ಷಕ್ಕಿಲ್ಲ ಅವಕಾಶ!
ಗುಜರಾತ್‌ನ ರಾಜಕೀಯದಲ್ಲಿ ಒಮ್ಮೆ ಹೊರತುಪಡಿಸಿ ಕಾಂಗ್ರೆಸ್‌ ಅಥವಾ ಬಿಜೆಪಿ ಅಧಿಕಾರದಲ್ಲಿವೆ. 1962ರಲ್ಲಿ ನಡೆದ ವಿಧಾನಸಭಾ ಚುನಾವಣೆಯಿಂದ ಹಿಡಿದು 90ರ ದಶಕದವರೆಗೆ ನಿರಂತರವಾಗಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಒಟ್ಟು ಆರು ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆದು ಅಧಿಕಾರ ಹಿಡಿದಿತ್ತು. ಕಾಂಗ್ರೆಸ್‌ನ ಈ ನಿರಂತರ ಗೆಲುವಿನ ಓಟಕ್ಕೆ ತಡೆ ಹಾಕಿದ್ದು ಜನತಾ ಪಕ್ಷ.

1990ರಲ್ಲಿ ನಡೆದ ಚುನಾವಣೆಯಲ್ಲಿ 70 ಸ್ಥಾನಗಳನ್ನು ಗೆದ್ದು ಜನತಾ ಪಕ್ಷ ಅಧಿಕಾರ ಹಿಡಿದಿತ್ತು. ಈ ಚುನಾವಣೆಯಲ್ಲಿ ಬಿಜೆಪಿ 67 ಸ್ಥಾನವನ್ನು ಪಡೆದಿತ್ತು. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಮೊದಲಿಗೆ ಜನತಾ ಪಕ್ಷ ಬಿಜೆಪಿಯ ಬೆಂಬಲ ಪಡೆದು ಅಧಿಕಾರ ನಡೆಸಿತು. ಚಿಮನ್‌ ಭಾಯಿ ಪಟೇಲ್‌ ಮುಖ್ಯಮಂತ್ರಿಯಾಗಿದ್ದರು. ಈ ಆಡಳಿತ ಹೆಚ್ಚು ದಿನ ನಡೆಯಲಿಲ್ಲ. ಮರಳಿ ಕಾಂಗ್ರೆಸ್‌ ಅಧಿಕಾರವನ್ನು ವಶಪಡಿಸಿಕೊಂಡಿತ್ತು. ಜನತಾ ಪಕ್ಷ ಮತ್ತು ಕಾಂಗ್ರೆಸ್‌ ನಡುವಿನ ಹೊಂದಾಣಿಕೆ ಬಿಜೆಪಿಯ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿತು. ಆದರೆ ಕಾಂಗ್ರೆಸ್‌ನ ಅಧಿಕಾರದ ಸರಣಿಗೆ ಬ್ರೇಕ್‌ ಬಿತ್ತು. ನಂತರ ಇಲ್ಲಿ ಬಿಜೆಪಿ ಗೆಲುವಿನ ಓಟ ಆರಂಭವಾಯಿತು. ಇದುವರೆಗೂ ಈ ಎರಡು ಪಕ್ಷಗಳನ್ನು ಹೊರತು ಪಡಿಸಿ, ಮೂರನೇ ಪಕ್ಷ ಹೆಚ್ಚು ಸಮಯ ಅಧಿಕಾರ ನಡೆಸಿಯೇ ಇಲ್ಲ.

ಬಿಜೆಪಿಯದು ಒಂಬತ್ತರಿಂದ ಆರಂಭ
ಗುಜರಾತ್‌ನ ಚುನಾವಣಾ ರಾಜಕೀಯದಲ್ಲಿ ಬಿಜೆಪಿಯ ಗೆಲುವು-ಸೋಲಿನ ಲೆಕ್ಕಾಚಾರಗಳು ಆರಂಭವಾಗಿದ್ದು 1980ರಲ್ಲಿ. ಪಕ್ಷ ಉದಯಿಸುತ್ತಿದ್ದಂತೆಯೇ ನಡೆದ ಈ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷ 9 ಸ್ಥಾನಗಳನ್ನು ಗೆದ್ದು, ಮೂರನೇ ಸ್ಥಾನ ಪಡೆದಿತ್ತು. ಮೊದಲ ಚುನಾವಣೆಯಲ್ಲಿಯೇ ಪಕ್ಷ ಶೇ.14.02 ಮತ ಪಡೆದು ದೇಶದ ಗಮನ ಸೆಳೆದಿತ್ತು.

ನಂತರ 1985ರಲ್ಲಿ ನಡೆದ ಚುನಾವಣೆಯಲ್ಲಿ 11 ಸ್ಥಾನ ಪಡೆದಿತ್ತು. ಈ ಚುನಾವಣೆಯಲ್ಲಿ ಹೇಳಿಕೊಳ್ಳುವಂತಹ ಬೆಳವಣಿಗೆ ದಾಖಲಿಸಲು ಪಕ್ಷಕ್ಕೆ ಸಾಧ್ಯವಾಗಿರಲಿಲ್ಲ. ಮತ ಪ್ರಮಾಣ ಶೇ. 14.96ರಷ್ಟೇ ಇತ್ತು. ಆದರೆ ಮುಂದೆ ಎಲ್ಲವೂ ಬದಲಾಗುತ್ತಾ ಬಂದಿತು.

1990ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷ ಪಡೆದ ಮತ ಪ್ರಮಾಣ ದುಪ್ಪಟ್ಟಾಯಿತು. ಶೇ. 26.69 ಮತ ಪಡೆದ ಪಕ್ಷ 67 ಸ್ಥಾನ ಪಡೆದು ಎರಡನೇ ಸ್ಥಾನ ಪಡೆದುಕೊಂಡಿತ್ತು. ಕಾಂಗ್ರೆಸ್‌ ಅನ್ನು ಅಧಿಕಾರದಿಂದ ದೂರವಿಡಲು ಜನತಾ ಪಕ್ಷವನ್ನು ಬೆಂಬಲಿಸಿದ್ದ ಬಿಜೆಪಿ ಕೇವಲ ಎಂಟು ತಿಂಗಳಿನಲ್ಲಿ ಬೆಂಬಲವನ್ನು ಹಿಂದಕ್ಕೆ ಪಡೆಯಬೇಕಾಯಿತು. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಪಕ್ಷದ ಸಂಘಟನೆಯತ್ತ ಗಮನ ನೀಡಿತು.

ರಾಮಮಂದಿನ ನಿರ್ಮಾಣ ಚಳವಳಿಯಿಂದಾಗಿ ಪಕ್ಷಕ್ಕೆ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಬೆಂಬಲ ದೊರೆಯಿತು. 1995ರ ಚುನಾವಣೆಯಲ್ಲಿ ಕೇಶುಭಾಯ್‌ ಪಟೇಲ್‌ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಬಿಜೆಪಿ ಶೇ.42.51 ಮತ ಪಡೆದು, 121 ಸ್ಥಾನಗಳಲ್ಲಿ ಗೆದ್ದಿತ್ತು. 1990ರ ಚುನಾವಣೆಗಿಂತ 54 ಸ್ಥಾನ ಹೆಚ್ಚು ಗೆದ್ದಿತ್ತು. ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಕೇಶುಭಾಯ್‌ ಪಟೇಲ್‌ ಅಧಿಕಾರ ವಹಿಸಿಕೊಂಡರು. ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದ ಪರಿಣಾಮವಾಗಿ ನಾಲ್ಕು ಮುಖ್ಯಮಂತ್ರಿಗಳು ಬಂದು ಹೋದರು. ಆದರೆ ಪಕ್ಷ ಅಧಿಕಾರ ಕಳೆದುಕೊಳ್ಳಲಿಲ್ಲ. ಅಂದಿನಿಂದ ಆರಂಭವಾಗಿರುವ ಬಿಜೆಪಿಯ ಗೆಲುವಿನ ಚೈತ್ರ ಯಾತ್ರೆ ಈಗಲೂ ಮುಂದುವರಿದಿದೆ.

ಮೋದಿ ಯುಗದಲ್ಲಿ ಅರಳಿದ ಕಮಲ
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೇ ಗುಜರಾತ್‌ ರಾಜಕಾರಣಕ್ಕೆ ಕಾಲಿಟ್ಟಿದ್ದ ನರೇಂದ್ರ ಮೋದಿ ಲೋಕ ಸಂಘರ್ಷ ಸಮಿತಿಯ ಮೂಲಕ ಸಂಘಟನೆ ಆರಂಭಿಸಿದ್ದರು. 1987ರಲ್ಲಿ ಅಧಿಕೃತವಾಗಿ ರಾಜಕೀಯ ಚಟುವಟಿಕೆ ಆರಂಭಿಸಿದ ಅವರು, ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.1990ರಲ್ಲಿ ರಾಮಮಂದಿರ ಚಳವಳಿಯ ಭಾಗವಾದ ಅವರು 1995ರಲ್ಲಿ ಗುಜರಾತ್‌ ಚುನಾವಣೆ ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ತಂತ್ರಗಾರಿಕೆಯಿಂದಾಗಿಯೇ ಪಕ್ಷ ಅಧಿಕಾರಕ್ಕೆ ಬಂದಿತ್ತು.

1998ರಲ್ಲಿ ನಡೆದ ಚುನಾವಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು, ಭಿನ್ನಮತೀಯ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಅವರು ಶ್ರಮಿಸಿದರು. ಈ ಚುನಾವಣೆಯಲ್ಲಿಯೂ ಪಕ್ಷ ಶೇ.44.81 ಮತ ಪಡೆದು, 117 ಸ್ಥಾನಗಳಲ್ಲಿ ಗೆದ್ದಿತ್ತು. ಮುಖ್ಯಮಂತ್ರಿಯಾಗಿ ಮತ್ತೆ ಕೇಶುಭಾಯ್‌ ಪಟೇಲ್‌ ಅಧಿಕಾರ ವಹಿಸಿಕೊಂಡಿದ್ದರು. ಆದರೆ 2001ರಲ್ಲಿ ಮುಖ್ಯಮಂತ್ರಿ ಕೇಶುಭಾಯ್‌ ಪಟೇಲ್‌ ಅವರ ಆರೋಗ್ಯ ಹದಗೆಟ್ಟಿತ್ತು. ಸರ್ಕಾರದ ಆಡಳಿತ ಹಳಿ ತಪ್ಪಿ, ಉಪ ಚುನಾವಣೆಯಲ್ಲಿ ಪಕ್ಷ ಸೋಲನುಭವಿಸುವಂತಾಗಿತ್ತು. ಭೂಕಂಪದಿಂದಾಗಿ ರಾಜ್ಯ ನಲುಗಿತ್ತು.

ಈ ಸಂಕಷ್ಟದ ಸಂದರ್ಭದಲ್ಲಿ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿ 2001ರ ಅಕ್ಟೋಬರ್‌7ರಂದು ನೇಮಕಗೊಂಡರು. ಆಡಳಿತಕ್ಕೆ ಹೊಸ ರೂಪ ನೀಡಲಾರಂಭಿಸಿದ ಮೋದಿ ಮತ್ತೆಂದು ಹಿಂತಿರುಗಿ ನೋಡಲೇ ಇಲ್ಲ. ಗುಜರಾತ್‌ನ ರಾಜಕೀಯದಲ್ಲಿ ಮಹತ್ತರ ಪರಿಣಾಮ ಬೀರಿದ ಗೋದ್ರಾ ಕೋಮುಗಲಭೆಯ ನಂತರ ನಡೆದ ಚುನಾವಣೆಯಲ್ಲಿ ಅಂದರೆ 2002ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 49.85 ಮತ ಪಡೆದು 127 ಸ್ಥಾನ ಗೆದ್ದಿತ್ತು. ಉತ್ತಮ ಆಡಳಿತ ಮತ್ತು ಅಭಿವೃದ್ಧಿಯಿಂದಾಗಿಯೇ ಮುಂದೆ ಬಿಜೆಪಿ ಸತತವಾಗಿ ಗೆಲ್ಲುತ್ತಾ ಬಂದಿದೆ.

2007ರ ಚುನಾವಣೆಯಲ್ಲಿ ಪಕ್ಷ 117 ಸ್ಥಾನಗಳಲ್ಲಿ ಗೆದ್ದಿದ್ದರೆ, 2012ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ. 47.85 ರಷ್ಟು ಮತ ಪಡೆದು,115 ಸ್ಥಾನಗಳಲ್ಲಿ ಗೆದ್ದಿತ್ತು. ಮುಂದೆ 2014ರಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಆಯ್ಕೆಯಾದರು. ಆದರೂ ಅವರು ಗುಜರಾತ್‌ ರಾಜಕಾರಣದ ಮೇಲಿನ ತಮ್ಮ ಬಿಗಿ ಹಿಡಿತವನ್ನು ಬಿಡಲಿಲ್ಲ. 2017ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಆದರೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ತಮ್ಮ ತವರು ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಿ ದಾಖಲೆಯ ಗೆಲುವು ಸಾಧ್ಯವಾಗಿಸಿದ್ದಾರೆ.

ಬಲಿಷ್ಠವಾಗಿಯೇ ಇತ್ತು ಕಾಂಗ್ರೆಸ್‌
ಕ‌ಳೆದ ಎರಡೂವರೆ ದಶಕಗಳಿಂದ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಕಾಂಗ್ರೆಸ್‌ ಪಕ್ಷವೇನೂ ದುರ್ಬಲವಾಗಿರಲಿಲ್ಲ. ಇದುವರೆಗೆ ನಡೆದ ಪ್ರತಿ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿಯನ್ನೇ ನೀಡುತ್ತಾ ಬಂದಿದೆ. ಬಿಜೆಪಿ ಮೊದಲ ಬಾರಿ ಅಧಿಕಾರಕ್ಕೆ ಬಂದ ಚುನಾವಣೆಯಲ್ಲಿ ಅಂದರೆ 1995ರಲ್ಲಿ ಕಾಂಗ್ರೆಸ್‌ 45 ಸ್ಥಾನಗಳಲ್ಲಿ ಗೆದ್ದಿತ್ತು. ನಂತರ ಪ್ರತಿ ಚುನಾವಣೆಯಲ್ಲಿಯೂ ಗೆದ್ದ ಕ್ಷೇತ್ರಗಳ ಸಂಖ್ಯೆ ಹೆಚ್ಚುತ್ತಲೇ ಬಂದಿತ್ತು. 1998ರಲ್ಲಿ 53, ಗೋಧ್ರಾ ಹತ್ಯಾಕಾಂಡದ ನಂತರ ನಡೆದ ಚುನಾವಣೆಯಲ್ಲಿ ಅಂದರೆ 2002ರಲ್ಲಿ 51, 2007ರಲ್ಲಿ 59, 2012ರಲ್ಲಿ 61, 2017ರಲ್ಲಿ 78 ಸ್ಥಾನಗಳನ್ನು ಪಡೆದಿತ್ತು. 2017ರ ಚುನಾವಣೆಯಲ್ಲಿ ಶೇ.41.44 ರಷ್ಟು ಮತ ಪಡೆದು ಪಕ್ಷದ ಸಾಮರ್ಥ್ಯ ಪ್ರದರ್ಶಿಸಿತ್ತು. ಆದರೆ ಈ ಬಾರಿ ಮಾತ್ರ ಹೀನಾಯ ಸ್ಥಿತಿಗೆ ತುಲುಪಿದೆ. ಬಿಜೆಪಿಯನ್ನು ಸೋಲಿಸಲೆಂದು ಬಂದ ಎಎಪಿ ಕಾಂಗ್ರೆಸ್‌ನ ಕಾಲೆಳೆದು ಕುಳಿತಿದೆ!

ಮುಖ್ಯಮಂತ್ರಿಗಳ ಬದಲಾವಣೆ ರಾಜಕೀಯ!
ಗುಜರಾತ್‌ ರಾಜಕಾರಣದ ವಿಶೇಷವೆಂದರೆ ಇಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡವರು ಐದು ವರ್ಷ ಪೂರ್ಣ ಅಧಿಕಾರ ನಡೆಸಿದ್ದು ಬಹಳ ಕಡಿಮೆ. ಇಲ್ಲಿ ಸುದೀರ್ಘ ಅಧಿಕಾರ ನಡೆಸಿದ್ದು ನರೇಂದ್ರ ಮೋದಿಯೊಬ್ಬರೇ!
ಒಂದು ಅವಧಿಯಲ್ಲಿ ಇಬ್ಬರು, ಮೂವರು ಮುಖ್ಯಮಂತ್ರಿಯಾಗುವುದು ರಾಜ್ಯದ ರಾಜಕೀಯದಲ್ಲಿ ಸಾಮಾನ್ಯವಾಗಿದೆ.
ಕಾಂಗ್ರೆಸ್‌ನ ಹಿತೇಂದ್ರ ಕನ್ನೈಯಲಾಲ್‌ ದೇಸಾಯಿ (1967), ಮಾಧವ್‌ ಸಿಂಘ್‌ ಸೋಲಂಕಿ (1980) ಮತ್ತು ಬಿಜೆಪಿಯ ನರೇಂದ್ರ ಮೋದಿ (2002 ಮತ್ತು 2007ರ ಅವಧಿ) ಪೂರ್ತಿ ಅವಧಿಯ ಅಧಿಕಾರ ನಡೆಸಿದ ಮುಖ್ಯಮಂತ್ರಿಗಳಾಗಿದ್ದಾರೆ.

ಐದು ವರ್ಷಗಳಲ್ಲಿ ನಾಲ್ವರು ಮುಖ್ಯಮಂತ್ರಿಗಳು

1995ರಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿದಿದ್ದ ಬಿಜೆಪಿ ಬಂಡಾಯದ ಕಾರಣದಿಂದಾಗಿ ಐದು ವರ್ಷದಲ್ಲಿ ನಾಲ್ಕು ಮುಖ್ಯಮಂತ್ರಿಗಳನ್ನು ನೀಡಿತ್ತು. 1998ರಲ್ಲಿ ಅಧಿಕಾರಕ್ಕೆ ಬಂದಾಗ ಕೇಶುಭಾಯ್‌ ಪಟೇಲ್‌ ಮತ್ತು ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದರು. ಮುಂದೆ ನರೇಂದ್ರ ಮೋದಿ ಪ್ರಧಾನಿಯಾಗುತ್ತಿದ್ದಂತೆಯೇ ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಮತ್ತೆ ಸಾಮಾನ್ಯವೆಂಬತಾಯಿತು. 2012ರಿಂದ 2017ರವರೆಗೆ ಮೂರು ಬಾರಿ ಮುಖ್ಯಮಂತ್ರಿಯನ್ನು ಬದಲಾಯಿಸಲಾಯಿತು. ಪ್ರಧಾನಿಯಾಗಿ ಆಯ್ಕೆಯಾಗುತ್ತಿದ್ದ ಮೋದಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಆನಂದೀ ಬೆನ್‌ ಪಟೇಲ್‌ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಲಾಯಿತು. 75 ವರ್ಷ ತುಂಬಿತೆಂಬ ಕಾರಣಕ್ಕೆ ಅವರನ್ನು ಬದಲಾಯಿಸಿ, ವಿಜಯ್‌ ರೂಪಾನಿ ಅವರನ್ನು ನೇಮಿಸಲಾಯಿತು.

ಕಳೆದ ಚುನಾವಣೆಯಲ್ಲಿ ಪಕ್ಷ ವಿಜಯ್‌ ರೂಪಾನಿ ನೇತೃತ್ವದಲ್ಲಿಯೇ ಎದುರಿಸಿ ಗೆದ್ದಿತು. ಆದರೆ 2021ರಲ್ಲಿ ಪಕ್ಷ ಅವರನ್ನು ಅಧಿಕಾರದಿಂದ ಇಳಿಸಿ, ಈ ಹುದ್ದೆಗೆ ಭೂಪೇಂದ್ರ ಪಟೇಲ್‌ ಅವರನ್ನು ನೇಮಿಸಿತ್ತು. ಈ ಬಾರಿ ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಿದ್ದು, ಗುಜರಾತ್‌ನ ಪಟೇಲ್‌ ಸಮುದಾಯ ಬಿಜೆಪಿಯನ್ನು ಬೆಂಬಲಿಸಿದ್ದರ ಪರಿಣಾಮ ಭರ್ಜರಿ ಗೆಲುವು ಸಾಧ್ಯವಾಗಿದೆ. ಬಿಜೆಪಿ ಹೈಕಮಾಂಡ್‌ ಈ ರೀತಿ ಮುಖ್ಯಮಂತ್ರಿಯನ್ನು ಬದಲಾಯಿಸುವುದರ ಹಿಂದೆ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವ ತಂತ್ರಗಾರಿಕೆ ಇದೆ. ಅದು ವರ್ಕ್‌ಔಟ್‌ ಕೂಡ ಆಗಿದೆ.

ಗೋಧ್ರಾ ಹತ್ಯಾಕಾಂಡ ಮತ್ತು ರಾಜಕೀಯ
ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮು ಗಲಭೆ ಮತ್ತು ಗೋಧ್ರಾ ಹತ್ಯಾಕಾಂಡ ಬಿಜೆಪಿಗೆ ಪ್ರಬಲ ನೆಲೆಗಟ್ಟನ್ನು ಒದಗಿಸಲು ಕಾರಣವಾದವು. 2002 ಫೆಬ್ರವರಿ 27ರಂದು ನಡೆದ ಗೋಧ್ರಾ ಹತ್ಯಾಕಾಂಡದ ಬೆನ್ನಲ್ಲಿಯೇ ನಡೆದ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ, “ನೀವು ನನಗೆ ಮತ ನೀಡಬೇಕೆಂದು ಕೇಳುವುದಿಲ್ಲ. ಆದರೆ ಗೋಧ್ರಾ ಹತ್ಯಾಕಾಂಡವನ್ನು ಮಾತ್ರ ಮರೆಯಿರಿ ಎಂದು ಹೇಳಬೇಡಿ. ಅದನ್ನು ನಾನು ಹೇಗೆ ಮರೆಯಲಿ? ಬೆಂಕಿಯಿಂದ ಭಸ್ಮವಾದ ರೈಲ್ವೆಯ ಬೋಗಿಯೊಳಗಿನಿಂದ ದೈವಭಕ್ತರ ಆರ್ತನಾದ ನನ್ನ ಕಿವಿಗಳಲ್ಲಿ ಈಗಲೂ ಗುಂಯ್‌ಗುಡುತ್ತಿದೆʼ ಎಂದೇ ಭಾಷಣ ಮಾಡುತ್ತಿದ್ದರು.

ಪರಿಣಾಮವಾಗಿ ಈ ಚುನಾವಣೆಯಲ್ಲಿ ಪಕ್ಷ ಶೇ.49.85ರಷ್ಟು ಮತ ಪಡೆದಿತ್ತು. ಮುಂದೆ ಈ ಹತ್ಯಾಕಾಂಡದ ರಾಜಕೀಯದಲ್ಲಿ ಮೋದಿಯವರನ್ನು ಹೆಡೆಮುರಿಕಟ್ಟುವ ಹಲವು ಪ್ರಯತ್ನಗಳು ನಡೆದವಾದರೂ ಅವುಗಳನ್ನು ಮೆಟ್ಟಿ ನಿಲ್ಲುವಲ್ಲಿ ಅವರು ಯಶಸ್ವಿಯಾದರು. ಅಭಿವೃದ್ಧಿಯ ಹೊಸ ರಾಜಕೀಯ ಆರಂಭಿಸಿ, ಗುಜರಾತ್‌ ಅನ್ನು ಮಾದರಿ ರಾಜ್ಯವಾಗಿಸಿದ್ದರು. ಹೀಗಾಗಿ ಗುಜರಾತ್‌ನಲ್ಲಿ ಮೋದಿ ಪ್ರಭಾವ ದಟ್ಟವಾಗಿದೆ. ಈ ಬಾರಿ ಗುಜರಾತ್‌ನಲ್ಲಿ ಬಿಜೆಪಿಯ ಅಭೂತಪೂರ್ವ ದಿಗ್ವಿಜಯ ಹಿಂದೆ ಪ್ರಧಾನಿ ಸ್ಥಾನದಲ್ಲಿರುವ ನರೇಂದ್ರ ಮೋದಿ ಅವರ ಪ್ರಭಾವವೂ ಗಾಢವಾಗಿದೆ.

ಇದನ್ನೂ ಓದಿ |Gujarat Election Result | ಗುಜರಾತ್‌ನಲ್ಲಿ ಸಿಎಂ ಪದಗ್ರಹಣ ಸಮಾರಂಭಕ್ಕೆ ಮುಹೂರ್ತ ಫಿಕ್ಸ್, ಮೋದಿ, ಶಾ ಭಾಗಿ

Exit mobile version