Site icon Vistara News

ಜ್ಞಾನವಾಪಿ ಮಸೀದಿ ಸರ್ವೆ ಪೂರ್ಣ, ಬಾವಿಯಲ್ಲಿ ಶಿವಲಿಂಗ ಸಿಕ್ಕಿದೆ ಎಂದ ವಕೀಲ

ಜ್ಞಾನವಾಪಿ ಮಸೀದಿ

ಸಮೀಕ್ಷೆ ನಡೆಯುತ್ತಿರುವ ಜ್ಞಾನವಾಪಿ ಮಸೀದಿ ಆವರಣದ ಮೇಲು ನೋಟ.

ನವದೆಹಲಿ: ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಆರಂಭಗೊಂಡಿರುವ ಮಹತ್ವದ ಸರ್ವೆ ಸೋಮವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮಧ್ಯಾಹ್ನ ಗಂಟೆ ಹೊತ್ತಿಗೆ ಬಹುತೇಕ ಪೂರ್ಣಗೊಂಡಿದೆ. ಸ್ಥಳೀಯ ನ್ಯಾಯಾಲಯದ ಸೂಚನೆಯಂತೆ ಕೋರ್ಟ್‌ ಕಮೀಷನರ್‌ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಮೀಕ್ಷೆಯಲ್ಲಿ ಏನೇನು ಅಂಶಗಳು ಬಯಲಾಗಿವೆ ಎನ್ನುವ ಕುತೂಹಲವೂ ಹೆಚ್ಚುತ್ತಿದೆ.

ವಿಡಿಯೊ ಚಿತ್ರೀಕರಣ ಆಧರಿಸಿದ ಸರ್ವೆ ಕಾರ್ಯ ಬೆಳಗ್ಗೆ ಎಂಟರಿಂದ ಆರಂಭಗೊಂಡು ಮಧ್ಯಾಹ್ನ 12 ಗಂಟೆವರೆಗೆ ನಡೆಯುತ್ತದೆ. ಎರಡೇ ದಿನದಲ್ಲಿ ಎಲ್ಲ ಭಾಗಗಳ ಚಿತ್ರೀಕರಣ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ವಿಪರೀತ ಬಿಸಿಲಿನ ಕಾರಣದಿಂದ ತಂಡ ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕಾಗಿ ಬಂದಿದ್ದರಿಂದ ವಿಳಂಬವಾಗಿ ಮೂರನೇ ದಿನಕ್ಕೂ ವಿಸ್ತರಿಸಿದೆ. ಜ್ಞಾನವಾಪಿ ಮಸೀದಿ ಮತ್ತು ಕಾಶಿ ವಿಶ್ವನಾಥ ದೇವಾಲಯದ ಕಡೆಗೆ ಹೋಗುವ ಗೋಡಾವ್ಲಿಯಾ ಮತ್ತು ಮೈದಾಗಿನ್‌ ನಡುವಿನ ರಸ್ತೆಯನ್ನು ಸಂಪೂರ್ಣ ಬಂದ್‌ ಮಾಡಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಕಾಶಿ ವಿಶ್ವನಾಥ ದೇವಾಲಯಕ್ಕೆ ಸರದಿಯಲ್ಲಿ ಹೋಗಿ ಬರಲು ಅನುಕೂಲವಾಗುವಂತೆ ಒಂದು ವ್ಯವಸ್ಥೆ ಮಾಡಲಾಗಿದೆ.

Explainer: ವಿವಾದದ ಕೇಂದ್ರದಲ್ಲಿ ಈಗ ಕಾಶಿ ಶೃಂಗಾರ ಗೌರಿ ದೇವಿ

ಮೊದಲ ದಿನ ಏನಾಯಿತು?
ಕೋರ್ಟ್‌ ಕಮಿಷನರ್‌ ಅಜಯ್‌ ಕುಮಾರ್‌ ಮಿಶ್ರಾ ನೇತೃತ್ವದ 54 ಮಂದಿಯ ತಂಡ ಸರ್ವೆಯ ಮೊದಲನೇ ದಿನವಾದ ಶನಿವಾರ ಜ್ಞಾನವಾಪಿ ಮಸೀದಿ ಸಂಕೀರ್ಣದ ನೆಲ ಮಾಳಿಗೆ ಮತ್ತು ಪಶ್ಚಿಮ ಗೋಡೆಯ ಚಿತ್ರೀಕರಣವನ್ನು ಪೂರ್ಣಗೊಳಿಸಿತು. ಸುಮಾರು ‌1500 ಭದ್ರತಾ ಸಿಬ್ಬಂದಿ ಸರ್ವೆ ಕಾರ್ಯಕ್ಕೆ ಭದ್ರತೆಯನ್ನು ಒದಗಿಸಿದ್ದು, ಯಾವ ಕಡೆಯಿಂದಲೂ ವಿರೋಧ ವ್ಯಕ್ತವಾಗದೆ ಸಾಂಗವಾಗಿ ನೆರವೇರಿದೆ. ಸರ್ವೆ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದ ಅಂಜುಮಾನ್‌ ಇನ್ತೇಜಾಮಿಯಾ ಮಸ್ಜಿದ್‌ (ಎಐಎಂ) ಸದಸ್ಯರು ಕೂಡಾ ಇದಕ್ಕೆ ಸಹಕಾರ ನೀಡುತ್ತಿದ್ದಾರೆ.

ನೆಲ ಮಾಳಿಗೆಯ ಎರಡು ಕೋಣೆಗಳ ಬಾಗಿಲುಗಳನ್ನು ಕೀಲಿ ಬಳಸಿ ತೆರೆಯಲಾಯಿತು. ಮೂರನೇ ಬಾಗಿಲಿನ ಬೀಗ ಕೀ ಹಾಕಿದರೂ ತೆರೆದುಕೊಳ್ಳಲಿಲ್ಲ. ಹೀಗಾಗಿ ಅದನ್ನು ಒಡೆದೇ ತೆಗೆಯಲಾಯಿತು. ನಾಲ್ಕನೇ ಕೋಣೆ ವ್ಯಾಸ ಕುಟುಂಬದ ಸುಪರ್ದಿಯಲ್ಲಿದ್ದು, ಅದು ತೆರೆದೇ ಇತ್ತು,

ಎರಡನೇ ದಿನದ ಸರ್ವೆ ಸಂದರ್ಭದಲ್ಲಿ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ವಕೀಲರಾದ ವಿಷ್ಣು ಜೈನ್‌ ಅವರು ಹೇಳಿದ್ದು, ಅದರ ರಕ್ಷಣೆಗಾಗಿ ಸ್ಥಳೀಯ ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ಹೇಳಿದ್ದಾರೆ. ವಕೀಲರಾದ ವಿಷ್ಣು ಜೈನ್‌ ಮತ್ತು ಹರಿಶಂಕರ್‌ ಜೈನ್‌ ಅವರ ಪ್ರಕಾರ, ಭಾನುವಾರ ದೇವಾಲಯ ಎಂದೇ ಪರಿಗಣಿತವಾದ ಭಾಗದಲ್ಲಿ ಸಮೀಕ್ಷೆ ನಡೆದಿದೆ. ಜ್ಞಾನವಾಪಿ ಮಸೀದಿ ಪಶ್ಚಿಮ ಗೋಡೆಯಲ್ಲಿ ಹಿಂದೂ ದೇವರ ಚಿತ್ರಗಳಿವೆ. ಇದೆಲ್ಲವನ್ನೂ ವಿಡಿಯೊ ಚಿತ್ರೀಕರಣದ ವೇಳೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮಂಗಳವಾರ ವರದಿ ಸಲ್ಲಿಕೆ
ದೇಶಾದ್ಯಂತ ಭಾರಿ ಕುತೂಹಲ ಕೆರಳಿಸಿರುವ ಈ ವಿಡಿಯೊ ಚಿತ್ರೀಕರಣದ ವರದಿಯನ್ನು ಅಜಯ್ ಕುಮಾರ್‌ ಮಿಶ್ರಾ ನೇತೃತ್ವದ ತಂಡ ಮಂಗಳವಾರ ಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆಗಳಿವೆ.

ಜ್ಞಾನವಾಪಿ ಮಸೀದಿಯು ಹಿಂದೂ ದೇವಾಲಯವನ್ನು ಒಡೆದು ಕಟ್ಟಿದ ಒಂದು ಸಂಕೀರ್ಣ ಎನ್ನುವುದು ಭಾರಿ ಸಮಯದಿಂದ ಚರ್ಚೆಯಲ್ಲಿದೆ. ಅಯೋಧ್ಯೆಯ ವಿವಾದಾತ್ಮಕ ಕಟ್ಟಡ ಧ್ವಂಸದ ಬಳಿಕ ಮುಂದಿನದು ಕಾಶಿ ವಿಶ್ವನಾಥ ದೇವಳ ಮುಕ್ತಿ ಎಂಬ ಸುದ್ದಿ ಹರಡಿತ್ತು. ಆಗಲೇ ಕೆಲವರು ಕೋರ್ಟ್‌ ಮೆಟ್ಟಿಲು ಹತ್ತಿದರೂ ನ್ಯಾಯಾಲಯಗಳು ಅದಕ್ಕೆ ಅವಕಾಶ ಕೊಡಲಿಲ್ಲ.

ಈ ನಡುವೆ, 2021ರ ಏಪ್ರಿಲ್‌ 18ರಂದು ದಿಲ್ಲಿ ಮೂಲದ ರಾಖಿ ಸಿಂಗ್‌, ಲಕ್ಷ್ಮಿ ದೇವಿ ಸೀತಾ ಸಾಹು ಸೇರಿದಂತೆ ಐವರು ಮಹಿಳೆಯರು ಸಂಕೀರ್ಣದ ಹೊರಾವರಣದಲ್ಲಿ ಗೋಡೆಗಳಲ್ಲಿರುವ ದೇವರಿಗೆ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ಕೋರ್ಟ್‌ ಮೆಟ್ಟಿಲು ಹತ್ತಿದರು. ಜತೆಗೆ ಯಾರೂ ಅವುಗಳನ್ನು ಹಾಳು ಮಾಡದಂತೆ ರಕ್ಷಣೆ ನೀಡಬೇಕು ಎಂದು ಕೋರಿದರು. ಈ ಬೇಡಿಕೆಗೆ ವಿರೋಧ ವ್ಯಕ್ತವಾಗುತ್ತಿರುವಂತೆಯೇ ಕೋರ್ಟ್‌ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ವಿಡಿಯೊಗ್ರಫಿ ಸರ್ವೆಗೆ ಆದೇಶ ನೀಡಿತು. ಇದನ್ನು ವಿರೋಧಿಸಿ ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿದರೂ ಫಲ ಸಿಗಲಿಲ್ಲ. ಇದೀಗ ವಿಡಿಯೊಗ್ರಫಿ ಅಂತ್ಯಗೊಂಡಿದ್ದು, ಮುಂದೆ ನ್ಯಾಯಾಲಯ ಯಾವ ಹೆಜ್ಜೆ ಇಡುತ್ತದೆ ಎನ್ನುವುದು ಕುತೂಹಲದ ಸಂಗತಿಯಾಗಿದೆ.

ಇದನ್ನೂ ಓದಿ |1992ರಲ್ಲಿ ಅಯೋಧ್ಯೆಯಲ್ಲಿ ಆಗಿದ್ದು 2022ರಲ್ಲಿ ವಾರಾಣಸಿಯಲ್ಲಿ ಆಗಲಿದೆ!

Exit mobile version