Site icon Vistara News

Gujarat | ಸೆಕ್ಸ್ ವಿಡಿಯೋ ಕಾಲ್ ಟ್ರ್ಯಾಪ್, 2.69 ಕೋಟಿ ರೂ. ಕಳೆದುಕೊಂಡ ಗುಜರಾತ್ ಉದ್ಯಮಿ!

Gujarat

ಅಹಮದಾಬಾದ್:‌ ಉದ್ಯಮಿಯೊಬ್ಬರು ಒಂದೇ ಒಂದು ಸೆಕ್ಸ್ ವಿಡಿಯೋ ಕಾಲ್‌ನಿಂದಾಗಿ ಬರೋಬ್ಬರಿ 2.69 ಕೋಟಿ ರೂ. ಕಳೆದುಕೊಂಡಿರುವ ಘಟನೆ ಗುಜರಾತ್‌ನಲ್ಲಿ (Gujarat) ನಡೆದಿದೆ. ಕಳೆದ ಆಗಸ್ಟ್‌ನಿಂದಲೂ ವಂಚನೆಗೆ ಒಳಗಾಗಿದ್ದ ಅವರೀಗ ಇದೀಗ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: Bomb Threat | ಬಾಂಬ್‌ ಬೆದರಿಕೆ ಹಿನ್ನೆಲೆ 244 ಜನರಿದ್ದ ಮಾಸ್ಕೊ-ಗೋವಾ ವಿಮಾನ ಗುಜರಾತ್‌ನಲ್ಲಿ ತುರ್ತು ಭೂಸ್ಪರ್ಶ

ನವೀಕರಿಸಬಹುದಾದ ಇಂಧನಗಳ ಸಂಸ್ಥೆಯ ಮಾಲೀಕರಾಗಿರುವ ಅವರಿಗೆ ಕಳೆದ ವರ್ಷ ಆಗಸ್ಟ್‌ 8ರಂದು ಕರೆಯೊಂದು ಬಂದಿದೆ. ಕರೆ ಮಾಡಿದ ಮಹಿಳೆ ತನ್ನನ್ನು ಮೋರ್ಬಿಯ ರಿಯಾ ಶರ್ಮಾ ಎಂದು ಪರಿಚಯಿಸಿಕೊಂಡಿದ್ದಾಳೆ. ಉದ್ಯಮಿಯೊಂದಿಗೆ ಸ್ನೇಹದಿಂದ ಮಾತನಾಡಿದ ಆಕೆ, ವಿಡಿಯೋ ಕಾಲ್‌ನಲ್ಲಿ ಉದ್ಯಮಿ ಬಟ್ಟೆ ಬಿಚ್ಚುವುದಕ್ಕೆ ಒತ್ತಾಯಿಸಿದ್ದಾಳೆ. ಮಹಿಳೆಯನ್ನು ನಂಬಿದ ಉದ್ಯಮಿ, ಬಟ್ಟೆ ಬಿಚ್ಚಿದ್ದಾರೆ.
ಬಟ್ಟೆ ಬಿಚ್ಚಿದ ತಕ್ಷಣ ಮಹಿಳೆಯು ಕರೆಯನ್ನು ಕಟ್‌ ಮಾಡಿದ್ದಾಳೆ. ನಂತರ ಕರೆ ಮಾಡಿ, “50,000 ರೂ. ಕೊಡು. ಇಲ್ಲವಾದರೆ ನಿಮ್ಮ ಬೆತ್ತಲೆ ವಿಡಿಯೊವನ್ನು ಎಲ್ಲೆಡೆ ಹರಿಬಿಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾಳೆ. ಈ ವಿಚಾರ ಕೇಳಿ ಹೆದರಿದ ಉದ್ಯಮಿ ಆ ಮಹಿಳೆಗೆ 50,000 ರೂ. ಕೊಟ್ಟಿದ್ದಾನೆ.


ಇದಾದ ಕೆಲವೇ ದಿನಗಳಲ್ಲಿ ಉದ್ಯಮಿಗೆ ಇನ್ನೊಂದು ಕರೆ ಬಂದಿದೆ. ತಾನು ದೆಹಲಿ ಪೊಲೀಸ್‌ ಇಲಾಖೆಯ ಅಧಿಕಾರಿ ಗುಡ್ಡು ಶರ್ಮಾ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಬೆತ್ತಲೆ ವಿಡಿಯೋ ತನ್ನ ಬಳಿ ಇದೆ ಎಂದು ಹೇಳಿ ಉದ್ಯಮಿಯಿಂದ 3 ಲಕ್ಷ ರೂ. ವಸೂಲಿ ಮಾಡಿದ್ದಾನೆ. ಆ.14ರಂದು ಮತ್ತೊಂದು ಕರೆ ಬಂದಿದ್ದು, ದೆಹಲಿ ಪೊಲೀಸ್‌ ಇಲಾಖೆಯ ಸೈಬರ್‌ ಸೆಲ್‌ ಅಧಿಕಾರಿ ಎಂದು ಪರಿಚಯಿಸಿಕೊಳ್ಳಲಾಗಿದೆ. ಆ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಕರಣವನ್ನು ಮುಚ್ಚಿ ಹಾಕಬೇಕೆಂದರೆ 80.97 ಲಕ್ಷ ರೂ. ಕೊಡಬೇಕೆಂದು ಬೇಡಿಕೆ ಇಡಲಾಗಿದೆ. ಅದರಂತೆ ಉದ್ಯಮಿ ಹಣ ನೀಡಿದ್ದಾರೆ ಕೂಡ.

ಇದನ್ನೂ ಓದಿ: Rashid Khan | ಬಿಬಿಎಲ್​ನಲ್ಲಿ ಆಡುವುದಿಲ್ಲ ಎಂದು ಬೆದರಿಕೆಯೊಡ್ಡಿದ ರಶೀದ್​ ಖಾನ್​!

ಇದಾದ ಬಳಿಕ ನಕಲಿ ಸಿಬಿಐ ಅಧಿಕಾರಿಗಳಿಂದ ಕರೆ ಬಂದಿದೆ. ಮಹಿಳೆಯು ಉದ್ಯಮಿಯ ವಿರುದ್ಧ ಸಿಬಿಐಗೆ ದೂರು ನೀಡಿದ್ದು, ಈ ಪ್ರಕರಣ ಹೊರಬರದಂತೆ ನೋಡಿಕೊಳ್ಳುವುದಕ್ಕೆ 8.5 ಲಕ್ಷ ರೂ. ಕೊಡಬೇಕೆಂದು ಕೇಳಲಾಗಿದೆ. ಆಗಲೂ ಹೆದರಿದ ಉದ್ಯಮಿ ಹಣ ಪಾವತಿ ಮಾಡಿದ್ದಾರೆ. ಇದೇ ರೀತಿ ಡಿ.15ರವರೆಗೂ ಆತ ಹಲವು ಮಂದಿಗೆ ಹಣ ಪಾವತಿ ಮಾಡುತ್ತಾ ಬಂದಿದ್ದಾರೆ. ಡಿ.15ರಂದು “ಈ ಪ್ರಕರಣ ಮುಕ್ತಾಯವಾಗಿದೆ” ಎಂದು ನಕಲಿ ದೆಹಲಿ ಹೈಕೋರ್ಟ್‌ ನೋಟಿಸ್‌ ಒಂದು ಉದ್ಯಮಿಗೆ ಬಂದಿದೆ. ಈ ನೋಟಿಸ್‌ ನೋಡಿದ ಮೇಲೆ ಅನುಮಾನ ಬಂದ ಉದ್ಯಮಿ ಪೊಲೀಸರ ಬಳಿ ತೆರಳಿದ್ದಾನೆ.

ಉದ್ಯಮಿಯು ಪೊಲೀಸ್‌ ಇಲಾಖೆಯ ಸೈಬರ್‌ ಸೆಲ್‌ ಅಧಿಕಾರಿಗಳ ಬಳಿ ಜ.10ರಂದು ದೂರು ದಾಖಲಿಸಿದ್ದಾರೆ. ಒಟ್ಟಾರೆಯಾಗಿ 11 ಮಂದಿ ತನ್ನಿಂದ 2.69 ಕೋಟಿ ರೂ. ಹಣ ದೋಚಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪರಾಧಿಗಳ ಹುಡುಕಾಟದಲ್ಲಿದ್ದಾರೆ.

Exit mobile version