ನವ ದೆಹಲಿ: ಬಿಲ್ಕಿಸ್ ಬಾನೊ ಗ್ಯಾಂಗ್ ರೇಪ್ ಪ್ರಕರಣ(Bilkis Bano Case)ದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಗಳ ಅವಧಿಪೂರ್ವ ಬಿಡುಗಡೆ ಸಂಬಂಧ ಗುಜರಾತ್ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್ ರೀತಿಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸರ್ಕಾರ ಸಲ್ಲಿಸಿರುವ ಅಫಿಡವಿಟ್ ದೊಡ್ಡದಾಗಿದೆ, ಸರಿಯಾದ ಹೇಳಿಕೆಗಳ ಕೊರತೆ ಇದೆ. ಅಲ್ಲದೇ, ಯಾವುದೇ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಿಯಾಗಿ ಪಾಲಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳನ್ನು ಅವಧಿ ಪೂರ್ವ ಬಿಡುಗಡೆ ಮಾಡಿರುವ ಕ್ರಮವನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ಗೆ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಸಂಬಂಧ ಗುಜರಾತ್ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. ಆದರೆ, ಸರಿಯಾದ ರೀತಿಯಲ್ಲಿ ಅಫಿಡವಿಟ್ ಸಲ್ಲಿಸದ್ದರಿಂದ ಸುಪ್ರೀಂ ಕೋರ್ಟ್ ಗರಂ ಆಗಿದೆ. 1929ರ ರಿಮಿಷನ್ ಪಾಲಿಸಿ ಅನ್ವಯ ಹಾಗೂ ಉತ್ತಮ ನಡತೆಯ ಹಿನ್ನೆಲೆಯಲ್ಲಿ ಬಾಲ್ಕಿಸ್ ಬಾನೊ ಗ್ಯಾಂಗ್ ರೇಪ್‌ನ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದಾಗಿ ಗುಜರಾತ್ ಸರ್ಕಾರ ಹೇಳಿಕೊಂಡಿದೆ.
ಗುಜರಾತ್ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಅಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಅಪರಾಧಿಗಳನ್ನು ಬಿಡುಗಡೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಅಪರಾಧಿಗಳ ಅವಧಿಪೂರ್ವ ಬಿಡುಗಡೆಗೆ ಕೇಂದ್ರ ಗೃಹ ಸಚಿವಾಲಯವು ಒಪ್ಪಿಗೆಯನ್ನು ನೀಡಿ 2022ರ ಜುಲೈ 12ರಂದು ಪತ್ರ ಬರೆದಿದೆ. ಅಪರಾಧಿಗಳನ್ನು ಆಗಸ್ಟ್ 15ರಂದು ಬಿಡುಗಡೆ ಮಾಡಲಾಗಿದೆ ಎಂದೂ ತಿಳಿಸಲಾಗಿದೆ.
ಏತನ್ಮಧ್ಯೆ, ಗುಜರಾತ್ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದ್ದು, ನವೆಂಬರ್ 29ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಅಫಿಡವಿಟ್‌ನಲ್ಲಿ ಅನೇಕ ತೀರ್ಪುಗಳನ್ನು ಉಲ್ಲೇಖಿಸಿರುವುದನ್ನು ಗಮನಿಸಿದ್ದೇನೆ. ಆದರೆ, ಸಂಬಂಧಿಸಿದ ತೀರ್ಪುಗಳನ್ನು ಉಲ್ಲಿಸಬೇಕಲ್ಲವೇ ಎಲ್ಲಿವೆ ಸಂಬಂಧಿಸಿದ ತೀರ್ಪುಗಳು? ಇದು ಅಪ್ಲಿಕೇಷನ್ ಸಲ್ಲಿಸುವ ರೀತಿಯಾ ಎಂದು ವಿಚಾರಣೆ ನಡೆಸುತ್ತಿರುವ ಜಸ್ಟೀಸ್ ಅಜಯ್ ರಸ್ತೋಗಿ ಅವರು ಗುಜರಾತ್ ಸರ್ಕಾರವನ್ನು ಟೀಕಿಸಿದ್ದಾರೆ.
ಕಾನೂನು ಪ್ರಕಾರವೇ ಬಿಡುಗಡೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಬಾಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳ ಬಿಡುಗಡೆ ಸಂಬಂಧ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ ಎಂದರೆ ಅದನ್ನು ಕಾನೂನುಬದ್ಧವಾಗಿಯೇ ಮಾಡಿರುತ್ತಾರೆ. ಕಾನೂನು ಪ್ರಕ್ರಿಯೆಯಲ್ಲಿ ನನಗೇನೂ ತಪ್ಪು ಕಾಣುತ್ತಿಲ್ಲ ಎಂದು ತಿಳಿಸಿದ್ದಾರೆ. ಅಪಾರಾಧಿಗಳು ಜೈಲಿನಲ್ಲಿ ಸಮಯ ಕಳೆದಿದ್ದಾರೆ. ಅವರ ಬಿಡುಗಡೆಗೂ ಅವಕಾಶವಿದೆ. ಕಾನೂನು ಪ್ರಕಾರವೇ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ | Bilkis Bano Case | 11 ಆರೋಪಿಗಳಿಗೆ ಕ್ಷಮಾದಾನ ಕೊಟ್ಟ ಗುಜರಾತ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್