ವಾರಾಣಸಿ: ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲೇ ಇರುವ ಜ್ಞಾನವಾಪಿ ಮಸೀದಿ ಆವರಣದಲ್ಲಿ ವಿಡಿಯೊಗ್ರಫಿ ಸರ್ವೆ ಶನಿವಾರ ಬೆಳಗ್ಗೆ ಬಿಗಿ ಭದ್ರತೆಯ ನಡುವೆ ಆರಂಭಗೊಂಡಿದೆ. ಸ್ಥಳೀಯ ಕೋರ್ಟ್ ಆದೇಶದಂತೆ ಸುಮಾರು 52 ಮಂದಿ ಇರುವ ತಂಡ ಜ್ಞಾನವಾಪಿ ಮಸೀದಿ ಪ್ರವೇಶ ಮಾಡಿದೆ. ಮಸೀದಿಯ ಆಡಳಿತ ಮಂಡಳಿಯು ತಂಡಕ್ಕೆ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಹೇಳಿದೆ. ನೆಲ ಮಾಳಿಗೆಯಲ್ಲಿರುವ ಮೂರೂ ಕೋಣೆಗಳಲ್ಲಿ ಸಮೀಕ್ಷೆ ನಡೆಸಲಾಗುವುದು ಎಂದು ತಿಳಿದುಬಂದಿದೆ.
ಕೋರ್ಟ್ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ಅವರ ನೇತೃತ್ವದ ಸರ್ವೆ ಟೀಮ್, ಎರಡೂ ಕಡೆಯ ದಾವೆದಾರರು, ಪ್ರತಿವಾದಿಗಳು, ಜಿಲ್ಲಾಡಳಿತಕ್ಕೆ ಸಂಬಂಧಿಸಿದ ಅಧಿಕಾರಿಗಳು ಸೇರಿದಂತೆ 52 ಮಂದಿಯ ತಂಡ ಜ್ಞಾನವಾಪಿ ಮಸೀದಿ ಪ್ರವೇಶಿಸಿದೆ. ಆರಂಭದ ಹಂತದಲ್ಲಿ ಅದು ಮಸೀದಿಯ ಪಶ್ಚಿಮ ಭಾಗದ ಗೋಡೆ ಪ್ರದೇಶದಲ್ಲಿ ವಿಡಿಯೊಗ್ರಫಿ ನಡೆಸುತ್ತಿದೆ.
ವಿಡಿಯೊಗ್ರಫಿ ಸರ್ವೆ ಹಿನ್ನೆಲೆಯಲ್ಲಿ ಕಾಶಿ ವಿಶ್ವನಾಥ ದೇವಾಲಯ ಮತ್ತು ಜ್ಞಾನವಾಪಿ ಮಸೀದಿ ಆವರಣದ ಕಡೆಗೆ ಹೋಗುವ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಬಿಗಿ ಭದ್ರತೆ ಸಜ್ಜುಗೊಳಿಸಲಾಗಿದೆ.
ಮಹತ್ವದ ಸಭೆ
ವಿಡಿಯೊಗ್ರಾಫಿ ಸರ್ವೆಗೆ ಸ್ಥಳೀಯ ಕೋರ್ಟ್ ನೀಡಿದ ಹಸಿರು ನಿಶಾನೆಯನ್ನು ಪ್ರಶ್ನಿಸಿ ಮುಸ್ಲಿಮರ ಒಂದು ಗುಂಪು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿತ್ತು. ಆದರೆ, ಸರ್ವೋಚ್ಚ ನ್ಯಾಯಾಲಯ ಅದಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು. ಮತ್ತು ಶನಿವಾರದಿಂದಲೇ ಸರ್ವೆ ನಡೆಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ಕಮಿಷನರ್ ಆಗಿರುವ ಅಜಯ್ ಕುಮಾರ್ ಮಿಶ್ರಾ ಅವರು ಶುಕ್ರವಾರ ಸಂಜೆ ಸಂಬಂಧಿತ ಎಲ್ಲರ ಸಭೆಯೊಂದನ್ನು ಕರೆದು ಚರ್ಚೆ ನಡೆಸಿದ್ದರು. ಕಾರ್ಯಾಚರಣೆಗೆ ಸಹಕಾರ ನೀಡುವಂತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಮಸೀದಿಯ ನೆಲಮಹಡಿಯ ಸೆಲ್ಲರ್‌ಗಳ ಬೀಗದ ಕೀಯನ್ನು ಹಸ್ತಾಂತರಿಸುವಂತೆ ಜಿಲ್ಲಾಡಳಿತ ಮಸೀದಿಯ ಆಡಳಿತ ಮಂಡಳಿಗೆ ಸೂಚಿಸಿತ್ತು. ಒಂದೊಮ್ಮೆ ಕೀಗಳು ಸಿಗದೆ ಹೋದರೆ ಬೀಗವನ್ನು ಒಡೆದು ಸರ್ವೆ ನಡೆಸಬಹುದು ಎಂದು ಜಿಲ್ಲಾಡಳಿತ ಅನುಮತಿ ನೀಡಿತ್ತು.
ಇದನ್ನೂ ಓದಿ | ಜ್ಞಾನವಾಪಿ ಮಸೀದಿ ವಿವಾದ: ಸಮೀಕ್ಷೆ ವರದಿ ಸಲ್ಲಿಸಲು ಮೇ 17ರ ಗಡುವು, ಕಮಿಷನರ್ ಬದಲಾವಣೆ ಇಲ್ಲ
ಮಹಿಳೆಯಿಂದ ಹೋರಾಟ ಶುರು
ಜ್ಞಾನವಾಪಿ ಮಸೀದಿ ದೇವಾಲಯವನ್ನು ಒಡೆದ ಕಟ್ಟಿದ ಕಟ್ಟಡ ಎಂಬ ವಾದ ಬಹುಕಾಲದಿಂದಲೇ ಇದೆ. 1992ರಲ್ಲಿ ಅಯೋಧ್ಯೆಯ ವಿವಾದಾತ್ಮಕ ಕಟ್ಟಡ ಧ್ವಂಸದ ಬಳಿಕ ಕೆಲವರು ವಾರಾಣಸಿ ವಿಷಯಕ್ಕೂ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಆದರೆ, ಕೋರ್ಟ್ ಯಾವುದೇ ಅರ್ಜಿಯನ್ನು ಪುರಸ್ಕರಿಸಲಿಲ್ಲ. ವರ್ಷದ ಹಿಂದೆ ಮಸೀದಿ ಭಾಗದಲ್ಲಿ ಉತ್ಖನನಕ್ಕೆ ಬೇಡಿಕೆ ಸಲ್ಲಿಸಲಾಯಿತಾದರೂ ಆಗಲೂ ಅವಕಾಶ ದೊರೆಯಲಿಲ್ಲ.
ಈ ನಡುವೆ, ಐವರು ಮಹಿಳೆಯರ ತಂಡವೊಂದು ಜ್ಞಾನವಾಪಿ ಮಸೀದಿಯ ಗೋಡೆಗಳಲ್ಲಿ ಹಿಂದೂ ದೇವರ ಚಿತ್ರಗಳಿವೆ. ಅವುಗಳ ಮುಂದೆ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ಕೋರ್ಟ್‌ಗೆ ಮನವಿ ಸಲ್ಲಿಸಿತು. ಇದು ಹೊಸದೊಂದು ತಿರುವಿಗೆ ಕಾರಣವಾಯಿತು. ಸ್ಥಳೀಯ ನ್ಯಾಯಾಲಯವು ಕಳೆದ ಏಪ್ರಿಲ್‌ನಲ್ಲಿ ಜ್ಞಾನವಾಪಿ ಮಸೀದಿಯ ಆವರಣದ ವಿಡಿಯೊಗ್ರಫಿ ನಡೆಸುವಂತೆ ಸೂಚಿಸಿ ಒಬ್ಬ ಕೋರ್ಟ್ ಕಮಿಷನರ್ ಅವರನ್ನು ನೇಮಿಸಿತು. ಈ ನಡುವೆ, ದೇವಾಲಯದ ಆಡಳಿತ ಮಂಡಳಿ ಅದನ್ನು ಆಕ್ಷೇಪಿಸಿತು. ಕೋರ್ಟ್ ಕಮಿಷನರ್ ಆಗಿರುವ ಅಜಯ್ ಕುಮಾರ್ ಮಿಶ್ರಾ ಹಿಂದೂಗಳ ಪರವಾಗಿದ್ದಾರೆ ಎಂದು ಆಪಾದಿಸಿ, ಬದಲಿಸಲು ಮನವಿ ಮಾಡಿತು. ಆದರೆ, ಕೋರ್ಟ್ ಇದಕ್ಕೆ ಒಪ್ಪದೆ ಮೇ 13ರಿಂದಲೇ ಸರ್ವೆ ಆರಂಭಿಸಿ ಮೇ 17ರಂದು ವರದಿ ಸಲ್ಲಿಸುವಂತೆ ಸೂಚಿಸಿತು. ಇದರ ವಿರುದ್ಧ ಸುಪ್ರೀಂಕೋರ್ಟ್‌ಗೆ ದಾವೆ ಸಲ್ಲಿಸಿದರೂ ಅದು ಸರ್ವೆಗೆ ತಡೆ ನೀಡಲು ನಿರಾಕರಿಸಿತು.
ಇದನ್ನೂ ಓದಿ | ಜ್ಞಾನವಾಪಿ ಮಸೀದಿ ಸರ್ವೆ ತಡೆಗೆ ಸುಪ್ರೀಂಕೋರ್ಟ್ ನಕಾರ, ನಾಳೆಯಿಂದ ಚಿತ್ರೀಕರಣ