ಅಹಮದಾಬಾದ್: ಗುಜರಾತ್ ವಿಧಾನಸಭೆಯ 182 ಕ್ಷೇತ್ರಗಳ ಪೈಕಿ 158 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಸತತ 7ನೇ ಬಾರಿಗೆ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೇರುತ್ತಿದೆ. (Gujarat Election Results) ಮತಗಳ ಹಂಚಿಕೆಯಲ್ಲಿ ದಾಖಲೆಯ 52.9% ಸಿಂಹಪಾಲನ್ನು ಗಳಿಸಿದೆ. ಪಶ್ಚಿಮ ಕರಾವಳಿಯ ಗುಜರಾತ್‌ನ ರಾಜಕಾರಣದಲ್ಲಿಯೇ ಯಾವೊಂದು ಪಕ್ಷವೂ ಇದುವರೆಗೆ ಇಂಥ ಅಮೋಘ ಗೆಲುವನ್ನು ಕಂಡಿಲ್ಲ. ಈ ಹಿಂದೆ 1985ರಲ್ಲಿ ಕಾಂಗ್ರೆಸ್ 149 ಕ್ಷೇತ್ರಗಳಲ್ಲಿ ಗೆದ್ದಿತ್ತು. ಇಂದಿರಾ ಗಾಂಧಿ ನಿಧನದ ಬಳಿಕ ನಡೆದ ಚುನಾವಣೆಯಾದ್ದರಿಂದ ಅನುಕಂಪದ ಅಲೆಯಲ್ಲಿ ಪಕ್ಷ ಪ್ರಚಂಡ ಬಹುಮತ ಗಳಿಸಿತ್ತು. ಆಗ ಬಿಜೆಪಿ ಕೇವಲ ಎರಡು ಕ್ಷೇತ್ರಗಳನ್ನು ತನ್ನದಾಗಿಸಿತ್ತು. ಇಂದು ಕಾಂಗ್ರೆಸ್ ಪರಿಸ್ಥಿತಿ ಚಿಂತಾಜನಕವಾಗಿದೆ. ಹಾಗಾದರೆ ಬಿಜೆಪಿಯ ಚಾರಿತ್ರಿಕ ಗೆಲುವಿನ ಹಿಂದಿನ 10 ಕಾರಣಗಳ ವಿವರ ಇಲ್ಲಿದೆ.
ಮುಂದುವರಿದ ಮೋದಿ ಮ್ಯಾಜಿಕ್
ಇದು ನಿಸ್ಸಂದೇಹವಾಗಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಗುಜರಾತ್‌ನ ಜನತೆ ಇಟ್ಟಿರುವ ಅದಮ್ಯವಾದ ಪ್ರೀತಿ, ವಿಶ್ವಾಸ, ಗೌರವಕ್ಕೆ ಸಾಕ್ಷಿ. ಲೋಕಸಭೆ ಚುನಾವಣೆ ವರ್ಷಕ್ಕೆ ಮುನ್ನ ತವರೂರಿನ ಜನತೆ, ಪ್ರಧಾನಿ ಮೋದಿಯವರಿಗೆ ಐತಿಹಾಸಿಕ ಮತ್ತು ಅವಿಸ್ಮರಣೀಯವಾದ ಫಲಿತಾಂಶದ ಕೊಡುಗೆಯನ್ನು ನೀಡಿದ್ದಾರೆ.
ಪ್ರಧಾನಿ ಮೋದಿಯವರ 27 ರ‍್ಯಾಲಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯಲ್ಲಿ ಗುಜರಾತ್‌ಗೆ ಒಂದೇ ಸಲ ಭೇಟಿ ಕೊಟ್ಟು ಕೈ ತೊಳೆದುಕೊಂಡಿದ್ದರು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಬ್ಬರೇ ರಾಜ್ಯದಲ್ಲಿ ಬರೋಬ್ಬರಿ ೨೭ ರ‍್ಯಾಲಿಗಳನ್ನು ನಡೆಸಿದ್ದರು. ಬಿಜೆಪಿ ಚಾಣಕ್ಯ ಅಮಿತ್ ಶಾ ಅವರಂತೂ ಎರಡು ತಿಂಗಳು ಗುಜರಾತ್‌ನಲ್ಲಿಯೇ ವಾಸ್ತವ್ಯ ಹೂಡಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಹಲವು ಪ್ರಮುಖರು ಗುಜರಾತ್‌ನಲ್ಲಿ ಸಾಲು ಸಾಲು ರ‍್ಯಾಲಿ, ಸಮಾವೇಶಗಳನ್ನು ಕೈಗೊಳ್ಳುವ ಮೂಲಕ ಮತದಾರರ ಒಲವು ಬೇರೆಡೆ ವಾಲದಂತೆ ತಡೆಯಲು ಯತ್ನಿಸಿದ್ದರು.
ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ೧೬ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ೫೦ ಕಿ.ಮೀ ಮೆಗಾ ರೋಡ್ ಶೋ (Modi Mega Roadshow) ನಡೆಸಿದ್ದು, ಹೊಸ ದಾಖಲೆಯಾಗಿತ್ತು. ಇಡೀ ಚುನಾವಣಾ ಪ್ರಚಾರ ಮೋದಿ Vs ಇತರರು ಎಂದಾಗಿತ್ತು. ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಯ ಮುಖವನ್ನೂ ನೋಡದೆ ಮತದಾರರು ಬಿಜೆಪಿಗೆ ಮತ ಚಲಾಯಿಸಿದ್ದರು. ಡಿಸೆಂಬರ್ 1 ರಂದು ಅಹಮದಾಬಾದ್‌ನಲ್ಲಿ ಬೃಹತ್ ಸಮಾವೇಶ ನಡೆಸಿದ್ದರು.
ಬಿಜೆಪಿಯ ಸಂಘಟನಾ ಬಲ, ಪೂರ್ವಸಿದ್ಧತೆ
೨೦೨೪ರಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ, ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ವಿಧಾನಸಭೆಯ ಹಣಾಹಣಿ ಬಿಜೆಪಿಗೆ ಅತ್ಯಂತ ಪ್ರತಿಷ್ಠೆಯ ಪಣವಾಗಿತ್ತು. ಕಳೆದ ಸುಮಾರು ಮೂರು ದಶಕಗಳಿಂದ ಅಧಿಕಾರದಲ್ಲಿದ್ದರೂ, ಈ ಚುನಾವಣೆಯನ್ನು ಕೇಸರಿ ಪಡೆ ಯಾವುದೇ ಕಾರಣಕ್ಕೂ ಕಡೆಗಣಿಸಿರಲಿಲ್ಲ. ಪಕ್ಷ ಸಂಘಟನೆಯ ವಿಚಾರದಲ್ಲಿ ಬಿಜೆಪಿಯನ್ನು ಗುಜರಾತ್‌ನಲ್ಲಿ ಮೀರಿಸುವ ಮತ್ತೊಂದು ಪಕ್ಷ ಇಲ್ಲ. ಕಾಂಗ್ರೆಸ್, ಆಮ್ ಆದ್ಮಿಗೆ ಸಂಘಟನೆ ದುರ್ಬಲವಾಗಿತ್ತು. ನವೆಂಬರ್‌ನಲ್ಲಿ ಅಭ್ಯರ್ಥಿಗಳ ಮೊದಲ ಎರಡು ಪಟ್ಟಿ ಬಿಡುಗಡೆಗೊಳಿಸಿ ಬಂಡಾಯವನ್ನು ಹತ್ತಿಕ್ಕಿತ್ತು. ಮತದಾನಕ್ಕೆ ಕನಿಷ್ಠ 6 ತಿಂಗಳು ಇರುವಾಗಲೇ ಬಿಜೆಪಿ ಸೌರಾಷ್ಟ್ರ ವಲಯದಲ್ಲಿ ಭಾರಿ ಪೂರ್ವ ಸಿದ್ಧತೆ ಆರಂಭಿಸಿತ್ತು. ಪ್ರತಿ ಚುನಾವಣೆಯೂ ಕೊನೆಯ ಚುನಾವಣೆ ಎಂಬಂತೆ, ಮಾಡು-ಇಲ್ಲವೇ ಮಡಿ ಎಂಬ ರಣತಂತ್ರವನ್ನು ಬಿಜೆಪಿ ಜಾರಿಗೊಳಿಸಿತ್ತು. ಪ್ರತಿ ಮತಗಟ್ಟೆಯಲ್ಲಿಯೂ ಬಿಜೆಪಿ ಈ ಸಲವೂ “ಪನ್ನಾ ಪ್ರಮುಖ್ʼ ಜಾಲವನ್ನು ಹೆಣೆದಿತ್ತು. ಪ್ರತಿ ಮತಗಟ್ಟೆಯ ಮೂಲಕ ಪ್ರತಿ ಮತದಾರರನ್ನೂ ತಲುಪಿತ್ತು. ತಳಮಟ್ಟದಲ್ಲಿ ಕಾರ್ಯಕರ್ತರ ಸಂಘಟನೆಗೆ ಮಣೆ ಹಾಕಿತ್ತು.
ಹೊಸಬರಿಗೆ ಮಣೆ ಹಾಕಿ, ಆಡಳಿತ ವಿರೋಧಿ ಅಲೆ ಹತ್ತಿಕ್ಕುವ ತಂತ್ರ
ಸುದೀರ್ಘ ಕಾಲದಿಂದ ಅಧಿಕಾರದಲ್ಲಿ ಯಾವುದೇ ಪಕ್ಷ ಇದ್ದಾಗ ಆಡಳಿತ ವಿರೋಧಿ ಅಲೆ ಸಹಜ. ಅದನ್ನು ನಿಯಂತ್ರಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಗುಜರಾತ್‌ನಲ್ಲಿ 42ಕ್ಕೂ ಹೆಚ್ಚು ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಸಚಿವ ಸಂಪುಟದ ಐವರು ಸಚಿವರಿಗೂ ಟಿಕೆಟ್ ಕೊಟ್ಟಿರಲಿಲ್ಲ. ಹೊಸ ಮುಖಗಳಿಗೆ ಟಿಕೆಟ್ ಕೊಡುವ ಮೂಲಕ ಆಡಳಿತ ವಿರೋಧಿ ಅಲೆಯನ್ನು ಬಿಜೆಪಿ ಯಶಸ್ವಿಯಾಗಿ ಎದುರಿಸಿತ್ತು. ಹಾಗಂತ ಸಿಎಂ ಬದಲಿಸುವ ತಂತ್ರ ಹಿಮಾಚಲಪ್ರದೇಶದಲ್ಲಿ ಪಕ್ಷಕ್ಕೆ ಪ್ರಯೋಜನವಾಗಿಲ್ಲ ಎಂಬುದನ್ನೂ ಇಲ್ಲಿ ಗಮನಿಸಬಹುದು. ಮಾಜಿ ಸಿಎಂ ವಿಜಯ್ ರೂಪಾನಿ, ಮಾಜಿ ಗೃಹ ಸಚಿವ ಪ್ರದೀಪ್‌ಸಿನ್ಹ್ ಜಡೇಜಾ, ಇಂಧನ ಸಚಿವ ಸೌರಭ್ ದಲಾಲ್, ಶಿಕ್ಷಣ ಸಚಿವ ಭೂಪೇಂದ್ರಸಿನ್ಹ್ ಚುದಾಸ್ಮ ಅವರಿಗೂ ಟಿಕೆಟ್ ನಿರಾಕರಿಸಲಾಗಿತ್ತು. ಬಿಜೆಪಿ ಗುಜರಾತ್‌ನಲ್ಲಿ ಈ ಸಲ ಮಹಿಳಾ ಮತದಾರರ ಮನಗೆಲ್ಲಲು ೧೭ ಮಂದಿ ಮಹಿಳೆಯರಿಗೆ ಪಕ್ಷದ ಟಿಕೆಟ್ ವಿತರಿಸಿತ್ತು.
ಬಿಜೆಪಿಗೆ ಕಾಂಗ್ರೆಸ್ ನ 20 ಶಾಸಕರ ವಲಸೆ
ಕಳೆದ 2017ರ ಬಳಿಕ ಕಾಂಗ್ರೆಸ್ ನ 20 ಶಾಸಕರು ಬಂಡಾಯವೆದ್ದು ಬಿಜೆಪಿಗೆ ಸೇರಿದ್ದರು. ಚುನಾವಣೆ ಸಮೀಪಿಸುತ್ತಿರುವಾಗ ಹಲವು ಪ್ರಮುಖ ನಾಯಕರು ಕೈ ಪಾಳೆಯ ತೊರೆದು ಕೇಸರಿ ಪಕ್ಷದ ಕೈ ಹಿಡಿದಿದ್ದರು. ಹಾರ್ದಿಕ್ ಪಟೇಲ್, ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಪಡಸಾಲೆಗೆ ಸೇರಿದ್ದರು. ಗೆಲ್ಲುವ ಕುದುರೆಗಳನ್ನು ಯಾವುದೇ ಪಕ್ಷ, ಮೂಲವಾದರೂ ಸರಿ ಎಂದು ಬಿಜೆಪಿ ಸ್ವಾಗತಿಸಿತ್ತು.
ಪಾಟೀದಾರ ಮತಗಳ ನಿರ್ವಹಣೆ
ಹಾರ್ದಿಕ್ ಪಟೇಲ್ ಸಾರಥ್ಯದಲ್ಲಿ ನಡೆದ ಮೀಸಲಾತಿ ಹೋರಾಟದಲ್ಲಿ ಪಾಟೀದಾರ ಸಮುದಾಯ, ಕ್ರಮೇಣ ಕಾಂಗ್ರೆಸ್ ಕಡೆಗೆ ವಾಲುತ್ತಿತ್ತು. ಆದರೆ ಈ ಸಲ ಪಾಟೀದಾರ್ ಸಮುದಾಯದ ಪ್ರಬಲ ನಾಯಕರಿಗೆ ಪಕ್ಷ ಟಿಕೆಟ್ ಕೊಟ್ಟಿತ್ತು. ಸಮುದಾಯದ ಆಕ್ರೋಶವನ್ನು ತಣ್ಣಗಾಗಿಸಿತ್ತು. ಬುಡಕಟ್ಟು ಸಮುದಾಯ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೂ ಸ್ಥಳೀಯ ನಾಯಕರಿಗೆ ಆದ್ಯತೆ ನೀಡಿತ್ತು.
ಹಿಂದುತ್ವ, ರಾಷ್ಟ್ರೀಯತೆ, ಗುಜರಾತ್ ಅಸ್ಮಿತೆಯ ಅಲೆ
ಗುಜರಾತ್‌ನಲ್ಲಿ ನರೇಂದ್ರ ಮೋದಿಯವರ ಅಭಿವೃದ್ಧಿ ಯೋಜನೆಗಳ ಜತೆಗೆ ಹಿಂದುತ್ವ, ರಾಷ್ಟ್ರೀಯತೆ, ಗುಜರಾತ್ ಅಸ್ಮಿತೆ ಕೂಡ ಬಿಜೆಪಿಗೆ ವರವಾಗಿ ಪರಿಣಮಿಸಿದೆ. ಈ ಹಿಂದಿನ ಚುನಾವಣೆಗಳಂತೆ ಈ ಸಲವೂ ಫಲಪ್ರದವಾಗಿದೆ. ರಾಜ್ಯದಲ್ಲಿ ಪ್ರತಿಪಕ್ಷ ಬಹುತೇಕ ನಿರ್ನಾಮವಾಗಿದೆ.
ಕೋವಿಡೋತ್ತರ ಪರಿಹಾರ ಕಾರ್ಯಾಚರಣೆ
ಕೋವಿಡ್-19 ಬಿಕ್ಕಟ್ಟಿನ ಬಳಿಕ ಗುಜರಾತ್ ವಿಧಾನಸಭೆಗೆ ನಡೆದ ಮೊದಲ ಚುನಾವಣೆ ಇದಾಗಿದೆ. ರಾಜ್ಯದಲ್ಲಿ ಸಂಭವಿಸಿದ್ದ ಸಾವು-ನೋವುಗಳಿಂದ ಬಿಜೆಪಿಗೆ ಆಡಳಿತ ವಿರೋಧಿ ಅಲೆ ತೀವ್ರವಾಗಿ ಹಿನ್ನಡೆ ಆಗಬಹುದು ಎಂದು ಭಾವಿಸಲಾಗಿತ್ತು. ಆದರೆ ಬಿಜೆಪಿ ಇದನ್ನು ಗ್ರಹಿಸಿಕೊಂಡು ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರನ್ನು ಬದಲಿಸಿತ್ತು. ಈ ಮೂಲಕ ಮತದಾರರ ಆಕ್ರೋಶವನ್ನು ತಣ್ಣಗಾಗಿಸಿತ್ತು. ಇದಾದ ಬಳಿಕ, ಕೋವಿಡ್-19 ನಿರ್ವಹಣೆಯ ವೈಫಲ್ಯ ಚುನಾವಣಾ ವಿಷಯದಿಂದಲೇ ಕಳೆದು ಹೋಗಿತ್ತು!
ಕಾಂಗ್ರೆಸ್, ಆಮ್ ಆದ್ಮಿಯ ದಯನೀಯ ವೈಫಲ್ಯ
ಕಾಂಗ್ರೆಸ್ ಕಳೆದ 2017ರ ವಿಧಾನಸಭೆ ಚುನಾವಣೆಯಲ್ಲಿ 77 ಸೀಟುಗಳನ್ನು ಗೆದ್ದು ಬೀಗಿತ್ತು. ಆಗ 41.4 % ಮತಗಳೊಂದಿಗೆ ಎರಡು ದಶಕಗಳಲ್ಲೇ ಉತ್ತಮ ಪ್ರದರ್ಶನವನ್ನು ದಾಖಲಿಸಿತ್ತು. ಆದರೆ ಈ ಸಲ ಅತ್ಯಂತ ಕಳಪೆ ಮಟ್ಟದ ಸಾಧನೆಯೊಂದಿಗೆ ನೆಲಕಚ್ಚಿದೆ. ಮತಗಳ ಪಾಲು 27.04%ಕ್ಕೆ ಕುಸಿದಿದೆ. ದುರ್ಬಲ ಕಾಂಗ್ರೆಸ್ ಆಡಳಿತ ವಿರೋಧಿ ಅಲೆಯ ಲಾಭವನ್ನು ಪಡೆಯಲೂ ಅಶಕ್ತವಾಗಿತ್ತು. ಆಮ್ ಆದ್ಮಿ ಪ್ರಮುಖ ಪ್ರತಿಪಕ್ಷವಾಗಿ ಅಸ್ತಿತ್ವ ಕಂಡುಕೊಳ್ಳುವುದಾಗಿ ಹೇಳಿಕೊಂಡಿದ್ದರೂ, ವಿಫಲವಾಗಿತ್ತು. ಹೀಗಾಗಿ ಬಿಜೆಪಿಗೆ ಎದುರಾಳಿಗಳೇ ಇದ್ದಿರಲಿಲ್ಲ. ಎಲ್ಲ ಗುಡ್ಡಗಾಡು ಪ್ರದೇಶಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿದೆ.
2017ರಲ್ಲಿ ಸೋತಿದ್ದ ಕ್ಷೇತ್ರಗಳಿಗೆ ಆದ್ಯತೆ
ಬಿಜೆಪಿ ಕಳೆದ 2017ರ ಚುನಾವಣೆಯಲ್ಲಿ ಸೋತಿದ್ದ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲು ಆದ್ಯತೆ ನೀಡಿತ್ತು.ಮೋರ್ಬಿ, ಸುರೇಂದ್ರನಗರ್, ಸೋಮನಾಥ್ ಮತ್ತು ಆಮ್ರೇಲಿ ವಲಯದಲ್ಲಿ ಕಳೆದು ಹೋಗಿದ್ದ ಸೀಟುಗಳನ್ನು ಮರು ವಶಪಡಿಸಿಕೊಳ್ಳಲು ಬಿಜೆಪಿ ಶತಾಯಗತಾಯ ಯತ್ನಿಸಿತ್ತು. ಇದರಲ್ಲಿ ಬಿಜೆಪಿ ಯಶಸ್ವಿಯಾಯಿತು.