Site icon Vistara News

Hacking Alert: ʼಹ್ಯಾಕಿಂಗ್‌ ಅಲರ್ಟ್‌ʼಗೂ ಮುನ್ನ ʼಆ್ಯಪಲ್ ಸಾಧನದಲ್ಲಿ ಗಂಭೀರ ದೋಷʼದ ಎಚ್ಚರಿಕೆ ನೀಡಿದ್ದ ಕೇಂದ್ರ

Ashwini Vaishnaw

ಹೊಸದಿಲ್ಲಿ: ಆ್ಯಪಲ್ ಕಂಪನಿಯು (Apple company) ಹಲವು ವಿಪಕ್ಷ ನಾಯಕರಿಗೆ ನೀಡಿರುವ ʼಐಫೋನ್‌ ಹ್ಯಾಕಿಂಗ್‌ ಎಚ್ಚರಿಕೆʼಗೂ (Iphone Hacking Alert) ಹಲವು ದಿನಗಳ ಮುನ್ನವೇ ಐಫೋನ್‌ ಉತ್ಪನ್ನಗಳಲ್ಲಿ ʼಗಂಭೀರ ದೋಷʼದ ಕುರಿತು ಕೇಂದ್ರ ಸರ್ಕಾರದ ಸಮಿತಿ ಆ್ಯಪಲ್ ಕಂಪನಿಗೆ ಸೂಚನೆ ನೀಡಿತ್ತು ಎಂದು ತಿಳಿದುಬಂದಿದೆ.

ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ಸಂಸದರ ಐಫೋನ್‌ಗಳನ್ನು (iPhones) ಹ್ಯಾಕ್‌ (Hacking Alert) ಮಾಡುತ್ತಿದೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ಸೇರಿ ಹಲವು ಸಂಸದರು ಆರೋಪಿಸಿದ್ದರು. ಇದರ ಬೆನ್ನಲ್ಲೇ, ಪ್ರತಿಪಕ್ಷಗಳ ಆರೋಪವನ್ನು ತಳ್ಳಿ ಹಾಕಿರುವ ಕೇಂದ್ರ ಸರ್ಕಾರವು, ಪ್ರಕರಣವನ್ನು ತನಿಖೆಗೆ ಆದೇಶಿಸಿತ್ತು.

“ಸರ್ಕಾರಿ ಪ್ರಾಯೋಜಿತ ಹ್ಯಾಕರ್‌ಗಳು ನಿಮ್ಮ ಐಫೋನ್‌ಗಳನ್ನು ಹ್ಯಾಕ್‌ ಮಾಡಲು ಯತ್ನಿಸುತ್ತಿದ್ದಾರೆ. ನಿಮ್ಮ ಆ್ಯಪಲ್‌ ಐಡಿಯನ್ನು ಬಳಸಿಕೊಂಡು ದೂರದಲ್ಲಿದ್ದುಕೊಂಡು ನಿಮ್ಮ ಫೋನ್‌ಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಿಮ್ಮ ಸೂಕ್ಷ್ಮ ಮಾಹಿತಿ, ಕ್ಯಾಮೆರಾ, ಕರೆ ಡಿಟೇಲ್ಸ್‌ ಸೇರಿ ಹಲವು ಮಾಹಿತಿಗೆ ಕನ್ನ ಹಾಕುವ ಸಾಧ್ಯತೆ ಇದೆ‌, ಎಂಬುದಾಗಿ ಆ್ಯಪಲ್‌ ಕಂಪನಿಯಿಂದ ಅಲರ್ಟ್‌ ಮೆಸೇಜ್‌ ಬಂದಿದೆ” ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಟ್ವೀಟ್‌ ಮಾಡಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಮಹುವಾ ಮೊಯಿತ್ರಾ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ ಕೇಂದ್ರ ಸರ್ಕಾರದ ಕಂಪ್ಯೂಟರ್ ಎಮರ್ಜೆನ್ಸಿ ರಿಸರ್ಚ್ ಟೀಮ್, ಅಥವಾ CERT, ತಾನು ಅಕ್ಟೋಬರ್ 27ರಂದು ನೀಡಿದ್ದ ಎಚ್ಚರಿಕೆ ಸೂಚನೆಯನ್ನು ಬಹಿರಂಗಪಡಿಸಿದೆ. “ಆಪಲ್ ಉತ್ಪನ್ನಗಳಲ್ಲಿ ಹಲವು ದೌರ್ಬಲ್ಯಗಳು ವರದಿಯಾಗಿವೆ. ಇದು ಹ್ಯಾಕರ್‌ಗಳಿಗೆ ನಿಮ್ಮ ಸಾಧನಗಳಲ್ಲಿರುವ ಸೂಕ್ಷ್ಮ ಮಾಹಿತಿಯನ್ನು ಪ್ರವೇಶಿಸಲು, ಹಾನಿಕರ ಕೋಡ್ ಅನ್ನು ಕಾರ್ಯಗತಗೊಳಿಸಲು, ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡಲು, ಅಥೆಂಟಿಕೇಶನ್‌ ತಪ್ಪಿಸಲು, ಬೇಹುಗಾರಿಕೆ ಮಾಡಲು ಅನುಮತಿಸುತ್ತದೆ” ಎಂದು ಈ ಸೂಚನೆ ತಿಳಿಸಿತ್ತು.

ಈ ದೋಷಗಳನ್ನು ಸರಿಪಡಿಸಲು ಒಂಬತ್ತು Apple ಸಾಫ್ಟ್‌ವೇರ್ ಅಪ್‌ಡೇಟ್‌ಗೆ ಸಲಹೆ ನೀಡಲಾಗಿತ್ತು. ಜೊತೆಗೆ ಐಫೋನ್‌ ಕಂಪನಿಯ ಆಪರೇಟಿಂಗ್ ಸಿಸ್ಟಮ್‌ಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ತಾಂತ್ರಿಕ ಬೆಂಬಲ ಪುಟಗಳನ್ನು ಒದಗಿಸಲು ತಿಳಿಸಿತ್ತು.

ʼʼAppleನ ಕಾರ್ಯಾಚರಣೆ ವ್ಯವಸ್ಥೆಗಳ ಕೆಲವು ಆವೃತ್ತಿಗಳು ದುರ್ಬಲವಾಗಿದ್ದು, ಹ್ಯಾಕರ್‌ಗಳಿಗೆ ಗುರಿಯಾಗಬಹುದು. iOS ಮತ್ತು iPadOSಗಳಲ್ಲಿ 17.1ಕ್ಕಿಂತ ಮೊದಲಿನ ಆವೃತ್ತಿಗಳು, MacOS Sonomaನ 14.1ಕ್ಕಿಂತ ಮೊದಲಿನ ಆವೃತ್ತಿಗಳು, ವೆಂಚುರಾದ 13.6.1ಕ್ಕಿಂತ ಮೊದಲಿನ ಆವೃತ್ತಿಗಳು, ಮಾಂಟೆರಿಯ 12.7.1ಕ್ಕಿಂತ ಮೊದಲಿನ ಆವೃತ್ತಿಗಳು, ಮತ್ತು ಸಫಾರಿಯ (ಆಪಲ್‌ನ ಇಂಟರ್ನೆಟ್ ಬ್ರೌಸರ್) 17.1ಕ್ಕಿಂತ ಮೊದಲಿನ ಆವೃತ್ತಿಗಳು ದುರ್ಬಲವಾಗಿವೆʼʼ ಎಂದು CERT ಹೇಳಿತ್ತು.

ಐಟಿ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ (Rajeev chandrashekhar) ಅವರು ಈ ಕುರಿತು ಮಾತನಾಡಿ, ಆ್ಯಪಲ್ ಇತರ ದೇಶಗಳಲ್ಲಿಯೂ ತನ್ನ ಬಳಕೆದಾರರಿಗೆ ಈ ಸೂಚನೆಗಳನ್ನು ಕಳುಹಿಸಿದೆ ಎಂದಿದ್ದಾರೆ. ಐಟಿ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಕೂಡ, ಆ್ಯಪಲ್ 150 ದೇಶಗಳಲ್ಲಿ ಅಂತಹ ಅಧಿಸೂಚನೆಗಳನ್ನು ಹೊರಡಿಸಿದೆ ಎಂದಿದ್ದಾರೆ. ಇವುಗಳು ಅಪೂರ್ಣ, ಅಪರಿಪೂರ್ಣ ಡೇಟಾವನ್ನು ಆಧರಿಸಿವೆ ಮತ್ತು ಇದರಲ್ಲಿ ಕೆಲವು ಸುಳ್ಳು ಎಚ್ಚರಿಕೆಗಳಾಗಿವೆ ಎಂದಿದ್ದಾರೆ.

ಇದನ್ನೂ ಓದಿ: Hacking Alert: ಕೇಂದ್ರ ಸರ್ಕಾರದಿಂದ ಸಂಸದರ ಫೋನ್‌ ಹ್ಯಾಕ್‌? ಏನಿದು ಕೇಸ್?

Exit mobile version