Site icon Vistara News

ಜ್ಞಾನವಾಪಿ ಮಸೀದಿ ಸರ್ವೆ ಮಾಹಿತಿ ಲೀಕ್‌, ಕೋರ್ಟ್‌ ಕಮಿಷನರ್‌ ಮಿಶ್ರಾ ವಜಾ

ವಾರಾಣಸಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಕೋರ್ಟ್‌ ಸೂಚಿತ ವಿಡಿಯೊಗ್ರಾಫಿಕ್‌ ಸರ್ವೆಯ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದಲ್ಲಿ ಅಜಯ್‌ ಕುಮಾರ್‌ ಮಿಶ್ರಾ ಅವರನ್ನು ಕೋರ್ಟ್‌ ಕಮೀಷನರ್‌ ಜವಾಬ್ದಾರಿಯಿಂದ ಕಿತ್ತು ಹಾಕಲಾಗಿದೆ. ವಾರಾಣಸಿಯ ಸ್ಥಳೀಯ ಕೋರ್ಟ್‌ ಈ ತೀರ್ಮಾನವನ್ನು ಮಾಡಿದೆ.

ಅಜಯ್‌ ಕುಮಾರ್‌ ಮಿಶ್ರಾ ಅವರ ಬಗ್ಗೆ ಹಿಂದಿನಿಂದಲೇ ಮುಸ್ಲಿಂ ಸಂಘಟನೆಗಳಿಂದ ಆಕ್ಷೇಪಗಳಿದ್ದವು. ಕೋರ್ಟ್‌ ಕಮಿಷನರ್‌ ಅವರನ್ನು ಬದಲಾಯಿಸಿ ಎಂದು ಕೋರ್ಟ್‌ಗೆ ಮೊರೆ ಹೊಕ್ಕಿದ್ದವು. ಮಿಶ್ರಾ ಅವರು ಪಕ್ಷಪಾತಿಯಾಗಿದ್ದು, ಹಿಂದೂಗಳ ಪರವಾಗಿದ್ದಾರೆ ಎನ್ನುವುದು ಮುಸ್ಲಿಂ ಸಂಘಟನೆಗಳ ಆರೋಪವಾಗಿತ್ತು. ಆದರೆ, ಕೋರ್ಟ್‌ ಈ ಬೇಡಿಕೆಯನ್ನು ಮಾನ್ಯ ಮಾಡದೆ ಅವರನ್ನೇ ಆ ಹುದ್ದೆಯಲ್ಲಿ ಮುಂದುವರಿಸಿತ್ತು.

ಸರ್ವೆಯ ಮೂರನೇ ದಿನ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ವಿವರ ಬಯಲಾಗಿರುವುದರ ಹಿಂದೆ ಮಿಶ್ರಾ ಅವರ ಕೈವಾಡವಿದೆ ಎಂಬ ಆರೋಪವನ್ನು ಪರಿಗಣಿಸಿ ಕೋರ್ಟ್‌ ಅವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಿದೆ ಎನ್ನಲಾಗುತ್ತಿದೆ. ಅವರ ಬದಲಿದೆ ವಿಶೇಷ ಕಮಿಷನರ್‌ ಆಗಿದೆ ವಿಶಾಲ್‌ ಸಿಂಗ್‌ ಅವರನ್ನು ನೇಮಿಸಿದೆ.

ಕೋರ್ಟ್‌ಗೆ ಹಾಜರಾದ ವಿಶಾಲ್‌ ಸಿಂಗ್‌
ಅಜಯ್‌ ಕುಮಾರ್‌ ಮಿಶ್ರಾ ಅವರು ಕೋರ್ಟ್‌ ಕಮಿಷನರ್‌ ಆಗಿದ್ದರೂ ಮಂಗಳವಾರ ಕೋರ್ಟ್‌ಗೆ ಹಾಜರಾಗಿದ್ದು ವಿಶಾಲ್‌ ಸಿಂಗ್‌. ಅವರು ವರದಿ ಸಲ್ಲಿಸಲು ಎರಡು ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದರು. ಈಗ ವಿಡಿಯೊ ಚಿತ್ರೀಕರಣ ಆಗಿದೆ. ಅದರಲ್ಲಿರುವ ಅಂಶಗಳನ್ನು ಗಮನಿಸಿ ವರದಿ ತಯಾರಿಸಲು ಸ್ವಲ್ಪ ಕಾಲಾವಕಾಶ ಬೇಕು ಎಂದು ಕೋರ್ಟ್‌ಗೆ ವಿನಂತಿಸಲಾಯಿತು. ಇದನ್ನು ಪರಿಗಣಿಸಿ ಕೋರ್ಟ್‌ ಸಮಯಾವಕಾಶ ನೀಡಿದೆ.

ಯಾರು ಈ ಕೋರ್ಟ್‌ ಕಮಿಷನರ್?
ನ್ಯಾಯಾಲಯದ ಮುಂದೆ ಯಾವುದಾದರೂ ಒಂದು ವಿವಾದ ಬಂದಾಗ ನ್ಯಾಯಾಲಯ ತಾನೇ ತನಿಖೆಗೆ ಮುಂದಾಗಬೇಕಾದಾಗ ಕೋರ್ಟ್‌ ಕಮಿಷನರನ್ನು ನೇಮಿಸುತ್ತದೆ. ಈ ಕಮಿಷನರ್‌ ಒಬ್ಬ ಸಾಮಾನ್ಯ ವಕೀಲರೇ ಆಗಿರುತ್ತಾರೆ. ಆದರೆ, ಆ ನಿರ್ದಿಷ್ಟ ವಿಷಯದಲ್ಲಿ ಪರಿಣತಿಯನ್ನು, ತನಿಖೆಯ ಎಲ್ಲ ಆಯಾಮಗಳನ್ನು ತಿಳಿದವರಾಗಿರುತ್ತಾರೆ. ಅವರು ಒಬ್ಬ ತನಿಖಾಧಿಕಾರಿಯ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಆದರೆ, ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕಾಗಿರುತ್ತದೆ. ಆಡಳಿತ ವ್ಯವಸ್ಥೆಯ ಎಲ್ಲ ಅಧಿಕಾರಿಗಳು ಇವರು ಕೇಳಿದ ಸಹಕಾರವನ್ನು ನೀಡಬೇಕಾಗುತ್ತದೆ.

Explainer: ವಿವಾದದ ಕೇಂದ್ರದಲ್ಲಿ ಈಗ ಕಾಶಿ ಶೃಂಗಾರ ಗೌರಿ ದೇವಿ

ಮಹತ್ವದ ದಾಖಲೆ
ಕೋರ್ಟ್‌ ಕಮಿಷನರ್‌ ನೀಡುವ ವರದಿ ಜ್ಞಾನವಾಪಿ ಮಸೀದಿ ವಿವಾದದ ಭವಿಷ್ಯದಲ್ಲಿ ಮಹತ್ವದ ದಾಖಲೆಯಾಗಲಿದೆ. ಜ್ಞಾನವಾಪಿ ಮಸೀದಿ ಆವರಣದ ಗೋಡೆಯಲ್ಲಿರುವ ದೇವರ ಚಿತ್ರಗಳಿಗೆ ಪೂಜೆ ಮಾಡಲು ಅವಕಾಶ ಕೋರಿ ಐವರು ಮಹಿಳೆಯರು ಅರ್ಜಿ ಸಲ್ಲಿಸುವುದರೊಂದಿಗೆ ಆರಂಭವಾಗಿರುವ ಈ ಕೋರ್ಟ್‌ ಹೋರಾಟ ಈ ವಿವಾದಕ್ಕೆ ತಾತ್ವಿಕ ಅಂತ್ಯವನ್ನು ಒದಗಿಸುವ ಹಂತಕ್ಕೆ ಹೋಗಲಿದೆ ಎಂದು ಹೇಳಲಾಗುತ್ತಿದೆ.

ಆರಂಭಿಕ ಹಂತದಲ್ಲಿ ಕೋರ್ಟ್‌ ಕಮಿಷನರ್‌ ಮೂಲಕ ಸರ್ವೆ ಮಾಡುವ ಆದೇಶವನ್ನೇ ಜ್ಞಾನವಾಪಿ ಆಡಳಿತ ಮಂಡಳಿ ವಿರೋಧಿಸಿತ್ತು. ಆದರೆ, ಸ್ಥಳೀಯ ಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ ಈ ಆದೇಶವನ್ನು ಎತ್ತಿ ಹಿಡಿದಾಗ ಸರ್ವೆಗೆ ಒಪ್ಪಿಕೊಂಡು ಸಹಕರಿಸಿದೆ.

ಜ್ಞಾನವಾಪಿ ಮಸೀದಿ: ಶಿವಲಿಂಗ ಸಿಕ್ಕಿದ ಸ್ಥಳ ಸೀಲ್‌ ಮಾಡಿ ಎಂದ ಕೋರ್ಟ್‌

ಸಾಕಷ್ಟು ಸಾಕ್ಷ್ಯ ಲಭ್ಯ?
ಜ್ಞಾನವಾಪಿ ಮಸೀದಿ ಆವರಣದ ಪಶ್ಚಿಮ ಗೋಡೆ, ನೆಲಮಹಡಿಯಲ್ಲಿರುವ ಕೋಣೆಗಳ ಸರ್ವೆ ವೇಳೆ ಹಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ ಎಂದು ಹೇಳಲಾಗಿದೆ. ಹಲವಾರು ದೇವರ ಚಿತ್ರಗಳು ಗೋಡೆಯಲ್ಲಿದ್ದರೆ, ಇನ್ನು ಕೆಲವು ಸಂಕೇತಗಳನ್ನು ಗುರುತಿಸಲಾಗಿದೆ ಎನ್ನಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಗಮನ ಸೆಳೆದಿರುವುದು ಕೊಳದಲ್ಲಿ ಪತ್ತೆಯಾಗಿದೆ ಎನ್ನಲಾದ ಶಿವಲಿಂಗ. ದೇವಾಲಯ ಧ್ವಂಸದ ಸಂದರ್ಭದಲ್ಲಿ ಅರ್ಚಕರು ಶಿವಲಿಂಗವನ್ನು ಬಾವಿಗೆ ಹಾಕಿದ್ದರು ಎಂಬುದಾಗಿ ಹೇಳಲಾಗುತ್ತಿತ್ತು. ಅದಕ್ಕೂ ಈಗ ಪತ್ತೆಯಾಗಿರುವ ಶಿವಲಿಂಗಕ್ಕೂ ತಾಳೆ ಹಾಕಲಾಗುತ್ತಿದೆ. ಈ ಶಿವಲಿಂಗಕ್ಕೆ ಅಭಿಮುಖವಾಗಿರುವ ನಂದಿ ವಿಗ್ರಹ ಈಶ್ವರನಿಗಾಗಿ ಕಾಯುತ್ತಿದೆ ಎಂಬ ಪ್ರತೀತಿ ಇದೆ.

ಹೀಗಾಗಿ ಶಿವಲಿಂಗ ಪತ್ತೆ ಎನ್ನುವುದು ಹಿಂದೂಗಳ ನಂಬಿಕೆಗೆ ಸರಿಯಾಗಿಯೇ ಇದೆ ಎಂಬ ಚರ್ಚೆ ಇದೆ. ಆದರೂ ಕೋರ್ಟ್‌ ಕಮೀಷನರ್‌ ಕೋರ್ಟ್‌ಗೆ ನೀಡುವ ದಾಖಲೆ, ಕೊಡುವ ಚಿತ್ರಗಳು ಹೇಗಿರುತ್ತವೆ ಎನ್ನುವುದರ ಆಧಾರದ ಮೇಲೆ ಮುಂದಿನ ಸಂಗತಿಗಳು ನಿರ್ಧಾರವಾಗಲಿವೆ.

Exit mobile version