ನವ ದೆಹಲಿ: ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಹಾಗೂ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿದವರೆಲ್ಲರೂ, ಈ ಬಾರಿ ಆಸ್ಕರ್ ವಿದೇಶಿ ಚಿತ್ರ ವಿಭಾಗಕ್ಕೆ ಈ ಸಿನಿಮಾಗಳನ್ನು ಕಳುಹಿಸಬೇಕು ಎನ್ನುತ್ತಿದ್ದರು. ಆದರೆ, ಎಲ್ಲರ ನಿರೀಕ್ಷೆ ಹುಸಿಯಾಗಿದ್ದು, ಗುಜರಾತ್ ಭಾಷೆಯ ‘ಛೆಲೋ ಶೋ’ (Chhello Show) ಚಿತ್ರ ಆಸ್ಕರ್ ಸ್ಪರ್ಧೆಗೆ ಅಧಿಕೃತ ಭಾರತೀಯ ಚಿತ್ರವಾಗಿ ಆಯ್ಕೆಯಾಗಿದೆ. ಈ ಬಗ್ಗೆ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಘೋಷಣೆ ಮಾಡಿದೆ.
ಪಾನ್ ನಳಿನ್ ಛೆಲೋ ಶೋ ಚಿತ್ರದ ನಿರ್ದೇಶಕರು. ಈ ಅನಿರೀಕ್ಷಿತ ಆಯ್ಕೆಯಿಂದ ಅವರು ಖುಷಿಗೊಂಡಿದ್ದಾರೆ. ಆರ್‌ಆರ್‌ಆರ್, ದಿ ಕಾಶ್ಮೀರ್ ಫೈಲ್ಸ್‌ನಂಥ ಚಿತ್ರಗಳನ್ನು ಹಿಂದಿಕ್ಕಿ ಛೆಲೋ ಶೋ ಸಿನಿಮಾ ಆಯ್ಕೆಯಾಗಿರುವುದರಿಂದ ಅವರ ಆನಂದಕ್ಕೆ ಪಾರವೇ ಇಲ್ಲ.
ಓ ಮೈ ಗಾಡ್, ಈ ರಾತ್ರಿ ಹೇಗೆ ಕಳೆಯುತ್ತದೆಯೋ? ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಮತ್ತು ಎಫ್ಎಫ್ಐ ಜ್ಯೂರಿ ಮೇಂಬರ್ಸ್‌ಗೆ ಕೃತಜ್ಞತೆಗಳು. ಛೆಲ್ಲೋ ಶೋ ಚಿತ್ರದ ಮೇಲೆ ವಿಶ್ವಾಸ ತೋರಿಸಿದ್ದಕ್ಕೆ ವಂದನೆಗಳು. ಈಗ ನಾನು ಮತ್ತೆ ನಿರಾಳವಾಗುತ್ತೇನೆ. ಮನರಂಜನೆ, ಸ್ಫೂರ್ತಿ ಮತ್ತು ಜ್ಞಾನೋದಯಕ್ಕೆ ಈ ಸಿನಿಮಾ ಪ್ರೇರಣೆಯಾಗುತ್ತದೆ ಎಂದು ನಾನು ನಂಬುತ್ತೇನೆ ಎಂದು ನಿರ್ದೇಶಕ ಪಾನ್ ನಳಿನ್ ಅವರು ಟ್ವೀಟ್ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಇದು ಗುಜರಾತಿ ಭಾಷೆಯಲ್ಲಿ ತಯಾರಾಗಿರುವ ಹೊಸ ತಲೆಮಾರಿನ ಸಿನಿಮಾ. ಜಗತ್ತಿನಾದ್ಯಂತ ಸಿನಿಮಾ ವಿಮರ್ಶಕರು ಮತ್ತು ಸಿನಿಮಾಸಾಕ್ತರ ಮನಸ್ಸನ್ನು ಗೆದ್ದಿದೆ. ಗುಜರಾತ್ ಸೇರಿದಂತೆ ದೇಶಾದ್ಯಂತ ಅಕ್ಟೋಬರ್ 14ರಿಂದ ಈ ಸಿನಿಮಾ ಬಿಡುಗಡೆಯಾಗಲಿದೆ.
ಏನಿದು ಛೆಲೋ ಶೋ ಸಿನಿಮಾ?
ಈ ಸಿನಿಮಾಕ್ಕೆ ನಿರ್ದೇಶಕ ಪಾನ್ ನಳಿನ್ ಅವರ ಬಾಲ್ಯದ ನೆನಪುಗಳೇ ಆಧಾರ. ಗ್ರಾಮೀಣ ಗುಜರಾತ್‌ನ ಬಾಲಕನೊಬ್ಬ ಸಿನಿಮಾ ಪ್ರೊಜೆಕ್ಟರ್ ಕುರಿತು ಆಸಕ್ತಿ ಬೆಳೆಸಿಕೊಳ್ಳುವ ಕತೆ ಇದು. ಡಿಜಿಟಲ್ ಕ್ರಾಂತಿಯ ನಡುವೆ, 9 ವರ್ಷದ ಬಾಲಕ ಬೆಳಕು ಮತ್ತು ನೆರಳು ವಿಜ್ಞಾನ ತತ್ವವನ್ನು ಹೊಂದಿರುವ ಪ್ರೊಜೆಕ್ಟರ್ ಕೆಲಸದ ಬಗ್ಗೆ ಅತ್ಯಾಸಕ್ತನಾಗಿ ಅದರಲ್ಲೇ ಮುಳುಗಿ ಹೋಗುವ ಕಥಾಹಂದರವಿದೆ. ಛೆಲೋ ಶೋ ಎಂದರೆ ಕೊನೆಯ ಪ್ರದರ್ಶನ ಎಂದರ್ಥ. ಪ್ರೊಜೆಕ್ಟರ್ ಬಳಕೆ ನಿಂತು ಹೋದ ಬಳಿಕ, ಬಾಲಕ ಹೇಗೆ ಅದೇ ರೀತಿಯ ಪ್ರೊಜೆಕ್ಟರ್ ನಿರ್ಮಿಸಲು ಮುಂದಾಗುತ್ತಾನೆಂಬುದೇ ಕತೆ. ಇದೊಂದು ಭಾವನಾತ್ಮಕ ಪಯಣವಾಗಿದೆ ಎಂಬುದು ವಿಮರ್ಶಕರ ಅಭಿಪ್ರಾಯವಾಗಿದೆ.
ಇದನ್ನೂ ಓದಿ | Oscar Committee | ಜೈ ಭೀಮ್ ನಟ ಈಗ ಆಸ್ಕರ್ ಸಮಿತಿಯ ಸದಸ್ಯ