ವಾರಾಣಸಿ: ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಹಿಂದೂಗಳ ಅರ್ಜಿಯ ವಿಚಾರಣೆಗೆ ಅಂಗೀಕರಿಸಿರುವ ವಾರಾಣಸಿ ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಅಂಜುಮಾನ್ ಇಂತಜಾಮಿಯಾ ಮಸೀದಿ ಸಮಿತಿ (Gyanvapi Masjid Case) ನಿರ್ಧರಿಸಿದೆ.
ಕಾಶಿ ವಿಶ್ವನಾಥನ ದೇವಾಲಯದ ಸಮೀಪದ ಜ್ಞಾನವಾಪಿ ಮಸೀದಿಗೆ ಒತ್ತಿಕೊಂಡಂತೆ ಇರುವ ಶೃಂಗಾರ ಗೌರಿ ಮೂರ್ತಿ ಇರುವ ಸ್ಥಳದಲ್ಲಿ ನಿತ್ಯ ಪೂಜೆಗೆ ಅವಕಾಶ ಕೋರಿ ಹಿಂದೂಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ವಾರಾಣಸಿ ಜಿಲ್ಲಾ ನ್ಯಾಯಾಲಯವು ಸೋಮವಾರ ಸಮ್ಮತಿಸಿದೆ. ಹಾಗೂ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ನಡೆಸಲಿದೆ. ಆದರೆ ಇದನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಅಂಜುಮಾನ್ ಇಂತಜಾಮಿಯಾ ಮಸೀದಿ ಸಮಿತಿಯು ತೀರ್ಮಾನಿಸಿದೆ.
” ಜಿಲ್ಲಾ ನ್ಯಾಯಾಧೀಶರ ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದುʼʼ ಎಂದು ಮಸೀದಿ ಸಮಿತಿ ಪರ ವಕೀಲರಾದ ಮೆರಾಕುದ್ದೀನ್ ಸಿದ್ಧಿಕಿ ಹೇಳಿದರು.
ಜಿಲ್ಲಾ ನ್ಯಾಯಾಧೀಶ ಎ.ಕೆ ವಿಶ್ವೇಶ್ ಅವರನ್ನು ಒಳಗೊಂಡಿದ್ದ ಏಕ ಸದಸ್ಯ ಪೀಠವು ಜ್ಞಾನವಾಪಿ-ಶೃಂಗಾರ ಗೌರಿ ವಿವಾದಕ್ಕೆ ಸಂಬಂಧಿಸಿ ಸೋಮವಾರ ಈ ತೀರ್ಪನ್ನು ಪ್ರಕಟಿಸಿತು. ಮುಸ್ಲಿಂ ಬಣದ ಪರ ಅಂಜುಮಾನ್ ಇಂತಜಾಮಿಯಾ ಸಮಿತಿಯು ಕೋರ್ಟ್ ಮೆಟ್ಟಿಲೇರಿದೆ. ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ವಾರಾಣಸಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಹಿಂದೂಗಳ ಸಂಭ್ರಮ: ವಾರಾಣಸಿ ಜಿಲ್ಲಾ ನ್ಯಾಯಾಲಯವು ಸೋಮವಾರ ನೀಡಿದ ತೀರ್ಪಿಗೆ ಹಿಂದೂಗಳ ಪರ ಅರ್ಜಿದಾರರಲ್ಲಿ ಒಬ್ಬರಾಗಿರುವ ಮಂಜು ವ್ಯಾಸ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಕೋರ್ಟ್ ತೀರ್ಪು ಪ್ರಕಟವಾಗುತ್ತಿದ್ದಂತೆ ಹಿಂದೂಗಳು ಸಂಭ್ರಮದಿಂದ ಸಿಹಿ ಹಂಚಿದರು.
” ಇದು ಹಿಂದು ಸಮುದಾಯಕ್ಕೆ ಸಿಕ್ಕಿದ ಗೆಲುವು. ಸೆಪ್ಟೆಂಬರ್ 22ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ. ಈ ತೀರ್ಪಿನಿಂದ ಜ್ಞಾನವಾಪಿ ದೇವಾಲಯಕ್ಕೆ ಶಿಲಾನ್ಯಾಸ ನೆರವೇರಿಸಿದಂತಾಗಿದೆ. ಈ ಸಂದರ್ಭದಲ್ಲಿ ಜನತೆ ಶಾಂತಿ ಕಾಪಾಡಬೇಕುʼʼ ಎಂದು ಮತ್ತೊಬ್ಬ ಅರ್ಜಿದಾರರಾದ ಸೋಹನ್ ಲಾಲ್ ಆರ್ಯ ಹೇಳಿದರು.
ಇದನ್ನೂ ಓದಿ: Gyanvapi Masjid Case | ಅರ್ಜಿ ವಿವಾರಣೆಗೆ ವಾರಾಣಸಿ ಕೋರ್ಟ್ ಗ್ರೀನ್ ಸಿಗ್ನಲ್, ಹಿಂದೂ ಪರ ವಾದಿಗಳಿಗೆ ಜಯ