ಪ್ರಯಾಗರಾಜ್: ಕಾಶಿ ವಿಶ್ವನಾಥ ದೇವಾಲಯಕ್ಕೆ ಅಂಟಿಕೊಂಡಂತಿರುವ ಜ್ಞಾನವಾಪಿ (Gyanvapi Case) ಮಸೀದಿಯಲ್ಲಿ ಪೂಜೆಗೆ ಅವಕಾಶ ಕೋರಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಜುಮಾನ್ ಇಂತೇಜಾಮಿಯಾ ಸಮಿತಿ ಸಲ್ಲಿಸಿದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಳ್ಳಿಹಾಕಿದೆ. ಇದರಿಂದ ಪೂಜೆಗೆ ಅವಕಾಶ ಕೋರಿ ಸಲ್ಲಿಸಿದ ಐವರು ಹಿಂದು ಮಹಿಳೆಯರಿಗೆ ಮುನ್ನಡೆ ಸಿಕ್ಕಂತಾಗಿದೆ.
ಜ್ಞಾನವಾಪಿ ಮಸೀದಿಯಲ್ಲಿರುವ ಶೃಂಗಾರ ಗೌರಿ ದೇವಾಲಯದಲ್ಲಿ ಪೂಜೆಗೆ ಅವಕಾಶ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ಅರ್ಹತೆ ಕುರಿತು ವಾರಾಣಸಿ ನ್ಯಾಯಾಲಯ ನೀಡಿದ ತೀರ್ಪು ಪ್ರಶ್ನಿಸಿ ಮಸೀದಿಯ ಸಮಿತಿಯು ಅಲಹಾಬಾದ್ ಹೈಕೋರ್ಟ್ ಮೊರೆಹೋಗಿತ್ತು. ಇದರಿಂದ ವಾರಾಣಸಿ ಸ್ಥಳೀಯ ನ್ಯಾಯಾಲಯದಲ್ಲಿ ಹಿಂದುಗಳ ಅರ್ಜಿ ವಿಚಾರಣೆ ಮುಂದುವರಿಯಲು ಸಾಧ್ಯವಾಗಲಿದೆ.
Allahabad High Court dismisses the Muslim side's plea challenging maintainability of five Hindu women worshippers' suit filed in Varanasi Court seeking the right to worship inside Gyanvapi mosque in Varanasi pic.twitter.com/TJUAXBElY5
— ANI (@ANI) May 31, 2023
ಅಲಹಾಬಾದ್ ಹೈಕೋರ್ಟ್ ತೀರ್ಪಿನ ಬಳಿಕ ಹಿಂದುಗಳ ಪರ ವಕೀಲ ಸುಭಾಷ್ ನಂದನ್ ಚತುರ್ವೇದಿ ಸುದ್ದಿಗಾರರಿಗೆ ಮಾತನಾಡಿದರು. “ನ್ಯಾಯಾಲಯದ ತೀರ್ಪು ಹಿಂದುಗಳಿಗೆ ಸಿಕ್ಕ ಮುನ್ನಡೆಯಾಗಿದೆ. ನಾವು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇವೆ. ವಾರಾಣಸಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಮುಂದುವರಿಯಲಿದೆ” ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Gyanvapi Case: ಜ್ಞಾನವಾಪಿ ಮಸೀದಿಯ ಶಿವಲಿಂಗ ಕಾರ್ಬನ್ ಡೇಟಿಂಗ್ ಪರೀಕ್ಷೆ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ತಡೆ
ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ಕೋರಿ ಹಿಂದು ಮಹಿಳೆಯರು 2021ರಲ್ಲಿ ವಾರಾಣಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ, ಜ್ಞಾನವಾಪಿ ಮಸೀದಿಯ ವಿಡಿಯೊ ಸಮೀಕ್ಷೆ ಮುಗಿದಿದ್ದು, ಸಮೀಕ್ಷೆ ವೇಳೆ ಶಿವಲಿಂಗ ಪತ್ತೆಯಾಗಿದೆ. ಅದರ ಕಾರ್ಬನ್ ಡೇಟಿಂಗ್ (ಕಾಲಾವಧಿ ಪರೀಕ್ಷೆ)ಗೆ ಸೂಚಿಸಬೇಕು ಎಂದು ಕೂಡ ಅರ್ಜಿ ಸಲ್ಲಿಸಲಾಗಿದೆ. ಆದರೆ, ಇದಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಅಲ್ಲದೆ, ಜ್ಞಾನವಾಪಿ ಮಸೀದಿಯ ಇಡೀ ಆವರಣದ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ (ASI) ನಿರ್ದೇಶನ ನೀಡಬೇಕು ಎಂದು ಹಿಂದುಗಳು ಸಲ್ಲಿಸಿದ ಅರ್ಜಿಯ ವಿಚಾರಣೆಗೆ ವಾರಾಣಸಿ ಜಿಲ್ಲಾ ನ್ಯಾಯಾಲಯ ಸಮ್ಮತಿ ಸೂಚಿಸಿದೆ. ಇದಕ್ಕೆ, ಮಸೀದಿ ಸಮಿತಿಯು ಆಕ್ಷೇಪಣೆಯನ್ನೂ ಸಲ್ಲಿಸಿದ್ದು, ಜುಲೈ 7ರಂದು ವಿಚಾರಣೆ ನಡೆಸುವುದಾಗಿ ಕೋರ್ಟ್ ತಿಳಿಸಿದೆ.