Site icon Vistara News

Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್‌ಗೆ 25 ಸಾವಿರ ರೂ. ದಂಡ!

Gujarat high court imposes rs 25,000 penalty on delhi CM Kejriwal

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಶಿಕ್ಷಣ ಅರ್ಹತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಗುಜರಾತ್ ಹೈಕೋರ್ಟ್ (Gujarat High Court) 25 ಸಾವಿರ ದಂಡ ವಿಧಿಸಿದೆ. ಪ್ರಧಾನಿ ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪದವಿ ಸರ್ಟಿಫಿಕೇಟ್‌ಗಳನ್ನು ಪ್ರಧಾನಿ ಕಾರ್ಯಾಲಯವು(PMO) ಒದಗಿಸುವ ಅಗತ್ಯವಿಲ್ಲ ಎಂದು ಹೇಳಿರುವ ಗುಜರಾತ್ ಹೈಕೋರ್ಟ್, ಆರ್‌ಟಿಐನಡಿ ಮಾಹಿತಿ ಕೇಳಿದ್ದ ಅರವಿಂದ್ ಕೇಜ್ರಿವಾಲ್‌ಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ವಿವರಗಳನ್ನು ಒದಗಿಸುವಂತೆ ಪ್ರಧಾನಿ ಕಾರ್ಯಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿ(PIO) ಮತ್ತು ವಿಶ್ವವಿದ್ಯಾಲಯಗಳ ಸಾರ್ವಜನಿಕ ಮಾಹಿತಿ ಅಧಿಕಾರಿ(PIO)ಗಳಿಗೆ ಮಾಹಿತಿ ಆಯೋಗದ ಮುಸ್ಥರು(CIC) ಆದೇಶಿಸಿದ್ದರು. ಈ ಆದೇಶವನ್ನು ಗುಜರಾತ್‌ನ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರಿ ಪೀಠವು ರದ್ದು ಮಾಡಿದೆ. ಇದೇ ವೇಳೆ, ಪ್ರಧಾನಿ ಮೋದಿ ಅವರ ಶೈಕ್ಷಣಿಕ ಅರ್ಹತೆಯ ಪದವಿಗಳನ್ನು ಪತ್ರಗಳನ್ನು ಪೂರೈಸುವಂತೆ ಮಾಹಿತಿ ಕೇಳಿದ್ದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ 25 ಸಾವಿರ ದಂಡ ವಿಧಿಸಿದೆ. ಸಿಐಸಿ ಆದೇಶವನ್ನು ಪ್ರಶ್ನಿಸಿ ಗುಜರಾತ್ ವಿಶ್ವವಿದ್ಯಾಲಯವು ಹೈಕೋರ್ಟ್‌ ಮೊರೆ ಹೋಗಿತ್ತು.

ಇದನ್ನೂ ಓದಿ: ಪ್ರಧಾನಿ ಮೋದಿ ಪದವಿ ವಿವಾದ; ಬಾಲಿಶ ಕುತೂಹಲವೆಲ್ಲ ಸಾರ್ವಜನಿಕ ಹಿತಾಸಕ್ತಿ ಅಲ್ಲ ಎಂದ ಗುಜರಾತ್​ ವಿವಿ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್​

ತೀರ್ಪು ಕಾಯ್ದಿರಿಸಿದ್ದ ಗುಜರಾತ್ ಹೈಕೋರ್ಟ್

ಪ್ರಧಾನಿ ನರೇಂದ್ರ ಮೋದಿಯವರ ಪದವಿ ಪ್ರಮಾಣಪತ್ರವನ್ನು ನೀಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರು ಆರ್​ಟಿಐ ಕಾಯ್ದೆಯಡಿ ಕೇಳಿದ್ದರು. ಅರವಿಂದ್ ಕೇಜ್ರಿವಾಲ್​ ಕೇಳಿದ ದಾಖಲೆಯನ್ನು ನೀಡುವಂತೆ ಮುಖ್ಯ ಮಾಹಿತಿ ಆಯುಕ್ತರು (CIC) ಗುಜರಾತ್​ ವಿಶ್ವವಿದ್ಯಾಲಯಕ್ಕೆ 2016ರಲ್ಲಿ ನಿರ್ದೇಶನ ನೀಡಿದ್ದರು. ಸಿಐಸಿಯ ಈ ನಿರ್ದೇಶನದ ವಿರುದ್ಧ ಗುಜರಾತ್​ ಯೂನಿವರ್ಸಿಟಿ ಹೈಕೋರ್ಟ್​ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ತನ್ನ ತೀರ್ಪನ್ನು ಫೆಬ್ರವರಿ 10ರಂದು ಕಾಯ್ದಿರಿಸಿತ್ತು.

ಗುಜರಾತ್​ ಯೂನಿವರ್ಸಿಟಿ ಪರ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್​ ತುಷಾರ್​ ಮೆಹ್ತಾ ಅವರು, ‘ಆರ್​ಟಿಐ ಕಾಯ್ದೆಯ ದುರುಪಯೋಗ ಆಗುತ್ತಿದೆ’ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ಪದವಿ ಪ್ರಮಾಣ ಪತ್ರ ಪಡೆಯಲು ಆರ್​ಟಿಐ ಕಾಯ್ದೆ ಅನ್ವಯ ಮಾಡಲು ಆಗುವುದಿಲ್ಲ. ಯಾರೋ ಒಬ್ಬರ ಬಾಲಿಶ ಕುತೂಹಲವೆಲ್ಲ ಸಾರ್ವಜನಿಕ ಹಿತಾಸಕ್ತಿ ಆಗುವುದಿಲ್ಲ ಎಂದು ಕೋರ್ಟ್​​ಗೆ ತಿಳಿಸಿದರು.

ಯಾವುದೇ ಸಾರ್ವಜನಿಕ ಆಡಳಿತ ಹುದ್ದೆಯಲ್ಲಿರುವ ಯಾರೇ ಆಗಿರಲಿ, ಅವರ ಸಾರ್ವಜನಿಕ ಚಟುವಟಿಕೆಗಳಿಗೆ ಸಂಬಂಧವಿಲ್ಲದೆ ಇರುವ, ಇನ್ನೊಬ್ಬರ ವೈಯಕ್ತಿಕ ವಿಷಯಗಳನ್ನೆಲ್ಲ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳುವಂತಿಲ್ಲ. ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿಯವರ ಪದವಿ ಬಗ್ಗೆ ಸಾರ್ವಜನಿಕ ಡೊಮೇನ್​ನಲ್ಲಿ ಮಾಹಿತಿ ನೀಡಲಾಗಿದೆ. ಗುಜರಾತ್​ ವಿಶ್ವವಿದ್ಯಾಲಯವೂ ಕೂಡ ಈ ಹಿಂದೆ ತನ್ನ ವೆಬ್​ಸೈಟ್​​ನಲ್ಲಿ ಈ ಬಗ್ಗೆ ವಿವರವನ್ನು ನೀಡಿತ್ತು ಎಂದು ಸಾಲಿಸಿಟರ್ ಜನರಲ್ ವಾದಿಸಿದರು.

ಇನ್ನೊಂದೆಡೆ ಅರವಿಂದ್ ಕೇಜ್ರಿವಾಲ್​ ಪರ ವಕೀಲರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಬೇಕು. ಪ್ರಧಾನಿ ಮೋದಿಯವರ ಪದವಿ ಬಗೆಗಿನ ಮಾಹಿತಿ ಯಾವುದೇ ಸಾರ್ವಜನಿಕ ಡೊಮೇನ್​ನಲ್ಲಿ ಸಿಗುತ್ತಿಲ್ಲ ಎಂದು ವಾದಿಸಿದ್ದರು. ಎರಡೂ ಕಡೆಯವರ ವಾದವನ್ನು ಆಲಿಸಿದ ನ್ಯಾಯಮೂರ್ತಿ ಬಿರೆನ್​ ವೈಷ್ಣವ್​ ಅವರು ತೀರ್ಪು ಕಾಯ್ದಿರಿಸಿದ್ದರು.

ಏನಿದು ಪಿಎಂ ಮೋದಿ ಪದವಿ ವಿವಾದ?

ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾಗುತ್ತಿದ್ದಂತೆ ಪ್ರತಿಪಕ್ಷಗಳು ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಪ್ರಶ್ನಿಸಲಾರಂಭಿಸಿದವು. ಆಗ, ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ವಿವಿಯಿಂದ ಪದವಿ ಹಾಗೂ ದಿಲ್ಲಿ ವಿವಿಯಿಂದ ಎಂಎ ಪದವಿಯನ್ನು ಪಡೆದುಕೊಂಡಿದ್ದಾರೆಂದು ಹೇಳಿತ್ತು. ಅಲ್ಲದೇ ಸಂಬಂಧಿಸಿದ ದಾಖಲೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರದರ್ಶಿಸಿದ್ದರು. ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಹಾಗೂ ಸ್ನಾತಕೋತ್ತರ ಪದವಿ ಪತ್ರಗಳ ಬಹಿರಂಗ ಕೋರಿ, ಮಾಹಿತಿ ಹಕ್ಕಿನ ಕಾಯ್ದೆಯಡಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದರು. ಮಾಹಿತಿ ಹಕ್ಕು ಆಯೋಗವು, ಅರ್ಜಿದಾರರ ಮಾಹಿತಿಯನ್ನು ಪೂರೈಸುವಂತೆ ಪಿಎಂಒ ಹಾಗೂ ವಿಶ್ವವಿದ್ಯಾಲಯಗಳಿಗೆ ಆದೇಶಿಸಿತ್ತು. ಗುಜರಾತ್ ವಿವಿಯು ಆಯೋಗ ಈ ಆದೇಶವನ್ನು ಪ್ರಶ್ನಿಸಿ ಗುಜರಾತ್‌ ಹೈಕೋರ್ಟ್‌ಗೆ ಮೊರೆ ಹೋಗಿತ್ತು.

Exit mobile version