Site icon Vistara News

Gyanvapi Case: ಜ್ಞಾನವಾಪಿ ಮಸೀದಿ ವಿವಾದ: ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ವಿಚಾರಣೆಗೆ ಸುಪ್ರೀಂ ಸಮ್ಮತಿ

supreme court wealth redistribution

ನವದೆಹಲಿ: ವಾರಾಣಸಿಯ ಜ್ಞಾನವಾಪಿ (Gyanvapi Case) ಮಸೀದಿ ಸಂಕೀರ್ಣದ ವಿವಾದ ಇದೀಗ ಸುಪ್ರೀಂ ಕೋರ್ಟ್‌ (Supreme Court) ಮೆಟ್ಟಿಲೇರಿದೆ. ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಜ್ಞಾನವಾಪಿ ಮಸೀದಿ ಸಮಿತಿಯು ಸಲ್ಲಿಸಿದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಜ್ಞಾನವಾಪಿ ಮಸೀದಿ ಜಾಗದಲ್ಲಿ ಹಿಂದೂ ಪೂಜಾ ಮಂದಿರವನ್ನು ಮರುಸ್ಥಾಪಿಸಲು ಕೋರಿರುವ ಅರ್ಜಿಯ ವಿಚಾರಣೆಗೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಅವಕಾಶವನ್ನು ಪ್ರಶ್ನಿಸಲಾಗಿದ್ದು, ವಿವಾದದ ಬಗ್ಗೆ ಬಾಕಿ ಇರುವ ಇತರ ವಿಷಯಗಳ ವಾದವನ್ನೂ ಆಲಿಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ. ಸಿವಿಲ್ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಮುಸ್ಲಿಂ ಸಮಿತಿ ಕಡೆಯವರು ಸಲ್ಲಿಸಿದ್ದ ಅರ್ಜಿಗಳನ್ನು ಈ ಹಿಂದೆ ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿತ್ತು. ಜ್ಞಾನವಾಪಿ ಮಸೀದಿಯ ವ್ಯವಹಾರಗಳನ್ನು ನಿರ್ವಹಿಸುವ ಅಂಜುಮನ್ ಇಂಟೆಜಾಮಿಯಾ ಮಸೀದಿ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿತ್ತು.

ಕಳೆದ ವರ್ಷದ ಡಿಸೆಂಬರ್‌ 19ರಂದು ವಾರಾಣಸಿಯ ಜ್ಞಾನವಾಪಿ ಮಸೀದಿ ಇರುವ ಜಾಗದಲ್ಲಿ ಹಿಂದೂ ಪೂಜಾ ಮಂದಿರವನ್ನು ಮರುಸ್ಥಾಪಿಸಲು ಕೋರಿರುವ ಅರ್ಜಿಯ ವಿಚಾರಣೆಗೆ ಅಲಹಾಬಾದ್‌ ಹೈಕೋರ್ಟ್ ಅಸ್ತು ಎಂದಿತ್ತು. ಈ ಅರ್ಜಿಯ ವಿಚಾರಣೆಯನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಮುಸ್ಲಿಮರ ಐದು ಅರ್ಜಿಗಳನ್ನು ವಜಾ ಮಾಡಿತ್ತು. ಈ ತೀರ್ಪಿನೊಂದಿಗೆ ನ್ಯಾಯಾಲಯವು 1991ರ ಪ್ರಕರಣದ ವಿಚಾರಣೆಯನ್ನು ಅಂಗೀಕರಿಸಿತು.

ಜ್ಞಾನವಾಪಿ ಮಸೀದಿಯ ಸಮಗ್ರ ಸಮೀಕ್ಷೆಯನ್ನು ನಡೆಸಲು ವಾರಣಾಸಿ ನ್ಯಾಯಾಲಯ ಏಪ್ರಿಲ್ 8, 2021ರಂದು ನೀಡಿದ ಆದೇಶವನ್ನು ಅಂಜುಮನ್ ಇಂತೇಝಾಮಿಯಾ ಮಸಾಜಿದ್ ಸಮಿತಿ (AIMC) ಮತ್ತು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಸಲ್ಲಿಸಿದ ಅರ್ಜಿಗಳು ವಿರೋಧಿಸಿದ್ದವು.

ತಗಾದೆಯ ಇತಿಹಾಸ

1991ರಲ್ಲಿ ವಾರಣಾಸಿ ನ್ಯಾಯಾಲಯದಲ್ಲಿ ʼಲಾರ್ಡ್ ಆದಿ ವಿಶ್ವೇಶ್ವರ ವಿರಾಜಮಾನʼ ಪರವಾಗಿ ವಿವಾದಿತ ಸ್ಥಳವನ್ನು ಹಿಂದೂಗಳಿಗೆ ಪೂಜೆಗಾಗಿ ಹಸ್ತಾಂತರಿಸುವಂತೆ ಮೊಕದ್ದಮೆ ಹೂಡಲಾಯಿತು. ಸೋಮನಾಥ ವ್ಯಾಸ್, ರಾಮನಾರಾಯಣ ಶರ್ಮಾ ಮತ್ತು ಹರಿಹರ ಪಾಂಡೆ ಅವರು ಪ್ರಕರಣಗಳನ್ನು ದಾಖಲಿಸಿದರು. 1991ರ ಪೂಜಾ ಸ್ಥಳಗಳ ಕಾಯಿದೆಯ ಪ್ರಕಾರ ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲಾಗದು ಎಂದು ಮುಸ್ಲಿಂ ಕಡೆಯವರು ವಾದಿಸಿದರು. ಈ ವಿವಾದವು ಸ್ವಾತಂತ್ರ್ಯಕ್ಕೆ ಮುಂಚಿನದ್ದಾಗಿರುವುದರಿಂದ, ಪೂಜಾ ಸ್ಥಳಗಳ ಕಾಯಿದೆಯು ಜ್ಞಾನವಾಪಿ ವಿವಾದಕ್ಕೆ ಅನ್ವಯಿಸುವುದಿಲ್ಲ ಎಂದು ಹಿಂದೂ ಕಡೆಯವರು ವಾದಿಸಿದರು.

ಈಗ ವಜಾ ಆದ ಐದು ಅರ್ಜಿಗಳಲ್ಲಿ ಮೂರು, 1991ರಲ್ಲಿ ವಾರಣಾಸಿ ನ್ಯಾಯಾಲಯದಲ್ಲಿ ಸಲ್ಲಿಸಲಾದ ಪ್ರಕರಣದ ನಿರ್ವಹಣೆಗೆ ಸಂಬಂಧಿಸಿದವು. ಇನ್ನುಳಿದ ಎರಡು ಅರ್ಜಿಗಳು ಎಎಸ್‌ಐನ ಸಮೀಕ್ಷೆ ಆದೇಶದ ವಿರುದ್ಧ ಸಲ್ಲಿಸಲ್ಪಟ್ಟವು.

ಇದನ್ನೂ ಓದಿ: Gyanvapi Case : ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ; ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಹಿಂದೂಗಳಿಗೆ ಮೇಲುಗೈ

Exit mobile version