Site icon Vistara News

ಜ್ಞಾನವಾಪಿ ಮಸೀದಿ: ಶಿವಲಿಂಗ ಸಿಕ್ಕಿದ ಸ್ಥಳ ಸೀಲ್‌ ಮಾಡಿ ಎಂದ ಕೋರ್ಟ್‌

ಜ್ಞಾನವಾಪಿ ಮಸೀದಿ

ಜ್ಞಾನವಾಪಿ ಮಸೀದಿ ಆವರಣದಲ್ಲಿ ಬಿಗಿ ಭದ್ರತೆ

ವಾರಾಣಸಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ನಡೆದ ವಿಡಿಯೊ ಚಿತ್ರೀಕರಣದ ಸಂದರ್ಭದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾದ ಸ್ಥಳವನ್ನು ಸೀಲ್‌ ಮಾಡುವಂತೆ ಸ್ಥಳೀಯ ನ್ಯಾಯಾಲಯ ಆದೇಶಿಸಿದೆ. ಕೋರ್ಟ್‌ ಸೂಚನೆಯ ಬೆನ್ನಿಗೇ ದೊಡ್ಡ ಪ್ರಮಾಣದಲ್ಲಿ ಪೊಲೀಸ್‌ ಪಡೆಯನ್ನು ಸಜ್ಜುಗೊಳಿಸಲಾಗಿದೆ. ಕಳೆದ ಮೂರು ದಿನಗಳಿಂದ ಕೋರ್ಟ್‌ ಕಮಿಷನರ್‌ ನೇತೃತ್ವದಲ್ಲಿ ವಿಡಿಯೊ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಬಾವಿಯೊಂದರಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಪರ ಅರ್ಜಿದಾರರ ವಕೀಲರು ಹೇಳಿದ್ದಾರೆ. ಮತ್ತು ಅದನ್ನು ರಕ್ಷಿಸಲು ಸೂಚನೆ ನೀಡುವಂತೆ ಕೋರಿ ಕೋರ್ಟ್‌ಗೆ ಹೋಗಿದ್ದರು. ಅದರ ಫಲವಾಗಿ ಶಿವಲಿಂಗ ಪತ್ತೆಯಾದ ಸ್ಥಳವನ್ನು ಪ್ರವೇಶಿಸಲು ಯಾರಿಗೂ ಅವಕಾಶ ನೀಡದಂತೆ ಕೋರ್ಟ್‌ ಸೂಚಿಸಿದೆ. ಈ ನಡುವೆ, ಆವರಣದ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಮಾಹಿತಿಯನ್ನು ತಾವೇನೂ ಬಹಿರಂಗಪಡಿಸಿಲ್ಲ ಎಂದು ಕೋರ್ಟ್‌ ಕಮಿಷನರ್‌ ಅಜಯ್‌ ಕುಮಾರ್‌ ಮಿಶ್ರಾ ಹೇಳಿದ್ದಾರೆ. ಮೂರು ದಿನಗಳ ಕಾಲ ನಡೆದ ಸರ್ವೆಯ ವರದಿಯನ್ನು ಅವರು ಮಂಗಳವಾರ ಕೋರ್ಟ್‌ಗೆ ಸಲ್ಲಿಸಬೇಕಾಗಿದೆ. ಇದರ ನಡುವೆಯೇ ಶಿವಲಿಂಗ ಪತ್ತೆಯಾಗಿದೆ ಎಂಬ ಮಾಹಿತಿ ಬಯಲಾಗಿದೆ.

ಮೂರು ಅಡಿ ಎತ್ತರದ ಕಲ್ಲು
ಜ್ಞಾನವಾಪಿ ಮಸೀದಿಯಲ್ಲಿರುವ ಪ್ರಾರ್ಥನೆಗೆ ಮೊದಲು ಕೈಕಾಲು ಮುಖ ಶುಚಿಗೊಳಿಸುವ ಸ್ಥಳದಲ್ಲಿ ಸುಮಾರು ಮೂರು ಅಡಿ ಎತ್ತರದ ಕಲ್ಲೊಂದು ಪತ್ತೆಯಾಗಿದೆ. ಇದನ್ನು ಶಿವಲಿಂಗ ಎಂದು ಹಿಂದೂ ಮುಖಂಡರು ಹೇಳಿಕೊಂಡಿದ್ದಾರೆ. “ಇದನ್ನು ಕಾರಂಜಿ ಕಲ್ಲು ಎಂದು ಕರೆಯಲಾಗುತ್ತಿತ್ತು. ಆದರೆ, ಸ್ವಚ್ಛಗೊಳಿಸಿದಾಗ ಅದು ಶಿವಲಿಂಗ ಎಂದು ತಿಳಿದುಬಂತು. ಇದನ್ನು ಯಾರೂ ತಿರುಚಬಾರದು ಎಂಬ ಕಾರಣಕ್ಕಾಗಿ ರಕ್ಷಣೆ ಕೋರಿ ಕೋರ್ಟ್‌ಗೆ ಮನವಿ ಸಲ್ಲಿಸಿದೆವು. ಅದರಂತೆ ಕೋರ್ಟ್‌ ಆ ಪ್ರದೇಶವನ್ನು ಸೀಲ್‌ ಮಾಡುವಂತೆ ಸೂಚಿಸಿದೆ’ ಎಂದು ವಕೀಲರಾದ ದೀಪಕ್‌ ಸಿಂಗ್‌ ಹೇಳಿದ್ದಾರೆ.

ಜ್ಞಾನವಾಪಿ ಮಸೀದಿ ಸರ್ವೆ ಪೂರ್ಣ, ಬಾವಿಯಲ್ಲಿ ಶಿವಲಿಂಗ ಸಿಕ್ಕಿದೆ ಎಂದ ವಕೀಲ

ಖುಷಿ ವಿಚಾರ ಎಂದ ಮೌರ್ಯ
ಜ್ಞಾನವಾಪಿ ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಇದೊಂದು ದೊಡ್ಡ ವಿಜಯ ಎಂದು ಸಂಭ್ರಮಿಸಿದ ಘಟನೆಗಳೂ ನಡೆದಿವೆ. “ಇದು ನನಗೆ ಮತ್ತು ದೇಶದ ಎಲ್ಲ ಶಿವ ಭಕ್ತರಿಗೆ ಖುಷಿ ಕೊಡುವ ಸಂಗತಿ. ನಾವು ಇದನ್ನು ಸ್ವಾಗತಿಸುತ್ತೇವೆ ಮತ್ತು ರಕ್ಷಣೆಯ ನಿಟ್ಟಿನಲ್ಲಿ ಕೋರ್ಟ್‌ ಆದೇಶವನ್ನು ಪಾಲಿಸುತ್ತೇವೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಹೇಳಿದ್ದಾರೆ.

ಜಿಲ್ಲಾಡಳಿತ ಸರ್ವ ಸಿದ್ಧತೆ
ಪ್ರದೇಶವನ್ನು ಸೀಲ್‌ ಮಾಡುವಂತೆ ಕೋರ್ಟ್‌ನಿಂದ ಯಾವುದೇ ಸೂಚನೆ ಬಂದಿಲ್ಲ. ಆದರೆ, ಅನಧಿಕೃತ ಮಾಹಿತಿಗಳನ್ನು ಆಧರಿಸಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎದು ಜಿಲ್ಲಾಡಳಿತ ಹೇಳಿದೆ. ಈ ಜಾಗ ಮಸೀದಿಯಲ್ಲಿ ಪ್ರಾರ್ಥನೆಗೆ ಬರುವವರು ಕೈಕಾಲು, ಮುಖ ತೊಳೆಯುವ ಜಾಗವಾಗಿದ್ದು, ಮುಂದಿನ ದಿನಗಳಲ್ಲಿ ಪ್ರಾರ್ಥನೆಗೆ ಬರುವವರಿಗೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದೆ.

ವಾರಾಣಸಿಯ ವಿಶ್ವನಾಥ ಮಂದಿರಕ್ಕೆ ಹೋಗುವವರಿಗೆ ಮಾತ್ರ ಈಗ ರಸ್ತೆಯ ಒಂದು ಬದಿ ಅವಕಾಶವಿದೆ

ಸಿಆರ್‌ಪಿಎಫ್‌ ಪೊಲೀಸರ ನಿಯೋಜನೆ
ಪ್ರದೇಶವನ್ನು ಸೀಲ್‌ ಮಾಡುವಂತೆ ಕೋರ್ಟ್‌ ಉತ್ತರ ಪ್ರದೇಶ ಪೊಲೀಸ್‌ ಮುಖ್ಯಸ್ಥರು, ಡಿಜಿಪಿಗೆ ಆದೇಶ ನೀಡಿದೆ. ಇವರ ಸೂಚನೆಯಂತೆ ಜಿಲ್ಲಾಡಳಿತಮ ಪೊಲೀಸರು ಮತ್ತು ಸಿಆರ್‌ಪಿಎಫ್‌ ಕಮಾಂಡೆಂಟ್‌ ಕೆಲಸ ಮಾಡಬೇಕು ಎಂದು ಸೂಚಿಸಲಾಗಿದೆ. ಈ ನಡುವೆ, ಸಿಆರ್‌ಪಿಎಫ್‌ ಆಗಲೇ ಕಾರ್ಯಾಚರಣೆಗೆ ಇಳಿದಿದ್ದು, ಪ್ರದೇಶಕ್ಕೆ ಧಾವಿಸಿದೆ.

ಮುಂದೇನು?
ಜ್ಞಾನವಾಪಿ ಮಸೀದಿ ಆವರಣದಲ್ಲಿ ವಿಡಿಯೊಗ್ರಫಿಕ್‌ ಸರ್ವೆ ನಡೆಸಲು ನಿಯೋಜಿಸಲಾಗಿರುವ ಕೋರ್ಟ್‌ ಕಮಿಷನರ್‌ ಮಂಗಳವಾರ ತಮ್ಮ ವರದಿಯನ್ನು ಸಲ್ಲಿಸಬೇಕಾಗಿವೆ. ವಿಡಿಯೊ ಚಿತ್ರಣದೊಂದಿಗೆ ತಾವು ಕಂಡ ವಿಚಾರಗಳನ್ನು ದಾಖಲಿಸಿ ಕೊಡಬೇಕಾಗಿದೆ. ನಂತರ ಕೋರ್ಟ್‌ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Explainer: ವಿವಾದದ ಕೇಂದ್ರದಲ್ಲಿ ಈಗ ಕಾಶಿ ಶೃಂಗಾರ ಗೌರಿ ದೇವಿ

Exit mobile version