Site icon Vistara News

Bhagavad Gita: ಮೋದಿ ತವರು ರಾಜ್ಯದ ಶಾಲೆಗಳಲ್ಲಿನ್ನು ಭಗವದ್ಗೀತೆ ಬೋಧನೆ! ಗುಜರಾತ್ ವಿಧಾನಸಭೆ ನಿರ್ಣಯ

Gujarat Government decided to taught Bhagavad Gita in schools

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ (PM Narendra Modi) ತವರು ರಾಜ್ಯ ಗುಜರಾತ್‌ನ ಶಾಲೆಗಳಲ್ಲಿ (Gujarat Schools) ಇನ್ನು ಮುಂದೆ ಭಗವದ್ಗೀತೆಯನ್ನು ಬೋಧಿಸಲಾಗುತ್ತದೆ(Bhagavad Gita). ಈ ಕುರಿತು ಗುಜರಾತ್ ವಿಧಾನಸಭೆಯು (Gujarat Assembly) ಅವಿರೋಧವಾಗಿ ನಿರ್ಣಯ ತೆಗೆದುಕೊಂಡಿದೆ. ಶಾಲೆಗಳಲ್ಲಿ ಭಗವದ್ಗೀತೆಯನ್ನು ಕಲಿಸುವ ಸಂಬಂಧ ರಾಜ್ಯ ಶಿಕ್ಷಣ ಇಲಾಖೆಯ ನಿರ್ಧಾರವನ್ನು ಜಾರಿಗೆ ತರಲು ಸರ್ಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಸದನದಲ್ಲಿ ನಿರ್ಣಯವನ್ನು ಮಂಡಿಸಿದ ಶಿಕ್ಷಣ ರಾಜ್ಯ ಸಚಿವ ಪ್ರಫುಲ್ ಪನ್ಶೇರಿಯಾ ಅವರು ರಾಜ್ಯ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, 2020ರ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳಲ್ಲಿ ಹೆಮ್ಮೆಯ ಭಾವನೆ ಮತ್ತು ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕೃತಿ ಮತ್ತು ಜ್ಞಾನ ವ್ಯವಸ್ಥೆಗಳು ಮತ್ತು ಸಂಪ್ರದಾಯಗಳೊಂದಿಗೆ ಸಂಪರ್ಕವನ್ನು ಬೆಳೆಸಲು ಒತ್ತು ನೀಡುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ, ಭಾರತೀಯ ಸಂಸ್ಕೃತಿಯನ್ನು ವಿದ್ಯಾರ್ಥಿಗಳ ದೈನಂದಿನ ಜೀವನದಲ್ಲಿ ಸಂಯೋಜಿಸುವುದು ಅತ್ಯಗತ್ಯ, ಇದರಿಂದ ಅವರು ಭಾರತೀಯ ಸಂಸ್ಕೃತಿಯ ಶ್ರೀಮಂತ ಪರಂಪರೆಗೆ ತೆರೆದುಕೊಳ್ಳುತ್ತಾರೆ ಮತ್ತು ಭಾರತೀಯರಾಗಿರುವುದಕ್ಕೆ ಹೆಮ್ಮೆಪಡುತ್ತಾರೆ. ಈ ಸಂಪರ್ಕವು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ನೆರವಾಗುವ ರೀತಿಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ಜ್ಞಾನ ವ್ಯವಸ್ಥೆಯನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಬೇಕು ಎಂದು ಸಚಿವರು ಹೇಳಿದರು.

ಅದನ್ನು ಸಾಧಿಸಲು, ರಾಜ್ಯ ಸರ್ಕಾರವು “ಶ್ರೀಮದ್ ಭಗವದ್ಗೀತೆಯಲ್ಲಿರುವ ಮೌಲ್ಯಗಳು ಮತ್ತು ತತ್ವಗಳನ್ನು 6 ರಿಂದ 12 ನೇ ತರಗತಿಯವರೆಗಿನ ರಾಜ್ಯದ ಶಾಲೆಗಳಲ್ಲಿ ಮಕ್ಕಳಿಗೆ ಆಸಕ್ತಿಯನ್ನು ಬೆಳೆಸುವ ಮತ್ತು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಪರಿಚಯಿಸಲು ನಿರ್ಧರಿಸಿದೆ” ಎಂದು ಪನ್ಶೇರಿಯಾ ಪ್ರತಿಪಾದಿಸಿದರು.

6ರಿಂದ 8ನೇ ತರಗತಿವರೆಗೆ ಸಂಗೀತ, ಚಿತ್ರಕಲೆ, ದೈಹಿಕ ಶಿಕ್ಷಣ ಒಳಗೊಂಡಿರುವ ಸರ್ವಾಂಗೀ ಶಿಕ್ಷಣ ವಿಷಯದ ಪಠ್ಯಪುಸ್ತಕದಲ್ಲಿ ಕಥೆ ಮತ್ತು ವಾಚನದ ರೂಪದಲ್ಲಿ ಪರಿಚಯಿಸಲಾಗುವುದು. ಗೀತಾ ಬೋಧನೆಗಳನ್ನು ಪ್ರಥಮ ಭಾಷೆಯಲ್ಲಿ ಅಳವಡಿಸಲಾಗುವುದು ಎಂದು ಪನ್ಶೇರಿಯಾ ಹೇಳಿದರು.

ಶ್ರೀಮದ್ ಭಗವದ್ಗೀತೆಯು ಭಾರತದ ಸಂತರು ಮತ್ತು ಕ್ರಾಂತಿಕಾರಿಗಳಿಗೆ ನಿರ್ದೇಶನವನ್ನು ನೀಡಿದ್ದು ಮಾತ್ರವಲ್ಲದೆ ಆಧುನಿಕ ಮತ್ತು ಪಾಶ್ಚಿಮಾತ್ಯ ಚಿಂತಕರ ಮೇಲೂ ಹೆಚ್ಚಿನ ಪ್ರಭಾವ ಬೀರಿದೆ. ಗೀತೆಯು ಯಾವುದೇ ಗಡಿಗಳಿಲ್ಲದ ಗ್ರಂಥವಾಗಿದೆ ಎಂದು ಶಿಕ್ಷಣ ಸಚಿವರು ಹೇಳಿದರು.

6 ರಿಂದ 12 ನೇ ತರಗತಿಗಳ ಪಠ್ಯಕ್ರಮದಲ್ಲಿ ಭಗವದ್ಗೀತೆಯ ಬೋಧನೆಗಳನ್ನು ಸೇರಿಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಅದರ ಸಂಪೂರ್ಣ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಈ ಸದನವು ರಾಜ್ಯ ಸರ್ಕಾರವನ್ನು ವಿನಂತಿಸುತ್ತದೆ ಎಂದು ಪನ್ಶೇರಿಯಾ ಸದನವನ್ನು ಒತ್ತಾಯಿಸಿದರು.

ಈ ಸುದ್ದಿಯನ್ನೂ ಓದಿ: Bhagavad Gita: ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿ ಇತಿಹಾಸ ಬರೆದ ಭಾರತೀಯ ಮೂಲದ ಆಸ್ಟ್ರೇಲಿಯನ್‌ ಸೆನೆಟರ್‌

Exit mobile version