ಅಹ್ಮದಾಬಾದ್: ಕಾಲೇಜುಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯ ಪ್ರವೃತ್ತಿಯು ಗುಜರಾತ್‌ನಲ್ಲಿ ಮುಂದುವರಿದಿದೆ. ಈಗ ಗುಜರಾತ್‌ನ ಕಿರಿಯ ಗುಮಾಸ್ತ ಸ್ಪರ್ಧಾತ್ಮಕ ಪರೀಕ್ಷೆ (Gujarat Junior Clerk Exam) ಪ್ರಶ್ನೆ ಪತ್ರಿಕೆ ಸೋರಿಕೆಯಾದ್ದರಿಂದ, ಭಾನುವಾರ ನಡೆಯಬೇಕಿದ್ದ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಈ ಸಂಬಂದ ಶಂಕಿತ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ(Paper Leak) ಎಂದು ರಾಜ್ಯ ಪಂಚಾಯತ್ ಪರೀಕ್ಷಾ ಮಂಡಳಿ ಹೇಳಿದೆ.
1,181 ಗುಮಾಸ್ತ ಹುದ್ದೆಗಳಿಗೆ 9.5 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದರು. ಗುಜರಾತ್‌ನ ಸುಮಾರು 2,995 ಕೇಂದ್ರ ಗಳಲ್ಲಿ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಆದರೆ, ಈಗ ಪ್ರಶ್ನೆ ಪತ್ರಿಕೆ ಸೋರಿಕೆಯಾದ್ದರಿಂದ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಈ ಹಿಂದೆಯೂ ಅನೇಕ ಭಾರೀ ಈ ರೀತಿಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಪ್ರಕರಣಗಳು ನಡೆದಿವೆ.
ಸುಳಿವಿನ ಆಧಾರದ ಮೇಲೆ, ಪ್ರಶ್ನೆ ಪತ್ರಿಕೆ ಸೋರಿಕೆಯ ಸಂಬಂಧ ಪೊಲೀಸರು ಒಬ್ಬ ಶಂಕಿತನನ್ನು ಬಂಧಿಸಿದ್ದಾರೆ. ಆತನಿಂದ ಭಾನುವಾರ ಬೆಳಿಗ್ಗೆ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಪ್ರತಿಯನ್ನು ವಶಪಡಿಸಿಕೊಂಡಿದ್ದಾರೆ. ನಂತರ ಗುಜರಾತ್ ಪಂಚಾಯತ್ ಸೇವಾ ಆಯ್ಕೆ ಮಂಡಳಿಯು ಅಭ್ಯರ್ಥಿಗಳ ವ್ಯಾಪಕ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಿತು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಸಹಾಯಕ ಪ್ರೊಫೆಸರ್ ಆಯ್ಕೆ ಪ್ರಶ್ನೆಪತ್ರಿಕೆ ಸೋರಿಕೆ: ಚಾರ್ಜ್‌ಶೀಟ್ ಸಲ್ಲಿಕೆ, ಏನಿದೆ ಅದರಲ್ಲಿ?
ಭಾನುವಾರ ಬೆಳಗ್ಗೆ 11 ಗಂಟೆಯಿಂದ 12 ಗಂಟೆ ತನಕ ಗುಜರಾತ್‌ನ ವಿವಿಧ ಕೇಂದ್ರಗಳಲ್ಲಿ ಕಿರಿಯ ಕ್ಲರ್ಕ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಭಾನುವಾರ ಬೆಳಗ್ಗೆ ಪತ್ರಿಕೆ ಸೋರಿಕೆಯಾದ ಸುದ್ದಿ ಹರಿದಾಡಿತು. ತಕ್ಷಣವೇ ಎಚ್ಚೆತ್ತ ಪೊಲೀಸರ ಶಂಕಿತನೊಬ್ಬನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.