ನವದೆಹಲಿ: 2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಸರಣಿ ದಾಳಿ (Mumbai Terror Attack) ರೂವಾರಿ, ಲಷ್ಕರೆ ತಯ್ಬಾ ಉಗ್ರ ಸಂಘಟನೆ (Lashkar-e-Taiba) ಸಂಸ್ಥಾಪಕರಲ್ಲಿ ಒಬ್ಬನಾದ ಹಫೀಜ್ ಅಬ್ದುಲ್ ಸಲಾಮ್ ಭುಟ್ಟಾವಿ (Hafiz Abdul Salam Bhuttavi) ಸಾವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯು (United Nations Security Council) ದೃಢಪಡಿಸಿದೆ. ಈತನು 2023ರ ಮೇ ತಿಂಗಳಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾನೆ ಎಂದು ಭದ್ರತಾ ಮಂಡಳಿ ತಿಳಿಸಿದೆ.
“2023ರ ಮೇ 29ರಂದು ಹಫೀಜ್ ಅಬ್ದುಲ್ ಸಲಾಮ್ ಭುಟ್ಟಾವಿಯು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುರಿಡ್ಕೆಯಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾನೆ. ಈತ ಪಾಕಿಸ್ತಾನದ ಕಸ್ಟಡಿಯಲ್ಲಿರುವಾಗಲೇ ಸಾವಿಗೀಡಾಗಿದ್ದಾನೆ” ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ತಿಳಿಸಿದೆ. ಈತನು ಲಷ್ಕರೆ ತಯ್ಬಾ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದು, ಹಫೀಜ್ ಸಯೀದ್ ಬಂಧನಕ್ಕೀಡಾದಾಗಲೆಲ್ಲ ಉಗ್ರ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದ. 2008ರ ನವೆಂಬರ್‌ನಲ್ಲಿ ಮುಂಬೈ ದಾಳಿ ಬಳಿಕ ಈತನನ್ನು ಬಂಧಿಸಲಾಗಿತ್ತು” ಎಂದು ಮಾಹಿತಿ ನೀಡಿದೆ.
Hafiz Abdul Salam Bhuttavi, founding member of Lashkar-e-Tayyiba (LeT) and deputy to Hafiz Saeed is 'Confirmed Deceased' pic.twitter.com/wFLKZAnOhw
— ANI (@ANI) January 11, 2024
“ಲಷ್ಕರೆ ತಯ್ಬಾ, ಜಮಾತ್ ಉದ್ ದವಾ ಉಗ್ರ ಸಂಘಟನೆಗಳ ನೇತೃತ್ವ ವಹಿಸಿಕೊಂಡಿದ್ದ ಹಫೀಜ್ ಸಯೀದ್ 2002ರಲ್ಲಿ ಬಂಧನಕ್ಕೀಡಾದ ಬಳಿಕ ಇಸ್ಲಾಂ ಧರ್ಮ ಬೋಧಕನಾಗಿದ್ದ ಹಫೀಜ್ ಅಬ್ದುಲ್ ಸಲಾಮ್ ಭುಟ್ಟಾವಿಗೆ ಸಂಘಟನೆಯ ಉಸ್ತುವಾರಿ ನೀಡಲಾಗಿತ್ತು. ಈತನು 2008ರ ಮುಂಬೈ ದಾಳಿಯ ಪಿತೂರಿದಾರರಲ್ಲಿ ಒಬ್ಬನಾಗಿದ್ದಾನೆ. ದಾಳಿಗೂ ಮುನ್ನ ಉಗ್ರರ ತಲೆಯಲ್ಲಿ ಮೂಲಭೂತವಾದವನ್ನು ತುಂಬಿ, ದಾಳಿಯ ವೇಳೆ ಮೃತಪಟ್ಟರೆ ಹುತಾತ್ಮನಾದಂತೆ ಎಂಬುದಾಗಿ ನಂಬಿಸಿ, ಉಗ್ರರನ್ನು ದಾಳಿಗೆ ಸಿದ್ಧಗೊಳಿಸಿದ್ದ” ಎಂದು ವಿಶ್ವಸಂಸ್ಥೆ ತಿಳಿಸಿದೆ.
ಮುಂಬೈ ದಾಳಿ ಕರಾಳ ಅಧ್ಯಾಯ
ಮುಂಬೈನಲ್ಲಿರುವ ತಾಜ್ ಹೋಟೆಲ್ಗಳ ಮೇಲೆ 2008ರಲ್ಲಿ ನಡೆದ ಉಗ್ರ ದಾಳಿ ಇಂದಿಗೂ ನಮ್ಮ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದಿದೆ. ಅದನ್ನೊಂದು ಕರಾಳ ದಿನವೆಂದೇ ಪರಿಗಣಿಸಲಾಗುತ್ತದೆ. ಅಂದು ಲಷ್ಕರೆ ತಯ್ಬಾ ಸಂಘಟನೆಯ 10 ಉಗ್ರರು ಸಮುದ್ರ ಮಾರ್ಗದ ಮೂಲಕ ಮುಂಬಯಿಗೆ ಬಂದು ಗುಂಡಿನ ದಾಳಿ ನಡೆಸಿದ್ದರು. ನವೆಂಬರ್ 26ರಿಂದ 29ರವರೆಗೆ ಭದ್ರತಾ ಪಡೆಗಳು-ಉಗ್ರರ ನಡುವಿನ ಹೋರಾಟ ನಡೆದಿತ್ತು. ಇದರಲ್ಲಿ ಆರು ಮಂದಿ ಅಮೇರಿಕದವರು ಸೇರಿ 166 ಮಂದಿ ಮೃತಪಟ್ಟಿದ್ದರು. ಹಲವು ಯೋಧರು ಕೂಡ ಹುತಾತ್ಮರಾಗಿದ್ದಾರೆ. ಆದಾಗ್ಯೂ, ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಪಾಕಿಸ್ತಾನ ಯಾವುದೇ ರೀತಿಯಲ್ಲಿ ಭಾರತಕ್ಕೆ ಸಹಕಾರ ನೀಡಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ