ನವದೆಹಲಿ: ಚಲನಚಿತ್ರ ಸಾಹಿತಿ, ಉರ್ದು ಕವಿ ಗುಲ್ಜಾರ್ (Gulzar) ಹಾಗೂ ಖ್ಯಾತ ಸಂಸ್ಕೃತ ವಿದ್ವಾಂಸ, ಜಗದ್ಗುರು ರಾಮಭದ್ರಾಚಾರ್ಯ (Rambhadracharya) ಅವರಿಗೆ 2023ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ (Jnanpith Award) ಘೋಷಿಸಲಾಗಿದೆ. 58ನೇ ಜ್ಞಾನಪೀಠ ಪ್ರಶಸ್ತಿಯನ್ನು ಜಂಟಿಯಾಗಿ ಘೋಷಿಸಲಾಗಿದೆ ಎಂದು ಜ್ಞಾನಪೀಠ ಸಮಿತಿಯು ಮಾಹಿತಿ ನೀಡಿದೆ. ಜ್ಞಾನಪೀಠ ಪ್ರಶಸ್ತಿಯು ದೇಶದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ನೀಡುವ ಅತ್ಯುಚ್ಚ ಪ್ರಶಸ್ತಿಯಾಗಿದೆ.
ಹಿಂದಿ ಸಿನಿಮಾ ರಂಗದಲ್ಲಿ ಗುಲ್ಜಾರ್ ಅವರು ಖ್ಯಾತಿ ಗಳಿಸಿದ್ದು, ಅವರ ಸಿನಿಮಾ ಸಾಹಿತ್ಯವು ಎಲ್ಲರ ಮನಗೆದ್ದಿದೆ. ಅದರಲ್ಲೂ, ಗಜಲ್‌ಗಳ ಮೂಲಕ ಅವರು ಮನೆಮಾತಾಗಿದ್ದಾರೆ. ಇವರ ನಿಜವಾದ ಹೆಸರು ಸಿಂಗ್ ಕಾಲ್ರಾ ಆಗಿದ್ದು, ಅವಿಭಜಿತ ಭಾರತದ ಜೇಲಂ ಜಿಲ್ಲೆಯ ದೇನಾ ಗ್ರಾಮದಲ್ಲಿ 1934ರ ಆಗಸ್ಟ್ 18ರಂದು ಜನಿಸಿದರು. 12ನೇ ತರಗತಿಯಲ್ಲಿ ಅನುತ್ತೀರ್ಣರಾದರೂ ಇವರು ಸಾಹಿತ್ಯದ ಮೂಲಕ ದೇಶ-ವಿದೇಶದಲ್ಲೂ ಖ್ಯಾತಿ ಗಳಿಸಿದ್ದಾರೆ. “ಹಿಂದಿ ಹಾಗೂ ಸಂಸ್ಕೃತ ಭಾಷೆಯ ಇಬ್ಬರು ಮಹಾನ್ ಸಾಹಿತಿಗಳಿಗೆ 2023ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಘೋಷಿಸಲಾಗಿದೆ” ಎಂದು ಜ್ಞಾನಪೀಠ ಸಮಿತಿ ತಿಳಿಸಿದೆ.
Renowned Urdu poet Gulzar and Sanskrit scholar Jagadguru Rambhadracharya have been named the recipients of the 58th Jnanpith Award, the Jnanpith selection committee announced on Saturday.
— NBT Dilli (@NBTDilli) February 17, 2024
ಗುಲ್ಜಾರ್ ಅವರಿಗೆ 2002ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2004ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ, 2013ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಂದಿವೆ. ಇವರು ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ. 2022ರಲ್ಲಿ ಗೋವಾ ಸಾಹಿತಿ ದಾಮೋದರ್ ಮೌಜೋ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಲಾಗಿತ್ತು. ಈ ಬಾರಿ ಜಂಟಿಯಾಗಿ ಪ್ರಶಸ್ತಿ ಘೋಷಿಸಲಾಗಿದೆ.
ಇದನ್ನೂ ಓದಿ: Padma Awards 2024: ದಿವ್ಯಾಂಗರಾದರೂ ಸಮಾಜಕ್ಕೆ ಮಿಡಿದ ಗುರ್ವಿಂದರ್‌ಗೆ ಪದ್ಮಶ್ರೀ ಗರಿ!
ಮಧ್ಯಪ್ರದೇಶದ ಚಿತ್ರಕೂಟದಲ್ಲಿರುವ ತುಳಸಿ ಪೀಠದ ಸಂಸ್ಥಾಪಕರೂ ಆಗಿರುವ, ಸಂಸ್ಕೃತದಲ್ಲಿ ಪರಿಣತಿ ಸಾಧಿಸಿರುವ ಖ್ಯಾತಿ ಹಿಂದು ನಾಯಕ ರಾಮಭದ್ರಾಚಾರ್ಯ ಅವರೂ 58ನೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಿಕ್ಷಣ ತಜ್ಞರಾಗಿಯೂ ಗುರುತಿಸಿಕೊಂಡಿರುವ ಇವರು 100ಕ್ಕೂ ಅಧಿಕ ಕೃತಿಗಳ ಮೂಲಕ ಸಾಹಿತ್ಯ ಪ್ರೇಮಿಗಳ ಮನದಲ್ಲಿ ಜಾಗ ಪಡೆದಿದ್ದಾರೆ. ರಾಮಭದ್ರಾಚಾರ್ಯರು ದೃಷ್ಟಿಹೀನರಾಗಿದ್ದರೂ ಸಂಸ್ಕೃತ, ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ