ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯದ ಬಳಿ ಇರುವ ಜ್ಞಾನವಾಪಿ ಮಸೀದಿಯಲ್ಲಿ ವೈಜ್ಞಾನಿಕ ಸಮೀಕ್ಷೆಗೆ (Gyanvapi Survey) ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಈಗಾಗಲೇ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ISI) ಅಧಿಕಾರಿಗಲೂ ಮೂರು ದಿನ ಸಮೀಕ್ಷೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಮಸೀದಿ ಸಮಿತಿ ಸದಸ್ಯರು ಸಮೀಕ್ಷೆಯನ್ನೇ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.
ಜ್ಞಾನವಾಪಿ ಮಸೀದಿಯಲ್ಲಿ ಸೋಮವಾರ (ಆಗಸ್ಟ್ 7) ಬೆಳಗ್ಗೆ 10.30ಕ್ಕೆ ನಾಲ್ಕನೇ ದಿನದ ಸಮೀಕ್ಷೆ ಕೈಗೊಳ್ಳಲು ಐಎಸ್‌ಐ ಅಧಿಕಾರಿಗಳು ಸಜ್ಜಾಗಿದ್ದಾರೆ. ಇದರ ಬೆನ್ನಲ್ಲೇ ಮಸೀದಿ ಸಮಿತಿಯು ಬಹಿಷ್ಕಾರದ ಬೆದರಿಕೆ ಹಾಕಿದೆ. ಜ್ಞಾನವಾಪಿ ಮಸೀದಿಯಲ್ಲಿ ಸಮೀಕ್ಷೆ ವೇಳೆ ಹಿಂದು ದೇವರ ವಿಗ್ರಹ, ತ್ರಿಶೂಲ, ಸ್ವಸ್ತಿಕ ಚಿಹ್ನೆ ಸೇರಿ ಹಲವು ವಸ್ತುಗಳು ಪತ್ತೆಯಾಗಿವೆ ಎಂಬುದು ಕೇವಲ ವದಂತಿಯಾಗಿದೆ. ಇಂತಹ ವದಂತಿಗಳು ಹೀಗೆಯೇ ಹರಡಿದರೆ ನಾವು ಸಮೀಕ್ಷೆಯನ್ನು ಬಹಿಷ್ಕರಿಸುತ್ತೇವೆ ಎಂದು ಮಸೀದಿ ಸಮಿತಿ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಮಸೀದಿ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಿಯೇ ವೈಜ್ಞಾನಿಕ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಸಮೀಕ್ಷೆ ವೇಳೆ ವಿಗ್ರಹ, ಸ್ವಸ್ತಿಕ ಚಿಹ್ನೆ, ತ್ರಿಶೂಲ ಪತ್ತೆಯಾಗಿರುವ ಕುರಿತು ಮಾಧ್ಯಮಗಳು ವರದಿ ಮಾಡಿವೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ಚರ್ಚೆಗಳು ಶುರುವಾಗಿವೆ. ದೇವಾಲಯ ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂಬ ಚರ್ಚೆ ಆರಂಭವಾಗಿದೆ. ಹಾಗಾಗಿ, ಮಸೀದಿ ಸಮಿತಿಯು ಇಂತಹ ವರದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಆದಾಗ್ಯೂ, ಸಮೀಕ್ಷೆ ವೇಳೆ ಏನೇನು ಪತ್ತೆಯಾಗಿದೆ ಎಂಬ ಕುರಿತು ಐಎಸ್‌ಐ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: Gyanvapi Survey: ಜ್ಞಾನವಾಪಿ ಮಸೀದಿ ಸಮೀಕ್ಷೆ; ತ್ರಿಶೂಲ ಜತೆಗೆ ದೇಗುಲದ ಅಸ್ತಿತ್ವಕ್ಕೆ ಸಿಕ್ಕ ಕುರುಹುಗಳು ಏನೇನು?
ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ಕೋರಿ ಹಿಂದು ಮಹಿಳೆಯರು 2021ರಲ್ಲಿ ವಾರಾಣಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ ಬಳಿಕ ನ್ಯಾಯಾಲಯವು ಮಸೀದಿಯಲ್ಲಿ ವಿಡಿಯೊ ಸಮೀಕ್ಷೆಗೆ ಅನುಮತಿ ನೀಡಿತ್ತು. ಈಗಾಗಲೇ, ಜ್ಞಾನವಾಪಿ ಮಸೀದಿಯ ವಿಡಿಯೊ ಸಮೀಕ್ಷೆ ಮುಗಿದಿದ್ದು, ಸಮೀಕ್ಷೆ ವೇಳೆ ಶಿವಲಿಂಗ ಪತ್ತೆಯಾಗಿದೆ. ಶಿವಲಿಂಗ ಪತ್ತೆಯಾದ ಕಾರಣ ವೈಜ್ಞಾನಿಕ ಸಮೀಕ್ಷೆಗೆ ಮನವಿ ಮಾಡಲಾಗಿತ್ತು. ಅದಕ್ಕೀಗ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.