Site icon Vistara News

Gyanvapi Case: ಜ್ಞಾನವಾಪಿ ಮಸೀದಿ ಸಮೀಕ್ಷಾ ವರದಿ ಸಲ್ಲಿಕೆಗೆ ಹೆಚ್ಚಿನ ಅವಧಿ ಕೇಳಿದ ಎಎಸ್‌ಐ!

Gyanvapi Mosque

Gyanvapi Case: ASI seeks 15 day extension to submit scientific Survey report

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯಕ್ಕೆ ಹೊಂದಿಕೊಂಡಂತಿರುವ ಜ್ಞಾನವಾಪಿ ಮಸೀದಿಯ (Gyanvapi Case) ವೈಜ್ಞಾನಿಕ ಸಮೀಕ್ಷೆಯ ವರದಿ ಸಲ್ಲಿಸಲು ಇನ್ನೂ 15 ದಿನಗಳ ಕಾಲಾವಕಾಶ ಬೇಕು ಎಂದು ವಾರಾಣಸಿ ನ್ಯಾಯಾಲಯಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಮನವಿ ಮಾಡಿದೆ. ಕೋರ್ಟ್‌ ಆದೇಶದ ಮೇರೆಗೆ ಮಸೀದಿಯಲ್ಲಿ ಆಗಸ್ಟ್‌ 5ರಿಂದ ವೈಜ್ಞಾನಿಕ ಸಮೀಕ್ಷೆ ಆರಂಭಿಸಲಾಗಿದ್ದು, ಸಮೀಕ್ಷೆ ಮುಗಿದಿದೆ. ಆದರೆ, ವರದಿ ಸಲ್ಲಿಸಲು ಹೆಚ್ಚಿನ ಅವಧಿ ಬೇಕು ಎಂದು ಎಎಸ್‌ಐ ಮನವಿ ಮಾಡಿದೆ.

ಜ್ಞಾನವಾಪಿ ಮಸೀದಿಯ ಸಮೀಕ್ಷಾ ವರದಿಯನ್ನು ವಾರಾಣಸಿ ನ್ಯಾಯಾಲಯಕ್ಕೆ ಶುಕ್ರವಾರ (ನವೆಂಬರ್‌ 17) ಸಲ್ಲಿಸಬೇಕಿತ್ತು. ಆದರೆ, ಈಗ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಹೆಚ್ಚಿನ ಕಾಲಾವಕಾಶ ಕೇಳಿದೆ. ದೇವಾಲಯ ಇತ್ತು ಎಂಬುದರ ಕುರುಹುಗಳಾಗಿ ತ್ರಿಶೂಲ, ಸ್ವಸ್ತಿಕ್‌, ಗಂಟೆ, ಕಮಲದ ಆಕೃತಿ ಸೇರಿ ಹಲವು ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಹಾಗಾಗಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಲ್ಲಿಸುವ ಸಮೀಕ್ಷಾ ವರದಿಯು ಕುತೂಹಲ ಕೆರಳಿಸಿದೆ.

ಏನಿದು ಪ್ರಕರಣ?

ಜುಲೈ 21ರಂದು ವಾರಾಣಸಿ ನ್ಯಾಯಾಲಯವು ಮಸೀದಿಯಲ್ಲಿ ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಅದರಂತೆ ಮಸೀದಿಯಲ್ಲಿ ಐಎಸ್‌ಐ ಜುಲೈ 24ರಂದು ಸಮೀಕ್ಷೆ ಆರಂಭಿಸಿತ್ತು. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ ಸುಪ್ರೀಂ ಕೋರ್ಟ್‌ ಸಮೀಕ್ಷೆಗೆ ತಡೆಯಾಜ್ಞೆ ನೀಡಿದ್ದಲ್ಲದೆ, ಮುಸ್ಲಿಂ ಅರ್ಜಿದಾರರು ಅಲಹಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿತ್ತು. ಅದರಂತೆ, ಅಂಜುಮಾನ್‌ ಇಂತೇಜಾಮಿಯಾ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್‌ ಹೈಕೋರ್ಟ್‌, ಸಮೀಕ್ಷೆಗೆ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿತ್ತು. ಇದಾದ ಬಳಿಕ ಅಲಹಾಬಾದ್‌ ಹೈಕೋರ್ಟ್‌ ಸಮೀಕ್ಷೆಗೆ ಅನುಮತಿ ನೀಡಿತ್ತು. ಅಲಹಾಬಾದ್‌ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಕೊನೆಗೆ, ಸುಪ್ರೀಂ ಕೋರ್ಟ್‌ ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿತ್ತು.

ಇದನ್ನೂ ಓದಿ: Gyanvapi Survey: ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಮುಸ್ಲಿಮರಿಂದ ಬಹಿಷ್ಕಾರದ ಎಚ್ಚರಿಕೆ; ಮತ್ತೇಕೆ ವಿವಾದ?

ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ಕೋರಿ ಹಿಂದು ಮಹಿಳೆಯರು 2021ರಲ್ಲಿ ವಾರಾಣಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ ಬಳಿಕ ನ್ಯಾಯಾಲಯವು ಮಸೀದಿಯಲ್ಲಿ ವಿಡಿಯೊ ಸಮೀಕ್ಷೆಗೆ ಅನುಮತಿ ನೀಡಿತ್ತು. ಈಗಾಗಲೇ, ಜ್ಞಾನವಾಪಿ ಮಸೀದಿಯ ವಿಡಿಯೊ ಸಮೀಕ್ಷೆ ಮುಗಿದಿದ್ದು, ಸಮೀಕ್ಷೆ ವೇಳೆ ಶಿವಲಿಂಗ ಪತ್ತೆಯಾಗಿದೆ. ಶಿವಲಿಂಗ ಪತ್ತೆಯಾದ ಕಾರಣ ವೈಜ್ಞಾನಿಕ ಸಮೀಕ್ಷೆಗೆ ಮನವಿ ಮಾಡಲಾಗಿತ್ತು. ಅದರಂತೆ, ವೈಜ್ಞಾನಿಕ ಸಮೀಕ್ಷೆಯು ಮುಗಿದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version